Advertisement

ಸ್ಯಾಕ್ಸೋಫೋನ್ ಸಾಧಕಿಯರು; ಈ ಹೆಣ್ಮಕ್ಕಳ ಸಾಧನೆ ಎಲ್ಲರಿಗೂ ಮಾದರಿ!

11:07 AM Feb 22, 2017 | |

ಸ್ಯಾಕ್ಸೋಫೋನ್  ಸಂಗೀತ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಸ್ಯಾಕ್ಸೋಫೋನ್  ನಾದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ವಿವಿಧ ನಾದಗಳನ್ನು ಹೊರಡಿಸುವ ಹಲವಾರು ಮ್ಯೂಸಿಕಲ್‌ ಐಟಮ್‌ಗಳು ಮಾರುಕಟ್ಟೆಗೆ ಬಂದರೂ ಸ್ಯಾಕ್ಸೋಫೋನ್ ಗೆ ಅದರದ್ದೇ ಆದ ರಾಜ ಮರ್ಯಾದೆ ಇದೆ. ರಾಜರ ಕಾಲದಲ್ಲಿ ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ಸ್ಯಾಕ್ಸೋಫೋನ್  ಬಳಕೆಯಾಗುತ್ತಿತ್ತು. ಇತ್ತೀಚಿನ ದಿನಗಳಲ್ಲೂ ಅದಕ್ಕೆ ತುಂಬು ಗೌರವವಿದೆ. ಮದುವೆಗಳಲ್ಲಿ ಸ್ಯಾಕ್ಸೋಫೋನ್  ಇದ್ದರಂತೂ ಮದುವೆಯ ಮೆರುಗು ಇನ್ನಷ್ಟು ಹೆಚ್ಚುತ್ತದೆ. 
 
ಸ್ಯಾಕ್ಸೋಫೋನ್  ನುಡಿಸಬೇಕೆಂಬ ಆಸೆ ಎಲ್ಲರಲ್ಲೂ ಇರುತ್ತದೆ. ಆದರೆ ಅದು ಸುಲಭದಲ್ಲಿ ಕರಗತವಾಗುವ ಕಲೆಯಲ್ಲ. ಸಂಗೀತ ಹಿನ್ನೆಲೆಯೊಂದಿಗೆ ಹಲವಾರು ವರ್ಷಗಳ ಅವಿರತ ಪ್ರಯತ್ನವಿದ್ದರೆ ಮಾತ್ರ ಇದು ಕರಗತವಾಗಬಲ್ಲದು. ಇಂದು ರಾಜ್ಯದಲ್ಲಿ ಸ್ಯಾಕ್ಸೋಫೋನ್ ನುಡಿಸಲು ಕಲಿಸುವ ನೂರಾರು ತರಬೇತಿ ಕೇಂದ್ರಗಳಿದ್ದರೂ ಕಲಿಯಲು ಬರುವ ಹೆಚ್ಚಿನ ಮಂದಿ ಅದು ಕಷ್ಟವೆಂದುಕೊಂಡು ಅರ್ಧದಲ್ಲೇ ಬಿಟ್ಟುಬಿಡುತ್ತಾರೆ. ಕಲಿಯುವವರಿಗೆ ಸ್ವಆಸಕ್ತಿಯೊಂದಿಗೆ ಸ್ವರ, ನಾದ, ಸಂಗೀತ, ತಾಳ, ಲಯದ ಪರಿಚಯವಿರಬೇಕು. ಜೊತೆಗೆ ತಾಳ್ಮೆ ಕೂಡಾ ಇರಬೇಕಾದುದು ಅತ್ಯಗತ್ಯ. ನಮ್ಮಲ್ಲಿ ಹೆಚ್ಚಾಗಿ ಪುರುಷರು ಸ್ಯಾಕ್ಸೋಫೋನ್  ನುಡಿಸುವುದನ್ನು ನಾವು ನೋಡಿದ್ದೇವೆ. ಮಹಿಳೆಯರು ಇದರತ್ತ ಮನಸ್ಸು ಮಾಡಿದ್ದು ತೀರಾ ಕಡಿಮೆ. ಈ ಮಾತಿಗೆ ಅಪವಾದವೆಂಬಂತೆ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಲಾೖಲ ಗ್ರಾಮದ ನಿನ್ನಿಕಲ್ಲು ಮನೆಯ ಮೂರು ಮಂದಿ ಹೆಂಗಳೆಯರು ಸ್ಯಾಕ್ಸೋಫೋನ್ ನುಡಿಸುವ ಮೂಲಕ ಮನೆಮಾತಾಗಿದ್ದಾರೆ.
       
ಶ್ರೀಜಾ, ತುಳಸಿ, ಜ್ಯೋತಿ ಎಂಬ ಮೂರು ಮಂದಿ ಸಹೋದರಿಯರಿಗೆ ತಂದೆ ಶ್ರೀಧರ ಪೂಜಾರಿಯೇ ಗುರುಗಳು. ಸ್ಯಾಕ್ಸೋಫೋನ್ , ವಾದ್ಯ, ತಬಲ… ಹೀಗೆ ಹಲವಾರು ಕ್ಷೇತ್ರಗಳಲ್ಲಿ ಹೆಸರು ಗಳಿಸಿರುವ ಶ್ರೀಧರ ಪೂಜಾರಿಯವರ ಹಠ ಸ್ವಭಾವ ಮೂರು ಮಂದಿ ಹೆಣ್ಮಕ್ಕಳನ್ನು ಸ್ಯಾಕ್ಸೋಫೋನ್  ಪ್ರವೀಣೆಯರನ್ನಾಗಿ ರೂಪಿಸಿದೆ. ಆ ಮೂಲಕ ಮಹಿಳೆಯರು ಮನಸ್ಸು ಮಾಡಿದರೆ ಸ್ಯಾಕ್ಸೋಫೋನ್  ಕ್ಷೇತ್ರದಲ್ಲೂ ಮಿಂಚಬಲ್ಲರು ಎಂಬ ಮಾತಿಗೆ ಸಾಕ್ಷಿ ಸಿಕ್ಕಿದೆ. ಶ್ರೀಧರ ಪೂಜಾರಿಯವರ ಪ್ರಯತ್ನಕ್ಕೆ ಪತ್ನಿ ರಜನಿ ಸಾಥ್‌ ನೀಡಿದರು. ಮೂರು ಮಂದಿ ಹೆಣ್ಮಕ್ಕಳಿಗೂ ಚಿಕ್ಕ ವಯಸ್ಸಿನಿಂದಲೇ ಈ ಕಲೆಯನ್ನು ಕರಗತಗೊಳಿಸುವ ನಿಟ್ಟಿನಲ್ಲಿ ಹಗಲು ರಾತ್ರಿ ಪ್ರಯತ್ನ ಪಟ್ಟರು. ಶಾಲಾ ಓದಿನ ಜೊತೆಗೆ ಬಿಡುವಿನ ಹೆಚ್ಚಿನ ಸಮಯವನ್ನು ಇದಕ್ಕಾಗಿ ಮೀಸಲಿರಿಸಿದರು. ಮೂರು ಮಂದಿ ಹೆಣ್ಣುಮಕ್ಕಳಲ್ಲಿ ಶ್ರೀಜಾರವರಿಗೆ ಇಪ್ಪತ್ತೆರಡು ವರ್ಷ. ಪದವಿ ಶಿಕ್ಷಣವನ್ನು ಮುಗಿಸಿ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಶ್ರೀಜಾರವರ ಸಂಗೀತ ಆಸಕ್ತಿಯನ್ನು ಪತಿ ಹರೀಶ್‌ ಕೂಡಾ ಪೋ›ತ್ಸಾಹಿಸಿದ್ದಾರೆ. ತುಳಸಿ, ಪದವಿ ಶಿಕ್ಷಣವನ್ನು ಹಾಗೂ ಜ್ಯೋತಿ, ಪಿಯುಸಿಯಲ್ಲಿ ಓದುತ್ತಿದ್ದಾರೆ. ಇದೀಗ ಸಂಗೀತ ಇವರ ಪಾಲಿಗೆ ಕಲಿಕೆಯೊಂದಿಗೆ ಗಳಿಕೆಗೂ ದಾರಿದೀಪವಾಗಿದೆ. ಈ ಮೂರು ಮಂದಿ ಕೂಡಾ ಸ್ಯಾಕ್ಸೋಫೋನ್  ನುಡಿಸುವುದರಲ್ಲಿ ಬಹು ಪ್ರಸಿದ್ಧರು. ಜ್ಯೋತಿ ಸ್ಯಾಕ್ಸೋಫೋನ್  ನೊಂದಿಗೆ ಸರಾಗವಾಗಿ ಕೊಳಲು, ಕೀಬೋರ್ಡನ್ನು ನುಡಿಸುತ್ತಾರೆ.   

Advertisement

ಈಗಾಗಲೇ ಮಂಗಳೂರು, ಬಿ.ಸಿ.ರೋಡ್‌, ಉಡುಪಿ, ಬಂಟ್ವಾಳ, ಶೃಂಗೇರಿ, ಕಾಸರಗೋಡು ಹೀಗೆ ಹಲವಾರು ಕಡೆಗಳಲ್ಲಿ ಪ್ರತಿವರ್ಷ 50ರಿಂದ 75ರಷ್ಟು ಕಾರ್ಯಕ್ರಮಗಳನ್ನು ಇವರು ನಡೆಸಿಕೊಟ್ಟಿದ್ದು, ಇದೀಗ ಸ್ಯಾಕ್ಸೋಫೋನ್ ಪ್ರವೀಣೆಯರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗಣೇಶ ಚತುರ್ಥಿ, ಶಾರದಾ ಪೂಜೆ, ಗೃಹಪ್ರವೇಶ, ದೀಪೋತ್ಸವ, ಜಾತ್ರಾ ಮಹೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ, ಮದುವೆ, ಹಬ್ಬ ಹರಿದಿನ ಹೀಗೆ ಎಲ್ಲಾ ಶುಭ ಕಾರ್ಯಕ್ರಮಗಳಿಗೂ ಇವರಿಗೆ ಬೇಡಿಕೆ ಬರುತ್ತಿದ್ದು, ಎರಡು ಮೂರು ತಿಂಗಳ ಮುಂಚಿತವಾಗಿ ಇವರಿಗೆ ಕಾರ್ಯಕ್ರಮಗಳು ನಿಗದಿಯಾಗುತ್ತವೆಯಂತೆ. ಈಗಾಗಲೇ ಒಂದು ಸಾವಿರಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಿ ಸಂಗೀತ ಪ್ರಿಯರ ಮನಗೆದ್ದ ಈ ಸಹೋದರಿಯರು ಪುರುಷರಿಗಿಂತ ಭಿನ್ನವಾಗಿ ಸ್ಯಾಕ್ಸೋಫೋನ್ ನುಡಿಸುತ್ತಾರೆ. ಓರ್ವ ನುರಿತ ಸ್ಯಾಕ್ಸೋಫೋನ್  ಕಲಾವಿದ ಒಂದು ಕಾರ್ಯಕ್ರಮದಲ್ಲಿ ಎಡೆಬಿಡದೆ 10 ರಿಂದ 20 ಹಾಡುಗಳನ್ನಷ್ಟೇ ಹಾಡಬಲ್ಲರು. ಆದರೆ ಇವರು ಏಕಕಾಲದಲ್ಲಿ 30ರಿಂದ 35 ಹಾಡುಗಳನ್ನು ಸರಾಗವಾಗಿ ಹಾಡುತ್ತಾರೆ.  
     
ಈಗಾಗಲೇ ಇವರ ಪ್ರತಿಭೆಯನ್ನು ಗುರುತಿಸಿ ಪುಂಜಾಲಕಟ್ಟೆಯ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ, ಶ್ರೀ ಗಣೇಶೋತ್ಸವ ಸಮಿತಿ ಲಾೖಲ ಸನ್ಮಾನ ಮಾಡಿ ಇವರನ್ನು ಹುರಿದುಂಬಿಸಿವೆ. ಯಾವುದೇ ಸನ್ಮಾನ, ಪ್ರಚಾರವನ್ನು ಬಯಸದೆ ಮುಂದಿನ ಪೀಳಿಗೆಗಾಗಿ ಈ ಕಲೆಯನ್ನು ಉಳಿಸಬೇಕೆಂಬ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವ ಇವರ ಕಾಳಜಿ ನಿಜವಾಗಲೂ ಅಭಿನಂದನಾರ್ಹ. ಸ್ಯಾಕ್ಸೋಫೋನ್  ಮನೆಯಲ್ಲೇ ಇದ್ದುದರಿಂದ ತಂದೆಯವರು ಅದನ್ನು ಪ್ರತೀ ದಿನ ಅಭ್ಯಾಸ ಮಾಡುತ್ತಿರುವುದನ್ನು ಹತ್ತಿರದಿಂದ ಕಂಡ ನಾವು ಈ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಬೇಕೆಂಬ ನಿಟ್ಟಿನಲ್ಲಿ ಕಲಿತೆವು ಎನ್ನುವುದು ಶ್ರೀಜಾರವರ ಅನುಭವದ ಮಾತು.     

ಸ್ಯಾಕ್ಸೋಫೋನ್ ಕಲಿಯಬೇಕಾದರೆ ಸಂಗೀತದ ಪರಿಚಯವಿರಬೇಕು. ಹಾಡು, ಭಜನೆಗಳು ಗೊತ್ತಿರಲೇಬೇಕು. ಮುಖ್ಯವಾಗಿ ತುಂಬಾ ತಾಳ್ಮೆ,ಅವಿರತ ಪ್ರಯತ್ನ, ಛಲ ಬೇಕು. ಕಷ್ಟಪಟ್ಟರೆ ಇದನ್ನು ಕರಗತಪಡಿಸಿಕೊಳ್ಳುವುದು ಎನ್ನುವುದು ತುಳಸಿಯವರ ಅನುಭವದ ಮಾತು. ಅದೇನೇ ಇರಲಿ ವಿದ್ಯಾರ್ಥಿದೆಸೆಯಲ್ಲಿ ಈ ಸಹೋದರಿಯರ ಸಾಧನೆ ಇತರರಿಗೆ ಮಾದರಿಎನ್ನುವುದರಲ್ಲಿಎರಡು ಮಾತಿಲ್ಲ. ಹೆಚ್ಚಿನ ಮಾಹಿತಿಗಳಿಗಾಗಿ ನೀವು ಶ್ರೀಧರ ಪೂಜಾರಿಯವರನ್ನು ಸಂಪರ್ಕಿಸಬಹುದು. ಅವರ ಮೊಬೈಲ್‌ ನಂಬರ್‌ : 9741487501.  

– ಚಂದ್ರಹಾಸ ಚಾರ್ಮಾಡಿ                                             
 

Advertisement

Udayavani is now on Telegram. Click here to join our channel and stay updated with the latest news.

Next