Advertisement

ನನ್ನ ಸ್ನೇಹಿತ, ಅಬೆ ಸ್ಯಾನ್‌ : ಅಗಲಿದ ಗೆಳೆಯನ ಆತ್ಮಕ್ಕೆ ಬ್ಲಾಗ್‌ನಲ್ಲಿ ಶಾಂತಿ ಕೋರಿದ ಮೋದಿ

01:19 AM Jul 09, 2022 | Team Udayavani |

ಶಿಂಜೋ ಅಬೆ – ಜಪಾನಿನ ಅಸಾಧಾರಣ ನಾಯಕ, ಜಾಗತಿಕ ಮುತ್ಸದ್ದಿ ಮತ್ತು ಭಾರತ-ಜಪಾನ್‌ ಸ್ನೇಹದ ಮಹಾನ್‌ ಚಾಂಪಿಯನ್‌. ಇನ್ನು ಮುಂದೆ ಅವರು ನಮ್ಮ ನಡುವೆ ಇರುವುದಿಲ್ಲ. ಜಪಾನ್‌ ಮತ್ತು ಜಗತ್ತು ಮಹಾನ್‌ ದಾರ್ಶನಿಕನೊಬ್ಬರನ್ನು ಕಳೆದುಕೊಂಡಿದೆ. ಹಾಗೆಯೇ ನಾನು ನನ್ನ ಪ್ರೀತಿಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ.
2007ರ ವೇಳೆಯಲ್ಲಿ ನಾನು ಗುಜರಾತ್‌ ಸಿಎಂ ಆಗಿದ್ದಾಗ, ಜಪಾನ್‌ಗೆ ಭೇಟಿ ನೀಡಿದ್ದೆ. ಆಗ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದೆ. ಆ ಮೊದಲ ಭೇಟಿ ವೇಳೆಯಲ್ಲೇ ನಮ್ಮ ಸ್ನೇಹವು ಕಚೇರಿಯ ಸಂಕೋಲೆಗಳು ಮತ್ತು ಅಧಿಕೃತ ಶಿಷ್ಟಾಚಾರವನ್ನು ಮೀರಿ ಬೆಳೆಯಿತು.

Advertisement

ತೋಜಿ ದೇವಾಲಯದ ನಮ್ಮ ಭೇಟಿ, ಶಿಂಕನ್ಸೆನ್‌ನಲ್ಲಿ ರೈಲು ಪ್ರಯಾಣ, ಅಹ್ಮದಾಬಾದ್‌ನ ಸಬರಮತಿ ಆಶ್ರಮಕ್ಕೆ ಭೇಟಿ, ಕಾಶಿಯ ಗಂಗಾ ಆರತಿ, ಟೋಕಿಯೊದಲ್ಲಿ ವಿಸ್ತೃತವಾದ ಚಹಾ ಸಮಾರಂಭ, ನಮ್ಮ ಸ್ಮರಣೀಯ ಸಂವಾದಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಮೌಂಟ್‌ ಫುಜಿಯ ತಪ್ಪಲಿನಲ್ಲಿರುವ ಯಮನಾಶಿ ಪ್ರಾಂತದ ಅವರ ನಿವಾಸಕ್ಕೆ ಆಹ್ವಾನಿಸಲ್ಪಟ್ಟ ಏಕೈಕ ವ್ಯಕ್ತಿ ನಾನು ಎಂಬ ಗೌರವವನ್ನು ಎಂದಿಗೂ ನೆನಪಿಸಿಕೊಳ್ಳುತ್ತಿರುತ್ತೇನೆ.

2007ರಿಂದ 2012ರ ನಡುವೆ ಜಪಾನ್‌ ಪ್ರಧಾನಿಯಾಗದಿದ್ದರೂ ಮತ್ತು ಇತ್ತೀಚೆಗೆ ಅಂದರೆ 2020ರ ಅನಂತರ, ನಮ್ಮ ವೈಯಕ್ತಿಕ ಬಂಧವು ಮೊದಲಿನಂತೆಯೇ ಬಲಿಷ್ಠವಾಗಿತ್ತು.

ಅಬೆ ಅವರೊಂದಿಗಿನ ಪ್ರತೀ ಭೇಟಿಯೂ ಬೌದ್ಧಿಕವಾಗಿ ಉತ್ತೇಜಕವಾಗಿತ್ತು. ಆಡಳಿತ, ಆರ್ಥಿಕತೆ, ಸಂಸ್ಕೃತಿ, ವಿದೇಶಾಂಗ ನೀತಿ ಮತ್ತು ಇತರ ವಿವಿಧ ವಿಷಯಗಳ ಬಗ್ಗೆ ಅವರಲ್ಲಿ ಹೊಸ ಆಲೋಚನೆಗಳು ಮತ್ತು ಅಮೂಲ್ಯ ಒಳನೋಟಗಳಿದ್ದವು. ಅವರ ಸಲಹೆಗಳಿಂದಾಗಿ ಗುಜರಾತ್‌ನಲ್ಲಿ ಹೊಸ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಯಿತು. ಅಲ್ಲದೆ ಜಪಾನ್‌ ಮತ್ತು ಗುಜರಾತ್‌ ನಡುವಿನ ಸಂಬಂಧ ಉತ್ತಮವಾಗಿರಲು ಅಬೆ ಅವರ ಬೆಂಬಲವೇ ಕಾರಣ.

ಭಾರತ ಮತ್ತು ಜಪಾನ್‌ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಯಲ್ಲಿ ಅಭೂತಪೂರ್ವ ಬದಲಾವಣೆಯನ್ನು ತರಲು ಹಾಗೂ ಅವರೊಂದಿಗೆ ಕೆಲಸ ಮಾಡುವುದೇ ನನ್ನ ಸುಯೋಗವಾಗಿತ್ತು. ಇವರ ಕಾಲದಲ್ಲೇ ಭಾರತ ಮತ್ತು ಜಪಾನ್‌ ನಡುವಿನ ದ್ವಿಪಕ್ಷೀಯ ಆರ್ಥಿಕ ಸಂಬಂಧ ವಿಶಾಲ ವಾದ, ಸಮಗ್ರವಾದ ಆರ್ಥಿಕ ಸಂಬಂಧವಾಗಿ ಪರಿವರ್ತಿತ ವಾಯಿತು. ಆರ್ಥಿಕ ಸಂಬಂಧದ ಜತೆಗೆ, ಭದ್ರತಾ ಪಾಲುದಾ ರಿಕೆಯೂ ನಿರ್ಣಾಯಕ ಘಟ್ಟವನ್ನು ತಲುಪಿತು. ಅವರು ಭಾರತದೊಂದಿಗೆ ನಾಗರಿಕ ಪರಮಾಣು ಒಪ್ಪಂದವನ್ನು ಮುಂದುವರಿಸುವಲ್ಲಿ ದೃಢ ನಿಶ್ಚಯವನ್ನು ಹೊಂದಿದ್ದರು. ಭಾರತದಲ್ಲಿ ಹೈಸ್ಪೀಡ್‌ ರೈಲು ವಿಚಾರದಲ್ಲೂ ಸಹಾಯ ಮಾಡಿದರು. ಭಾರತದ ಬೆಳವಣಿಗೆಯಲ್ಲಿ ಸದಾ ನಾನು ನಿಮ್ಮೊಂದಿಗೆ ಇರುತ್ತೇನೆ ಎಂದು ಅವರು ಖಚಿತಪಡಿಸಿದ್ದರು.

Advertisement

ಭಾರತ ಮತ್ತು ಜಪಾನ್‌ ನಡುವಿನ ಸಂಬಂಧ ಉತ್ತಮ ವಾಗಲು ಸಹಾಯ ಮಾಡಿದ ಇವರಿಗೆ ಭಾರತ ಸರಕಾರವು 2021ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತು.

ಸದ್ಯ ಜಗತ್ತಿನಲ್ಲಿ ನಡೆಯುತ್ತಿರುವ ಸಂಕೀರ್ಣ ಮತ್ತು ಬಹು ಸ್ಥಿತ್ಯಂತರಗಳ ಬಗ್ಗೆ ಅಬೆ ಅವರು ಆಳವಾದ ಒಳನೋಟವನ್ನು ಹೊಂದಿದ್ದರು. ಅಂದರೆ ರಾಜಕೀಯ, ಸಮಾಜ, ಆರ್ಥಿಕತೆ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳು ಹಾಗೂ ತನ್ನ ಜನರನ್ನು ಮತ್ತು ಜಗತ್ತನ್ನು ತನ್ನೊಂದಿಗೆ ಕೊಂಡೊಯ್ಯುವ ಬಗ್ಗೆ ಅಬೆ ಅವರಿಗೆ ಆಳವಾದ ಒಳನೋಟವಿತ್ತು. ಅವರ ದೂರಗಾಮಿ ನೀತಿಗಳಾದ ಅಬೆನಾಮಿಕ್ಸ್  ಜಪಾನಿನ ಅರ್ಥವ್ಯವಸ್ಥೆಗೆ ಚೈತನ್ಯ ತುಂಬಿತು. ಇದು ಜನರ ಆವಿಷ್ಕಾರ ಮತ್ತು ಉದ್ಯಮಶೀಲತೆಯ ಮನೋಭಾವವನ್ನು ಪುನರುಜ್ಜೀವನಗೊಳಿಸಿತು.

2007ರಲ್ಲಿ ಅವರು ಭಾರತೀಯ ಸಂಸತ್ತನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಇಂಡೋ ಪೆಸಿಫಿಕ್‌ ಪ್ರದೇಶವು ಸಮಕಾಲೀನ ರಾಜಕೀಯ, ವ್ಯೂಹಾತ್ಮಕ ಮತ್ತು ಆರ್ಥಿಕವಾಗಿ ಹೊರಹೊಮ್ಮಲು ಅಡಿಪಾಯ ಹಾಕಿದರು.

ಕ್ವಾಡ್‌, ಆಸಿಯಾನ್‌ ನೇತೃತ್ವದ ವೇದಿಕೆಗಳು, ಇಂಡೋ ಪೆಸಿಫಿಕ್‌ ಸಾಗರಗಳ ಉಪಕ್ರಮ, ಏಷ್ಯಾ-ಆಫ್ರಿಕಾ ಬೆಳವಣಿಗೆ ಕಾರಿಡಾರ್‌ ಮತ್ತು ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ಒಕ್ಕೂಟ ಇವೆಲ್ಲವೂ ಅಬೆ ಅವರಿಂದ ಪ್ರಯೋಜನ ಪಡೆದಿವೆ.

ಕಳೆದ ಮೇನಲ್ಲಿ ನಾನು ಜಪಾನ್‌ಗೆ ಭೇಟಿ ನೀಡಿದ ವೇಳೆ ಆಗ ತಾನೆ ಜಪಾನ್‌-ಇಂಡಿಯಾ ಅಸೋಸಿಯೇಶ‌ನ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ಅಬೆ ಅವರನ್ನು ಭೇಟಿ ಮಾಡಿದ್ದೆ. ಈ ಸಂದರ್ಭದಲ್ಲಿ ಭಾರತ-ಜಪಾನ್‌ ಸ್ನೇಹವನ್ನು ಮತ್ತಷ್ಟು ಬಲಪಡಿಸುವುದು ಹೇಗೆ ಎಂಬುದರ ಬಗ್ಗೆ ಹೊಸ ಆಲೋಚನೆಯನ್ನು ಹೊಂದಿದ್ದರು. ಆ ದಿನ ನಾನು ವಿದಾಯ ಹೇಳಿದಾಗ, ಅದೇ ನಮ್ಮ ಅಂತಿಮ ಸಭೆಯಾಗುತ್ತದೆ ಎಂದು ಭಾವಿಸಿರಲಿಲ್ಲ.

ಅಬೆ ಅವರ ಆತ್ಮೀಯತೆ ಮತ್ತು ಬುದ್ಧಿವಂತಿಕೆ, ಕೃಪೆ ಮತ್ತು ಔದಾರ್ಯ, ಸ್ನೇಹ ಮತ್ತು ಮಾರ್ಗದರ್ಶನಕ್ಕಾಗಿ ನಾನು ಯಾವಾಗಲೂ ಋಣಿಯಾಗಿರುತ್ತೇನೆ. ನಾನು ಅವರನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತೇನೆ.

ಭಾರತದ ಜನತೆಯ ಪರವಾಗಿ ಜಪಾನಿನ ಜನತೆಗೆ, ವಿಶೇಷವಾಗಿ ಶ್ರೀಮತಿ ಅಕಿ ಅಬೆ ಮತ್ತವರ ಕುಟುಂಬಕ್ಕೆ ಹೃತ್ಪೂರ್ವಕ ಸಂತಾಪಗಳನ್ನು ಸಲ್ಲಿಸುತ್ತೇನೆ.
ಓಂ ಶಾಂತಿ.
-ನರೇಂದ್ರ ಮೋದಿ, ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next