Advertisement

ಸದಾಶಿವ ವರದಿ ಜಾರಿಗೆ ಆಗ್ರಹ

02:04 PM Jan 12, 2018 | |

ರಾಯಚೂರು: ದಲಿತ ಸಮುದಾಯಗಳ ಅನೇಕ ವರ್ಷಗಳ ಬೇಡಿಕೆಯಾದ ನ್ಯಾ| ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿ ಅನೇಕ ದಲಿತಪರ ಸಂಘಟನೆಗಳು ಒಗ್ಗೂಡಿ ಗುರುವಾರ ಜೈಲು ಭರೋ ಚಳವಳಿ ನಡೆಸಿದವು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು.

Advertisement

ನಗರದ ಡಾ| ಅಂಬೇಡ್ಕರ್‌ ವೃತ್ತದಲ್ಲಿ ಜಮಾಯಿಸಿದ ಮುಖಂಡರು, ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ
ಅಲ್ಲಿ ರಸ್ತೆತಡೆ ನಡೆಸಿದರು.

ಈ ವೇಳೆ ಮಾತನಾಡಿದ ಮುಖಂಡರು, ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಲು ನ್ಯಾ| ಸದಾಶಿವ ಆಯೋಗ ರಚಿಸಲಾಗಿತ್ತು. ಸರ್ಕಾರಕ್ಕೆ ವರದಿಯಲ್ಲಿ ಏನಿದೆ ಎಂಬ ವಿಚಾರ ಗೊತ್ತಿದೆ. ಆದರೂ ಬಹುಜನರ ಹಿತ ಕಾಯಬೇಕಾದ ಸರ್ಕಾರವೇ ಹೀಗೆ ಮೀನಮೇಷ ಎಣಿಸುತ್ತಿದೆ. 

ವರದಿ ಜಾರಿಗಾಗಿ ಹಲವು ದಶಕಗಳಿಂದ ಹೋರಾಡುತ್ತಲೇ ಇದ್ದೇವೆ. ಇಷ್ಟು ದಿನ ಮಾದಿಗ ಛಲವಾದಿ ಎಂಬ ಪ್ರತ್ಯೇಕತೆ ಇತ್ತು. ಅದನ್ನೇ ನೆಪ ಮಾಡಿಕೊಂಡು ಸರ್ಕಾರ ವರದಿ ಜಾರಿಗೆ ಹಿಂದೇಟು ಹಾಕುತ್ತಿತ್ತು. ಆದರೆ, ನಾವೆಲ್ಲ ಒಟ್ಟಾಗಿ ಹೋರಾಟಕ್ಕೆ ಧುಮುಕಿದ್ದೇವೆ. ಈಗಾಗಲೇ ದಲಿತ ನಾಯಕರು ಕೂಡಲ ಸಂಗಮದಿಂದ ಬೆಂಗಳೂರುರೆಗೆ ಪಾದಯಾತ್ರೆ ನಡೆಸಿದ್ದರು. ಸಿಎಂ ಸಿದ್ದರಾಮಯ್ಯ ಜ.13 ರೊಳಗೆ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರು. ಸರ್ಕಾರಕ್ಕೆ ಮತ್ತೂಮ್ಮೆ ಎಚ್ಚರಿಸುವ ಉದ್ದೇಶದಿಂದಲೇ ರಾಜ್ಯಾದ್ಯಂತ ಜೈಲು ಭರೋ ಚಳವಳಿ ನಡೆಸಲಾಗಿದೆ ಎಂದು ಹೇಳಿದರು.

ಎಸ್ಸಿ ಸಮಾಜಗಳಿಗೆ ಒಳಮೀಸಲಾತಿ ಜಾರಿಗೊಳಿಸುವ ವಿಚಾರದಲ್ಲಿ ಮಾಲ ಮತ್ತು ಮಾದಿಗ ಜನಾಂಗವು ಒಮ್ಮತದ
ತೀರ್ಮಾನಕ್ಕೆ ಬಂದಿದೆ. ಎರಡೂ ಸಮಾಜಗಳ ಮುಖಂಡರು, ವಿವಿಧ ಸಂಘಟನೆಗಳು ಒಟ್ಟಾಗಿ ವರದಿ ಜಾರಿ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗಿದೆ. ವರದಿ ಜಾರಿಗೆ ಸರ್ಕಾರ ಗಡುವು ನೀಡಿದ್ದು, ನಿಗದಿತ ವೇಳೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.

Advertisement

ಬಳಿಕ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಪೊಲೀಸ್‌ ವಾಹನಗಳಲ್ಲಿ ಕರೆದುಕೊಂಡು ಹೋಗಿ ನಂತರ
ಬಿಡುಗಡೆಗೊಳಿಸಿದರು. ದಲಿತ ಮುಖಂಡ ಎಂ.ವಿರುಪಾಕ್ಷಿ, ರವೀಂದ್ರನಾಥ ಪಟ್ಟಿ, ಎಂ.ಆರ್‌.ಭೇರಿ, ರವೀಂದ್ರ ಜಲ್ದಾರ್‌, ಅಂಬಣ್ಣ ಅರೋಲಿಕರ್‌, ಕೆ.ಪಿ.ಅನಿಲಕುಮಾರ, ವಿಶ್ವನಾಥ ಪಟ್ಟಿ, ಎಸ್‌.ರಾಜು, ನರಸಪ್ಪ ದಂಡೋರ, ಭಾಸ್ಕರ, ಎಂ.ಈರಣ್ಣ ಸೇರಿ ಅನೇಕರನ್ನು ಪೊಲೀಸರು ಬಂಧಿಸಿದರು.

ಟ್ರಾಫಿಕ್‌ ಜಾಮ್‌: ಬಸವೇಶ್ವರ ವೃತ್ತದಲ್ಲಿ ಹೋರಾಟ ನಡೆಸಿದ್ದರಿಂದ ಎಲ್ಲ ಭಾಗಗಳಿಂದ ಬರುತ್ತಿದ್ದ ವಾಹನಗಳ
ಸಂಚಾರಕ್ಕೆ ಅಡ್ಡಿಯಾಯಿತು. ಇದರಿಂದ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್‌ ಜಾಮ್‌ ಸಮಸ್ಯೆ ಸೃಷ್ಟಿಯಾಯಿತು. ಅಂಬೇಡ್ಕರ್‌ ವೃತ್ತ, ಟಿಪ್ಪು ಸುಲ್ತಾನ್‌ ವೃತ್ತ, ಎನ್‌ಎನ್‌ಟಿ ಚಿತ್ರಮಂದಿರದವರೆಗೆ ವಾಹನಗಳು
ಸಾಲುಗಟ್ಟಿದ್ದವು. ಅಡ್ಡ ದಾರಿಗೆ ದೊಡ್ಡ ವಾಹನಗಳು ತೆರಳಿದ್ದರಿಂದ ಟ್ರಾಪಿಕ್‌ ಸಮಸ್ಯೆ ಮತ್ತಷ್ಟು ಹೆಚ್ಚಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next