Advertisement

ರಾಜ್ಯದಲ್ಲಿ 25 ಕೋಟಿ ಸಸಿ ನೆಡಲು ಒಡಂಬಡಿಕೆ 

06:00 AM Sep 10, 2017 | Team Udayavani |

ಬೆಂಗಳೂರು: ಮುಂದಿನ ಪೀಳಿಗೆಗೆ ಶುದ್ಧ ನೀರು, ಆಹಾರ ಕಲ್ಪಿಸಲು  ಜಲಮೂಲ ಸಂರಕ್ಷಣೆಗಾಗಿ ದೇಶವ್ಯಾಪಿ ನದಿಗಳನ್ನು ರಕ್ಷಿಸಿ ಅಭಿಯಾನ ಆರಂಭಿಸಿರುವ ಸದ್ಗುರು ಜಗ್ಗಿ ವಾಸುದೇವ್‌ ಸಂಸ್ಥಾಪಕರಾಗಿರುವ ಇಶಾ ಫೌಂಡೇಷನ್‌ ಸಹಯೋಗದಲ್ಲಿ ರಾಜ್ಯದಲ್ಲಿ 25 ಕೋಟಿ ಸಸಿಗಳನ್ನು ನೆಟ್ಟು ಬೆಳೆಸುವ ಸಂಬಂಧ ರಾಜ್ಯ ಸರ್ಕಾರ ಒಡಂಬಡಿಕೆ ಮಾಡಿಕೊಂಡಿದೆ.

Advertisement

ಅಭಿಯಾನಕ್ಕೆ ಅಗತ್ಯವಿರುವ ಎಲ್ಲ ಸಹಕಾರ ನೀಡುವುದಾಗಿ ರಾಜ್ಯ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಸರ್ಕಾರದ ಪರವಾಗಿ ಕೇಂದ್ರ ಸಚಿವರಾದ ಅನಂತಕುಮಾರ್‌, ಡಿ.ವಿ.ಸದಾನಂದಗೌಡ ಭರವಸೆ ನೀಡಿದರು. ಜನಸಮೂಹದ ಒಳಿತಿಗೆ ಕೈಗೊಂಡ ಅಭಿಯಾನಕ್ಕೆ ಪಕ್ಷಭೇದ ಮರೆತು ಬೆಂಬಲ ನೀಡಿದ ಮುಖಂಡರಿಗೆ ಸದ್ಗುರು ಅಭಿನಂದನೆ ಸಲ್ಲಿಸಿದರು.

ಸದ್ಗುರು ಅವರು ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ ಆರಂಭಿಸಿರುವ ನದಿಗಳನ್ನು ರಕ್ಷಿಸಿ ಅಭಿಯಾನವು ಬೆಂಗಳೂರು ತಲುಪಿತ್ತು. ಆ ಹಿನ್ನೆಲೆಯಲ್ಲಿ ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಮಂದಿ ನದಿಗಳನ್ನು ಉಳಿಸುವ ಅಭಿಯಾನದಲ್ಲಿ ಪಾಲ್ಗೊಂಡು ಜಲಮೂಲ ಸಂರಕ್ಷಣೆಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

ಸದ್ಗುರು ಜಗ್ಗಿ ವಾಸುದೇವ್‌ ಮಾತನಾಡಿ, ನದಿಗಳನ್ನು ಉಳಿಸುವ ಪ್ರಯತ್ನ 25 ವರ್ಷಗಳ ಹಿಂದೆ ಆರಂಭವಾಗಿದ್ದರೆ ಈಗಿನ ಪರಿಶ್ರಮದ ಶೇ.10ರಷ್ಟು ಶ್ರಮದಲ್ಲೇ ಯಶಸ್ವಿಯಾಗಿ ನಿರ್ವಹಿಸಬಹುದಾಗಿತ್ತು. ಸದ್ಯ ನದಿಗಳ ಸಂರಕ್ಷಣೆಗೆ ಅಭಿಯಾನ ಆರಂಭವಾಗಿದ್ದು, ಇದಕ್ಕೆ ಸಹಕಾರ ನೀಡಲು ಪಕ್ಷಭೇದ ಮರೆತು ಮುಖಂಡರು ಒಂದಾಗಿರುವುದು ಅಭಿನಂದನೀಯ. ಸಣ್ಣ ಪುಟ್ಟ ವಿಚಾರಗಳಿಗೆ ಕಿತ್ತಾಡುವವರು, ಒಳ್ಳೆಯ ಕಾರ್ಯಕ್ಕೆ ಒಂದಾಗುವುದೇ ನಮ್ಮ ದೇಶದ ವಿಶೇಷ. ಅಭಿಯಾನದಡಿ 16 ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಳ್ಳುತ್ತಿದ್ದು, ಇದು ರಾಜಕೀಯ ಪ್ರಬುದ್ಧತೆ ಹೆಚ್ಚಾಗಿರುವುದರ ಸಂಕೇತ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಅಭಿಯಾನವನ್ನು ಎಲ್ಲೆಡೆ ಕಟ್ಟುನಿಟ್ಟಾಗಿ ಪಾಲಿಸಿದರೆ 10ರಿಂದ 15 ವರ್ಷದೊಳಗೆ ಪೂರ್ಣಗೊಳಿಸಬಹುದು. ನಂತರದ 5- 10 ವರ್ಷಗಳಲ್ಲಿ ನದಿಗಳಲ್ಲಿ ನೀರಿನ ಪ್ರಮಾಣ ಶೇ.15ರಿಂದ ಶೇ.20ರಷ್ಟು ಹೆಚ್ಚಾಗುವುದನ್ನು ಕಾಣಬಹುದು. ಅ.2ರಂದು ಕೇಂದ್ರ ಸರ್ಕಾರಕ್ಕೆ ಕರಡು ಸಲ್ಲಿಸಲಾಗುವುದು. ನಂತರ ಅದಕ್ಕೆ ಅಗತ್ಯ ಸಲಹೆ, ಶಿಫಾರಸು ಸಲ್ಲಿಸಬಹುದು ಎಂದು ಹೇಳಿದರು.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ,ಇಂದು ನಾವೆಲ್ಲಾ ಮಾಡಲೇಬೇಕಾದ ಮಹತ್ವಾಕಾಂಕ್ಷಿ ಕಾರ್ಯವನ್ನು ಸದ್ಗುರು ಅವರು ಸಮಯೋಚಿತವಾಗಿ ಆರಂಭಿಸಿದ್ದಾರೆ. ಸದ್ಗುರು ಅವರು ನಮ್ಮೂರಿನವರೆಂಬುದು ಅಭಿಮಾನದ ಸಂಗತಿ. ಅವರ ಪ್ರಯತ್ನ ಹೆಮ್ಮೆ ತರುವ ಕೆಲಸ. ಕಾವೇರಿ ನೀರು ಕುಡಿದ ನಮ್ಮೆಲ್ಲರ ಮೇಲೆ ಕಾವೇರಿಯನ್ನು ಉಳಿಸುವ ಜವಾಬ್ದಾರಿ ಇದೆ ಎಂದು ಹೇಳಿದರು.

ರಾಜ್ಯದ ನದಿಗಳ ದಡದಲ್ಲಿ 25 ಕೋಟಿ ಸಸಿ ನೆಡುವ ಸಂಬಂಧ ಇಶಾ ಫೌಂಡೇಶನ್‌ನೊಂದಿಗೆ ರಾಜ್ಯ ಸರ್ಕಾರ ಒಡಂಬಡಿಕೆ ಮಾಡಿಕೊಂಡಿದೆ. ನದಿ ಸಂರಕ್ಷಣೆಗೆ ಈಗಲೇ ಮುಂದಾಗದಿದ್ದರೆ ಮುಂದೆ ನೀರಿಗಾಗಿ ಹಾಹಾಕಾರ ಉಂಟಾಗಲಿದೆ. ಇದಕ್ಕಿಂತ ಜನಪರವಾದ ಬೇರೊಂದು ಕೆಲಸವಿಲ್ಲ. ನದಿಗಳ ಎರಡೂ ಬದಿ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿಯಿದ್ದರೆ ಸಸಿ ಬೆಳೆಸಲಾಗುವುದು. ಖಾಸಗಿ ಭೂಮಿಯಿದ್ದರೆ ತೋಟಗಾರಿಕೆ ಬೆಳೆ ಬೆಳೆಯುವಂತೆ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುವುದು. ಅರಣ್ಯ ಇಲಾಖೆಯಿಂದ ಪ್ರತಿ ವರ್ಷ 6ರಿಂದ 8 ಕೋಟಿ ಸಸಿ ನಡೆಸಲಾಗುತ್ತದೆ. ಆದರೆ ಅಷ್ಟು ಸಸಿ ಉಳಿಯುವ ಖಾತರಿಯಿಲ್ಲ ಎಂದು ಹೇಳಿದರು.

ಕೇಂದ್ರ ಸಚಿವ ಅನಂತಕುಮಾರ್‌ ಮಾತನಾಡಿ, ಕೇಂದ್ರ ಸರ್ಕಾರ ಸಂಪೂರ್ಣವಾಗಿ ಅಭಿಯಾನದ ಜೊತೆಯಿರಲಿದೆ. ಗಂಗೆಯಿಂದ ಕಾವೇರಿಗೆ ಎರಡೂ ಕಡೆ ಹಸಿರು ವಲಯ ನಿರ್ಮಿಸುವ ಸಂಕಲ್ಪ ತೊಟ್ಟು ಆಧುನಿಕ ಭಗೀರಥರೆನಿಸಿದ್ದಾರೆ ಎಂದು ಶ್ಲಾ ಸಿದರು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ,  ನಾನು ಕೇಂದ್ರ ಸಚಿವನಾಗಿ ಇಲ್ಲಿಗೆ ಬಾರದೆ ಕಾರ್ಯಕರ್ತನಾಗಿ ಬಂದಿದ್ದೇನೆ. ಆಡಳಿತ ಯಂತ್ರಗಳಿಂದ ಸಾಧ್ಯವಾಗದ ಕಾರ್ಯಕ್ಕೆ ಸದ್ಗುರು ಚಾಲನೆ ನೀಡಿರುವುದು ಶ್ಲಾಘನೀಯ ಎಂದು ಹೇಳಿದರು. ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌, ಸದ್ಗುರು ಅವರು ಸವಾಲಿನ ಕೆಲಸಕ್ಕೆ ಕೈಹಾಕಿದ್ದು, ಅದನ್ನು ಸಾಕಾರಗೊಳಿಸಲು ಎಲ್ಲರೂ ಶ್ರಮಿಸಬೇಕಿದೆ ಎಂದು ಹೇಳಿದರು.

ರಾಜ್ಯದಲ್ಲಿ 25 ಕೋಟಿ ಸಸಿ ನೆಡುವ ಸಂಬಂಧ ಒಡಂಬಡಿಕೆ ಪತ್ರಗಳನ್ನು ಮುಖ್ಯಮಂತ್ರಿಗಳು ಹಾಗೂ ಸದ್ಗುರು ವಿನಿಮಯ ಮಾಡಿಕೊಂಡರು. ಸಚಿವ ಕೆ.ಜೆ.ಜಾರ್ಜ್‌, ಹಿರಿಯ ಗಾಯಕಿ ಉಷಾ ಉತ್ತುಪ್‌ ಇತರರು ಪಾಲ್ಗೊಂಡಿದ್ದರು. ನದಿಗಳನ್ನು ಉಳಿಸಿ ರ್ಯಾಲಿಯು ಬೆಂಗಳೂರಿನ ಕಾರ್ಯಕ್ರಮದ ನಂತರ ಚೆನ್ನೈನತ್ತ ಪ್ರಯಾಣ ಬೆಳೆಸಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟ ಪುನೀತ್‌ ರಾಜ್‌ಕುಮಾರ್‌ ಮಾತನಾಡಿ, ನದಿಗಳನ್ನು ಉಳಿಸುವಂತಹ ಅಭಿಯಾನ ಕೈಗೊಂಡಿರುವ ಅದ್ಬುತ ಕಾರ್ಯದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು. ಅಭಿಯಾನದ ನಾಲ್ಕು ಸಾಲುಗಳನ್ನು ಹೇಳುವ ಮೂಲಕ ಮಾತಿಗೆ ವಿರಾಮ ಹೇಳಿದರು.

ಮೆಚ್ಚುಗೆಗೆ ಪಾತ್ರವಾದ ಕಲಾಕೃತಿ
ಕಲಾವಿದ ವಿಲಾಸ್‌ ನಾಯಕ್‌ ಅವರು ನದಿಗಳ ವಿನಾಶ ತಂದೊಡ್ಡುವ ದಯನೀಯ ಸ್ಥಿತಿ ಹಾಗೂ ಸಂರಕ್ಷಣೆ ತರುವ ಸಮೃದಿಯನ್ನು ಬಿಂಬಿಸುವ ಕಲೆಯನ್ನು ಕುಂಚದಲ್ಲಿ ರೂಪಿಸಿ ಮೆಚ್ಚುಗೆಗೆ ಪಾತ್ರರಾದರು. ತಾವು ಬಿಡಿಸಿದ ಕಲಾಕೃತಿ ಕುರಿತು ಮಾತನಾಡಿದ ಅವರು, ಸದ್ಯ ನಾವು ಅತಿವೃಷ್ಟಿ, ಅನಾವೃಷ್ಟಿ ಎರಡನ್ನೂ ನೋಡುತ್ತಿದ್ದೇವೆ. ಮೊದಲಿಗೆ ಬರದ ಸ್ಥಿತಿ ಚಿತ್ರಿಸಿ ನಂತರ ಸಮೃದ್ಧಿಯ ಬದಲಾವಣೆಯನ್ನು ಮೂಡಿಸಲಾಯಿತು. ಕ್ಯಾನ್ವಾಸ್‌ ಮೇಲೆ ಬದಲಾವಣೆಯಾದಷ್ಟು ತ್ವರಿತವಾಗಿ ನದಿಗಳ ಸಂರಕ್ಷಣೆ ಸಾಧ್ಯವಿಲ್ಲ. ಆದರೆ ಈಗ ಪ್ರಯತ್ನ ಆರಂಭವಾದರೆ 20- 25 ವರ್ಷಗಳ ಬಳಿಕ ಜನರಿಗೆ ಒಳಿತಾಗಲಿದೆ ಎಂದು ಹೇಳಿದರು.

ಟೀಕಾಕಾರರಿಗೆ ತಿರುಗೇಟು
ದೇಶದಲ್ಲಿ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸುವವರೇ ಹೆಚ್ಚಾಗಿದ್ದಾರೆ. ಪರಿಹಾರದಲ್ಲೂ ಸಮಸ್ಯೆಗಳನ್ನು ಹುಡುಕುವ ಪ್ರವೃತ್ತಿ ಸರಿಯಲ್ಲ. ಇಂತಹ ಆನ್‌ಲೈನ್‌ ಯೋಧರನ್ನು ಕಡೆಗಣಿಸುವುದು ಒಳಿತು ಎಂದು ಸದ್ಗುರು ಜಗ್ಗಿ ವಾಸುದೇವ್‌ ಮಾರ್ಮಿಕವಾಗಿ ಹೇಳಿದರು.

ದೇಶದ ಮಣ್ಣು ಮರುಳಾಗುತ್ತಿದ್ದರೆ ದುಬೈನಂತೆ ಕಾರ್ಯ ನಿರ್ವಹಿಸಬಹುದಲ್ಲಾ ಎಂದು ಕೆಲವರು ಹೇಳುತ್ತಾರೆ. ಹಾಗೆಂದು 130 ಕೋಟಿ ಜನರಿಗೆ ಆಹಾರವನ್ನು ಆಮದು ಮಾಡಿಕೊಳ್ಳಲು ಸಾಧ್ಯವೆ? ದೇಶದ ಜನತೆಗೆ ಅಗತ್ಯವಾದಷ್ಟು ಆಹಾರ ಉತ್ಪಾದಿಸಿಕೊಳ್ಳಲಾಗದ ಸ್ಥಿತಿ ನಿರ್ಮಾಣವಾದರೆ ಅದು ವಿನಾಶದತ್ತ ಕೊಂಡೊಯ್ಯುವುದರಲ್ಲಿ ಆಶ್ಚರ್ಯವಿಲ್ಲ ಎಂದು ತಿಳಿಸಿದರು.

ರ್ಯಾಲಿಯಿಂದ ನದಿ ಬರಲಿಲ್ಲ. ಮಿಸ್ಡ್ ಕಾಲ್‌ ನೀಡಿದರೂ ನದಿ ಬರಲಿಲ್ಲ ಎಂದು ಕೆಲ ಆನ್‌ಲೈನ್‌ ಯೋಧರು ಹೇಳುತ್ತಾರೆ. ಒಂದು ಸಣ್ಣ ಗುಂಪು ಪ್ರತಿ ಪರಿಹಾರದಲ್ಲೂ ಸಮಸ್ಯೆ ಹುಡುಕುತ್ತಲೇ ಇರುತ್ತದೆ. ಇದನ್ನು ಕಡೆಗಣಿಸಬೇಕು ಎಂದು ಹೇಳಿದರು.

ನದಿಗಳ ಸಂರಕ್ಷಣೆ ಎಂದರೆ ನಮ್ಮನೇ ನಾವು ರಕ್ಷಿಸಿಕೊಂಡಂತೆ. ಯಾವುದೇ ಪ್ರಯತ್ನಕ್ಕೆ ಜನ ಸ್ಪಂದನೆ ದೊರೆತಾಗ ಬದಲಾವಣೆ ಸಾಧ್ಯ. ಹಾಗಾಗಿ ಈ ಉತ್ತಮ ಅಭಿಯಾನಕ್ಕೆ ಎಲ್ಲರೂ ಸಹಕಾರ ನೀಡಬೇಕಿದೆ.
– ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಮೈಸೂರು ರಾಜವಂಶಸ್ಥ

Advertisement

Udayavani is now on Telegram. Click here to join our channel and stay updated with the latest news.

Next