Advertisement

Web Exclusive: ಶ್ರೀಲಂಕಾದ ಗೆಲುವು ಆಕಸ್ಮಿಕವಲ್ಲ.. ಅದೊಂದು ಹೋರಾಟ

03:06 PM Sep 15, 2022 | ಕೀರ್ತನ್ ಶೆಟ್ಟಿ ಬೋಳ |

ಆರ್ಥಿಕ ಸಂಕಷ್ಟದಿಂದ ಕಂಗಟ್ಟಿದ್ದ ದ್ವೀಪ ರಾಷ್ಟ್ರ ಶ್ರೀಲಂಕಾವು ಅದ್ಹೇಗೋ ಆಸ್ಟ್ರೇಲಿಯಾ ಸರಣಿಯನ್ನು ಯಶಸ್ವಿಯಾಗಿ ಆತಿಥ್ಯ ಮಾಡಿತ್ತು. ಆದರೆ ಇನ್ನೇನೋ ಏಷ್ಯಾ ಕಪ್ ಹತ್ತಿರ ಬಂತು ಎನ್ನುವಾಗ ಪರಿಸ್ಥಿತಿ ಬಿಗಡಾಯಿಸಿತ್ತು. ತಾನೇ ಆತಿಥ್ಯ ವಹಿಸಬೇಕಿದ್ದ ಕೂಟ ಯುಎಇ ಪಾಲಾಗಿದ್ದು ಒಂದು ರೀತಿಯ ಅವಮಾನವೇ. ಅಲ್ಲಿಂದ ಸುಮಾರು ಒಂದು ತಿಂಗಳ ತರುವಾಯ ಏಷ್ಯಾ ಕಪ್ ಕೂಟದ ಮೊದಲ ಪಂದ್ಯ. ಕ್ರಿಕೆಟ್ ಶಿಶು ಎಂದು ಕರೆಯಲ್ಪಡುತ್ತಿದ್ದ ಅಫ್ಘಾನಿಸ್ಥಾನ ವಿರುದ್ಧ ಸೋಲು. ಅದೂ ಹೀನಾಯವಾಗಿ. ಆದರೆ ಕ್ರಿಕೆಟ್ ಲೋಕಕ್ಕೆ ದೊಡ್ಡ ಅಚ್ಚರಿ ಏನಲ್ಲ.  ಜಯವರ್ಧನೆ, ಸಂಗಕ್ಕಾರ ವಿದಾಯ ಹೇಳಿದ ಬಳಿಕ ಕ್ರಿಕೆಟ್ ಕೂಡಾ ಲಂಕಾಗೆ ವಿದಾಯ ಹೇಳಿದೆ ಎಂದು ವಿಶ್ಲೇಷಕರು ಕುಹಕವಾಡಿದ್ದರು. ಅದಾಗಿ ಎರಡು ವಾರಕ್ಕೆ ಲಂಕಾ ಚಾಂಪಿಯನ್. ಹೌದು, ಯಾರೂ ಊಹಿಸದ ರೀತಿಯಲ್ಲಿ ಸತತ ಐದು ಪಂದ್ಯ ಗೆದ್ದ ಸಿಂಹಳೀಯರು ಏಷ್ಯಾ ಕಪ್ ಗೆದ್ದಿದ್ದರು. ಆದರೆ ಲಂಕಾದ ಗೆಲುವು ಆಕಸ್ಮಿಕವಲ್ಲ.. ಅದೊಂದು ಹೋರಾಟ.

Advertisement

ಎರಡು ವಾರಗಳ ಹಿಂದೆ ನಾವು ಈ ಬಾರಿ ಕಪ್ ಗೆಲ್ಲುತ್ತೇವೆ ಎಂದು ಲಂಕಾದ ಯಾವುದೇ ಆಟಗಾರ ಹೇಳಿದ್ದರೆ ಬಹುಶಃ ಶ್ರೀಲಂಕಾದ ಜನರೇ ಮುಸಿಮುಸಿ ನಗುತ್ತಿದ್ದರು. ಕೂಟದ ಆರಂಭದಲ್ಲಿ ಲಂಕಾ ತಂಡ ಈ ಬಾರಿ ಎಲ್ಲಿಯವರೆಗೆ ಸಾಗಬಹುದು ಎಂದು ಸ್ಟಾರ್ ಸ್ಪೋರ್ಟ್ಸ್ ಪೋಲ್ ಮಾಡಿದಾಗ, ಅಲ್ಲಿದ್ದ ಚಾಂಪಿಯನ್ ಎಂಬ ಆಯ್ಕೆಗೆ ಒಬ್ಬನೇ ಒಬ್ಬ ವೋಟ್ ಮಾಡಿರಲಿಲ್ಲ ಎಂದರೇ ನೀವು ನಂಬಲೇಬೇಕು. ಇದು ಜನರ ತಪ್ಪಲ್ಲ ಬಿಡಿ. ಯಾಕೆಂದರೆ ಶ್ರೀಲಂಕಾ ಇತ್ತೀಚಿನ ದಿನಗಳಲ್ಲಿ ಒಂದು ಚಾಂಪಿಯನ್ ತಂಡವಾಗಿ ಆಡಲೇ ಇಲ್ಲ.

2015-16ರ ಬಳಿಕ ಶ್ರೀಲಂಕಾ ಕ್ರಿಕೆಟ್ ನಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ನಡೆದವು. ತಂಡದ ಆಧಾರವಾಗಿದ್ದ ಕುಮಾರ ಸಂಗಕ್ಕಾರ, ಮಹೇಲ ಜಯವರ್ಧನೆಯಂತಹ ಪ್ರಮುಖರು ವಿದಾಯ ಹೇಳಿದ್ದರು. ಆದರೆ ಹಳಬರ ಜಾಗಕ್ಕೆ ಸಮರ್ಥ ಹೊಸಬರನ್ನು ತಂದು ಕೂರಿಸುವಲ್ಲಿ ಲಂಕಾ ಕ್ರಿಕೆಟ್ ಮಂಡಳಿ ವಿಫಲವಾಯಿತು. ಹೀಗಾಗಿ ಸತತ ಸರಣಿ ಸೋಲುಗಳು ಎದುರಾದವು. ಕೆಲವು ಉತ್ತಮ ಆಟಗಾರರು ಬಂದರೂ ಸ್ಥಿರ ಪ್ರದರ್ಶನ ತೋರಲಿಲ್ಲ. ನಾಯಕತ್ವ ಬದಲಾವಣೆ ಹಲವು ಬಾರಿ ನಡೆಯಿತು. ಲಂಕಾ ತಂಡದಲ್ಲಿ ಈಗ ಯಾರಿದ್ದಾರೆ ಎಂದರೆ ಸರಿಯಾಗಿ 2-3 ಹೆಸರು ಹೇಳುವುದು ಕಷ್ಟ ಎನ್ನುವ ಪರಿಸ್ಥಿತಿಗೆ ಬಂದಿತ್ತು. ಆಗಲೇ ನಾಯಕನ ಸ್ಥಾನಕ್ಕೆ ಅವನು ಬಂದಿದ್ದು. ಅವನೇ ಲಂಕಾದ ಆಪದ್ಭಾಂದವ ದಾಸುನ್ ಶನಕ.

ಈಗ ಏಷ್ಯಾ ಕಪ್ ವಿಚಾರಕ್ಕೆ ಬರೋಣ. ಟಿ20 ವಿಶ್ವಕಪ್ ಗೆ ನೇರ ಅರ್ಹತೆ ಪಡೆಯದ ಲಂಕಾ ಏಷ್ಯಾ ಕಪ್ ಕೂಟಕ್ಕಾಗಿ ದುಬೈಗೆ ಬಂದಿಳಿದಾಗ ಬೆನ್ನಲ್ಲಿ ಸಾಲು ಸಾಲು ಸೋಲುಗಳಿದ್ದವು. 11 ಪಂದ್ಯಗಳಲ್ಲಿ 9ರಲ್ಲಿ ಸೋತು ದುಬೈಗೆ ಬಂದಿದ್ದರು. ಹೆಚ್ಚೆಂದರೆ ಸೂಪರ್ ಫೋರ್ ಹಂತದವರೆಗೆ ಇವರ ಆಟ ಎಂದು ಹೆಚ್ಚಿನವರು ಅಂದಾಜು ಹಾಕಿದ್ದರು. ಗಾಯದ ಮೇಲೆ ಬರೆ ಎಂಬಂತೆ ಲಂಕಾದ ಪ್ರಮುಖ ಆಟಗಾರರ ಗಾಯದ ಸಮಸ್ಯೆಯ ಕಾರಣದಿಂದ ತಂಡದಿಂದ ಹೊರಬಿದ್ದಿದ್ದರು. ಅವಿಷ್ಕಾ ಫರ್ನಾಂಡೊ, ದುಷ್ಮಂತ ಚಮೀರಾ, ಲಹಿರು ಕುಮಾರ ಮತ್ತು ಕುಸಾಲ್ ಪೆರೇರಾ ರಂತಹ ಅನುಭವಿಗಳಿಲ್ಲದ ತಂಡವನ್ನು ಕಟ್ಟಿಕೊಂಡು ದುಬೈ ವಿಮಾನ ಏರಿದ್ದರು ನಾಯಕ ಶನಕ ಮತ್ತು ಕೋಚ್ ಸಿಲ್ವರ್ ವುಡ್.

ವಾನಿಂದು ಹಸರಂಗ ಬಿಟ್ಟರೆ ಈ ಲಂಕಾ ತಂಡದಲ್ಲಿ ಯಾವುದೇ ಸ್ಟಾರ್ ಆಟಗಾರ ಇರಲಿಲ್ಲ.  ಆದರೆ ಗೆಲ್ಲಲು ಸ್ಟಾರ್ ಗಿರಿ ಬೇಡ; ಕೌಶಲ ಮತ್ತು ಗಟ್ಟಿ ಗುಂಡಿಗೆ ಸಾಕು ಎಂದು ಸಾಬೀತು ಪಡಿಸಿದೆ ಈ ಯುವ ಪಡೆ. ಕ್ರಿಕೆಟ್ ಗಿಂತ ಹೆಚ್ಚಾಗಿ ತಮ್ಮ ಅತಿರೇಕದಿಂದಲೇ ಪ್ರಚಾರ ಪಡೆಯುವ ಬಾಂಗ್ಲಾ ತಂಡದ ಡೈರೆಕ್ಟರ್, ಲಂಕಾ ಪಂದ್ಯಕ್ಕೂ ಮುನ್ನ ಹೀಯಾಳಿಸಿದ್ದರು. ‘ನಮ್ಮಲ್ಲಿ ಕನಿಷ್ಠ ಇಬ್ಬರಾದರೂ ವಿಶ್ವದರ್ಜೆ ಆಟಗಾರರಿದ್ದಾರೆ, ನಿಮ್ಮಲ್ಲಿ (ಲಂಕಾ) ಒಬ್ಬರೂ ಇಲ್ಲ’ ಎಂದು ಕಾಲೆಳೆದಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಯುವ ಸ್ಪಿನ್ನರ್ ಮಹೇಶ್ ತೀಕ್ಷಣ “ನಮ್ಮಲ್ಲಿ ವಿಶ್ವ ದರ್ಜೆ ಬೌಲರ್ ಗಳು ಇಲ್ಲದೆ ಇರಬಹುದು, ಆದರೆ ನಾವು ಹನ್ನೊಂದು ಮಂದಿ ಸಹೋದರರು ಇದ್ದೇವೆ” ಎಂದಿದ್ದ. ಈ ಒಗ್ಗಟ್ಟು, ಗಟ್ಟಿ ಮನಸ್ಥಿತಿಯಿಂದಲೇ ಆಡಿದ್ದರು ಲಂಕನ್ನರು.

Advertisement

ಹೊಸದಾಗಿ ತಂಡ ಸೇರಿದ್ದ ಕೋಚ್ ಸಿಲ್ವರ್ ವುಡ್ ಗೆ ಸಮಯ ತೆಗೆದುಕೊಂಡು ಪ್ರತಿಯೊಬ್ಬನನ್ನೂ ಅರ್ಥ ಮಾಡಿಕೊಳ್ಳುವಷ್ಟು ಕಾಲಾವಕಾಶ ಇರಲಿಲ್ಲ. ಆದರೆ ತಂಡಕ್ಕೇನು ಬೇಕು ಎಂದು ಬೇಗನೇ ಅರಿತ ಅವರು ನಾಯಕನ ಜತೆ ಸೇರಿ ಕೆಲವು ಬದಲಾವಣೆ ತಂದರು. ಆರಂಭಿಕನ ಸ್ಥಾನಕ್ಕೆ ದನುಷ್ಕ ಗುಣತಿಲಕ ಬದಲಿಗೆ ಕುಸಾಲ್ ಮೆಂಡಿಸ್ ಗೆ ಜವಾಬ್ದಾರಿ ನೀಡಲಾಯಿತು.  ಅಲ್ಲದೆ ಸಾಂಪ್ರದಾಯಿಕ ಬ್ಯಾಟಿಂಗ್ ಶೈಲಿಯ ಪತ್ತುನ್ ನಿಸ್ಸಾಂಕಗೆ ಬೆಂಬಲ ನೀಡಿ ಟಿ20 ಯಲ್ಲಿ ಹೆಚ್ಚು ಆಡಿಸಿದರು. ಮೂರು ವರ್ಷದ ಹಿಂದೆ ಆಡಲು ಕ್ರಿಕೆಟ್ ಸ್ಪೈಕ್ ಕೂಡಾ ಹೊಂದಿರದ ಅನನುಭವಿ ದಿಲ್ಶನ್ ಮಧುಶನಕಗೆ ಮೊದಲ ಓವರ್ ಎಸೆಯುಲು ನೀಡುವಂತಹ ದಿಟ್ಟ ನಿರ್ಧಾರವನ್ನು ಕೈಗೊಂಡರು. ಅಂದಹಾಗೆ ಶನಕ- ಸಿಲ್ವರ್ ವುಡ್ಮಾಡಿದ ನಿರ್ಧಾರಗಳೆಲ್ಲಾ ಕೈ ಹಿಡಿದಿದೆ ಎಂದಲ್ಲ, ಆದರೆ ತಪ್ಪುಗಳಿಂದ ಕಲಿತು ಮುಂದೆ ಸಾಗಿದ್ದಾರೆ. ಸಾಧನೆಯ ಪಯಣದಲ್ಲಿ ಇದುವೇ ಮುಖ್ಯ ತಾನೆ.

ಎಷ್ಟು ಬೇಕು ಅಷ್ಟೇ ಮಾತನಾಡುವ, ಸಂಕಟದ ಸಮಯದಲ್ಲಿ ಬ್ಯಾಟರ್ ಆಗಿ ತಂಡದ ಕೈ ಹಿಡಿಯುವ ದಾಸುನ್ ಶನಕ ಅವರದ್ದು ಈ ಲಂಕಾ ಪುನರುಜ್ಜೀವನ ಪುಸ್ತಕದಲ್ಲಿ ಮೇರು ಅಧ್ಯಾಯ. ತಂಡದ ಎಲ್ಲಾ ಆಟಗಾರರೊಂದಿಗೆ ಬೆರೆಯುವ ಶನಕ, ಬೌಲರ್ ಗಳ ಕಿವಿ ಕಚ್ಚುವಂತೆ ಪಾಠ ಮಾಡುವುದಿಲ್ಲ. ಬೌಲರ್ ಗಳ ಯೋಜನೆ, ಪ್ಲ್ಯಾನ್ ಗಳನ್ನು ಸಂಪೂರ್ಣವಾಗಿ ಕೇಳಿ, ಅಗತ್ಯವಿದ್ದಲ್ಲಿ ತನ್ನ ಸಲಹೆ ನೀಡುವ ಶನಕ, ಈ ಬಳಗವನ್ನು ಒಂದು ತಂಡವಾಗಿ ಗೆಲ್ಲಿಸಿದ್ದಾರೆ. ಸತತ ಸೋಲುಗಳ ನಡುವೆ ತಂಡವನ್ನು ಒಂದು ಗುರಿಯೆಡೆಗೆ ಮುನ್ನಡೆಸುವುದು ಅಷ್ಟು ಸುಲಭದ ಮಾತಲ್ಲ. ಶನಕ ಇಲ್ಲಿ ಗೆದ್ದಿದ್ದಾರೆ.

ಸತತ ಸೋಲುಗಳು, ದೇಶದೊಳಗಿನ ಸಂಕಷ್ಟ, ಪ್ರಮುಖ ಆಟಗಾರರ ಗೈರು ಹೀಗೆ ಹಲವು ಹಿನ್ನಡೆಗಳೊಂದಿಗೆ ಬಂದ ಲಂಕಾ ತಂಡವು ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋಲನುಭವಿಸಿತ್ತು. ಆದರೆ ನಂತರ ನಡೆದಿದ್ದು ಮಾತ್ರ ಒಂದು ವೀರೋಚಿತ ಹೋರಾಟ. ಲೀಗ್ ಹಂತದ ಮತ್ತೆರಡು ಪಂದ್ಯ ಗೆದ್ದ ಲಂಕಾ ಸೂಪರ್ ಫೋರ್ ನ ಮೂರಕ್ಕೆ ಮೂರು ಪಂದ್ಯ ಗೆದ್ದರು. ಅರಬ್ಬರ ನಾಡಿನಲ್ಲಿ ನಿರ್ಣಾಯಕವಾದ ಟಾಸ್ ಗೆಲ್ಲುವುದರಿಂದ ಲಂಕಾ ಗೆಲ್ಲುತ್ತಿದೆ ಎನ್ನುವವರಿಗೆ ಶನಕ ಫೈನಲ್ ನಲ್ಲಿ ಉತ್ತರ ಕೊಟ್ಟರು. ಫೇವರೇಟ್ ಆಗಿದ್ದ ಪಾಕಿಸ್ಥಾನ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಲಂಕಾ, ಪಂದ್ಯ ಗೆದ್ದು ಇದು ಲಕ್ ಅಲ್ಲ; ಪರಿಶ್ರಮ ಎಂದು ಜಗತ್ತಿಗೆ ಸಾರಿತು. ಗಟ್ಟಿ ನಿರ್ಧಾರ, ಸರಿಯಾದ ಯೋಜನೆ, ಅದರ ಸುತ್ತ ಕೆಲಸ ಮಾಡಿದರೆ ಅಸಾಧ್ಯವನ್ನೂ ಸಾಧಿಸಿ ತೋರಿಸಬಹುದು ಎಂದು ಲಂಕಾ ತಂಡ ತೋರಿಸಿದೆ. ಅದಕ್ಕೆ ಅಲ್ಲವೇ ಹಿಂದಿನವರು ಹೇಳಿದ್ದು, ‘ಸಾಧಿಸಿದರೆ ಸಬಳವನ್ನೂ ನುಂಗಬಹುದು’ ಎಂದು.

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next