Advertisement

ಮಲ್ಪೆ ಬೀಚ್‌ನಲ್ಲಿ ಜೀವರಕ್ಷಣೆಗೆ ಬೇಕು ರಕ್ಷಣಾ ಸೌಕರ್ಯಗಳು 

01:00 AM Mar 08, 2019 | Team Udayavani |

ಮಲ್ಪೆ: ಪ್ರವಾಸಿ ತಾಣವಾದ ಮಲ್ಪೆ ಬೀಚ್‌ ಮತ್ತು ಸೈಂಟ್‌ಮೇರೀಸ್‌ನಲ್ಲಿ ಇದೀಗ ನಿತ್ಯ ಜನಸಂದಣಿ. ಅದರಲ್ಲೂ ವಾರಾಂತ್ಯ ಗಿಜಿಗುಡುತ್ತಿರುತ್ತದೆ. ನೀರಿಗಿಳಿವವರ ಸಂಖ್ಯೆ ಹೆಚ್ಚಾಗಿದ್ದು, ಅಪಾಯವೂ ಇರುವುದರಿಂದ ಜೀವರಕ್ಷಣೆ ಮಾಡುವ ಲೈಫ್‌ಗಾರ್ಡ್‌ಗಳಿಗೆ ಹೆಚ್ಚಿನ ರಕ್ಷಣಾ ಸೌಕರ್ಯ ಬೇಕಾಗಿದೆ. 

Advertisement

ಎಚ್ಚರಿಕೆ ಮಾತು ನಿರ್ಲಕ್ಷ
ಪ್ರವಾಸಿಗರಲ್ಲಿ ಬಹುತೇಕ ಮಂದಿ ಮಲೆನಾಡು ಪ್ರದೇಶದವರು, ಈಜು ಬರದವರು ಸಮುದ್ರದಲ್ಲಿ ಆಟಕ್ಕೆ ಮುಂದಾಗುತ್ತಾರೆ. 

ಲೈಫ್‌ಗಾರ್ಡ್‌ಗಳು ಎಷ್ಟೇ ಎಚ್ಚರಿಕೆ ನೀಡಿದರೂ ಅವರ ಮಾತುಗಳನ್ನು ನಿರ್ಲಕ್ಷಿಸಿ ಅಪಾಯ ತಂದುಕೊಳ್ಳುತ್ತಾರೆ. ಈ ಎಚ್ಚರಿಕೆಗಳಿಗೆ ಸ್ಪಂದಿಸದೇ ಇರುವುದೇ ಅನಾಹುತಕ್ಕೆ ಕಾರಣವಾಗುತ್ತಿದೆ. ವಾರಾಂತ್ಯಗಳಲ್ಲಿ ಹೆಚ್ಚುವರಿ ಗಾರ್ಡ್‌ಗಳನ್ನು ನೇಮಿಸುವುದು, ಪರಿಶೀಲನೆಗಳನ್ನು ನಡೆಸಬೇಕಾಗಿದೆ.   

ಆಧುನಿಕ ಸೌಕರ್ಯಗಳು ಬೇಕು  
ಅಪಾಯಕ್ಕೆ ಸಿಲುಕಿದ ಪ್ರವಾಸಿಗರನ್ನು ರಕ್ಷಿಸುವಲ್ಲಿ ತಮ್ಮ ಜೀವದ ಹಂಗು ತೊರೆದು ರಕ್ಷಣೆ ಮಾಡುವ ಇವರು ನಿಜವಾದ ಆಪದ್ಭಾಂಧವರು. ಸಮುದ್ರದ ಆಳ, ಆಪಾಯಕಾರಿ ಸ್ಥಳ, ಸಮುದ್ರದಲ್ಲಿ ಅಪಾಯದಲ್ಲಿ ಸಿಲುಕಿದವರನ್ನು ಹೇಗೆ ರಕ್ಷಣೆ ಮಾಡಬೇಕೆನ್ನುವ ತಂತ್ರಗಾರಿಕೆ ಇವರಿಗೆ ಗೊತ್ತಿದ್ದರೂ ಅತ್ಯಧುನಿಕ ರಕ್ಷಣಾ ಸೌಕರ್ಯಗಳ ಕೊರತೆ ಇದೆ. ಸದ್ಯ ರೋಪ್‌, ಜಾಕೆಟ್‌ ಮತ್ತು ರಿಂಗ್‌ ಮಾತ್ರ ಇವರ ಬಳಿ ಇದೆ. ಅಗತ್ಯದ ಸಂದರ್ಭದಲ್ಲಿ ಜಲಸಾಹಸ ಕ್ರೀಡೆ ಸೇವೆ ನೀಡುತ್ತಿರುವ ಸ್ಥಳೀಯರ ನೆರವನ್ನು ಪಡೆದುಕೊಳ್ಳಲಾಗುತ್ತಿದೆ.  

ಜೆಟ್‌ಸ್ಕಿ ಸ್ಕೂಟರ್‌ ಅಗತ್ಯ 
ಸಮುದ್ರದಲ್ಲಿ ಓಡಾಡುವ ಜೆಟ್‌ಸ್ಕಿ ಸ್ಕೂಟರ್‌ ಬೇಡಿಕೆ ಇಟ್ಟಿದ್ದರೂ ಇದುವರೆಗೂ ಸಿಕ್ಕಿಲ್ಲ. ರೆಸ್ಕೂéಬೋಟ್‌ ಅಥವಾ ಜೆಟ್‌ಸ್ಕಿ ಸ್ಕೂಟರಿನ ವ್ಯವಸ್ಥೆ ಇದ್ದಲ್ಲಿ ಸಮುದ್ರದಲ್ಲಿ ಮುಳುಗುತ್ತಿದ್ದರ ಸಮೀಪ ಕ್ಷಣ ಮಾತ್ರದಲ್ಲಿ ತೆರಳಿ ಸುಲಭದಲ್ಲಿ ರಕ್ಷಣೆ ಮಾಡಲು ಸಾಧ್ಯವಾಗುತ್ತದೆ.  

Advertisement

4 ವರ್ಷದಲ್ಲಿ 150ಕ್ಕೂ ಹೆಚ್ಚು ಜೀವ ರಕ್ಷಣೆ
ಕಳೆದ ಹಲವು ವರ್ಷಗಳಿಂದ ಅದೆಷ್ಟೋ ಜೀವಗಳನ್ನು ಜೀವರಕ್ಷಕರು ರಕ್ಷಿಸಿದ್ದಾರೆ. ಬೆಳಗ್ಗೆ 7ರಿಂದ ರಾತ್ರಿ 10ರವರೆಗೆ ಇವರು ಕಾರ್ಯ ನಿರ್ವಹಿಸುತ್ತಾರೆ. ಕಳೆದ 4 ವರ್ಷಗಳಲ್ಲಿ ಮಲ್ಪೆ ಬೀಚ್‌ನಲ್ಲಿ 118, ಸೈಂಟ್‌ಮೇರಿ ದ್ವೀಪದಲ್ಲಿ 38 ಮಂದಿ ಪ್ರವಾಸಿಗರನ್ನು ರಕ್ಷಿಸಿದ್ದಾರೆ. ಪ್ರತ್ಯೇಕ ಘಟನೆಗಳಲ್ಲಿ ಬೀಚ್‌ನಲ್ಲಿ ಮೂವರು, ದ್ವೀಪದಲ್ಲಿ  ಇಬ್ಬರು ಸಾವನ್ನಪ್ಪಿದ್ದಾರೆ.

ಅಪಾಯ ತಪ್ಪಿಸಬಹುದು
ನೀರಿಗಿಳಿದು ಆಟವಾಡುತ್ತಾ ಕೆಲವರು ಮುಂದೆ ಮುಂದೆ ಹೋಗುತ್ತಾರೆ, ವಿಸಿಲ್‌ ಹಾಕಿ ಕರೆದರೂ ಕೇಳಿಸಿಕೊಳ್ಳುವುದಿಲ್ಲ. ಜೆಟ್‌ಸ್ಕಿ ಸ್ಕೂಟರ್‌ ಇದ್ದಲ್ಲಿ ಎಲ್ಲ ಕಡೆ ರೌಂಡ್ಸ್‌ ಹೊಡೆದು ಮೇಲೆ ಕಳುಹಿಸಬಹುದು ಅಪಾಯ ತಪ್ಪಿಸಬಹುದು. 
– ಮಧುಕರ್‌,  ಲೈಫ್‌ಗಾರ್ಡ್‌, ಮಲ್ಪೆ ಬೀಚ್‌

Advertisement

Udayavani is now on Telegram. Click here to join our channel and stay updated with the latest news.

Next