Advertisement

ಸದಾಶಿವ ಆಯೋಗ ವರದಿ ಜಾರಿ: ಸುದೀರ್ಘ‌ ಚರ್ಚೆ

06:40 AM Jan 15, 2018 | Team Udayavani |

ಬೆಂಗಳೂರು: ಪರಿಶಿಷ್ಟರ ಒಳ ಮೀಸಲಾತಿ ಹಂಚಿಕೆ ಸಂಬಂಧ ಸಲ್ಲಿಕೆಯಾಗಿರುವ ನ್ಯಾ.ಸದಾಶಿವ ಆಯೋಗದ ವರದಿ ಜಾರಿ ಕುರಿತು ಬೇಕು-ಬೇಡ ಎಂಬ ವಾದದ ಜತೆಗೆ ಇದರಿಂದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಮೇಲಾಗುವ ಪರಿಣಾಮಗಳ ಬಗ್ಗೆಯೂ ಸುದೀರ್ಘ‌ ಚರ್ಚೆ ನಡೆದಿದೆ.

Advertisement

ವರದಿ ಜಾರಿಗೊಳಿಸುವಂತೆ ದಲಿತ ಎಡಗೈ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರೆ, ಬಲಗೈ ಗುಂಪಿನಿಂದ ವಿರೋಧ ವ್ಯಕ್ತವಾಗಿದೆ. ವರದಿ ಜಾರಿಯಾದರೆ ಚುನಾವಣೆಯಲ್ಲಿ ಪಕ್ಷದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿರುವುದರಿಂದ ಜಾರಿ ಬೇಡ ಎಂದು ಕೆಲವು ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್‌ ಪಕ್ಷದ ಪರವಾಗಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಮಾತನಾಡಿ, ಒಬ್ಬರನ್ನು ಓಲೈಸಲು ಹೋಗಿ ಇನ್ನೊಬ್ಬರನ್ನು ಕಡೆಗಣಿಸಿದಂತಾಗಬಾರದು. ಸರ್ಕಾರದ ಕ್ರಮ ಒಂದು ಕಣ್ಣಿಗೆ ಬೆಣ್ಣೆ,ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತಾದರೆ ಮುಂಬರುವ ಚುನಾವಣೆಯಲ್ಲಿ ಪಕ್ಷದ ಮೇಲೆ ಪರಿಣಾಮ ಬೀರಬಹುದು. ಮೇಲಾಗಿ ಸರ್ಕಾರ ಎಂದರೆ ಎಲ್ಲರನ್ನೂ ಒಂದಾಗಿ ನೋಡಬೇಕಾಗುತ್ತದೆ. ಆದ್ದರಿಂದ ವರದಿ ಜಾರಿ ವಿಚಾರದಲ್ಲಿ ಆತುರ ಬೇಡ ಎಂದು ಸಲಹೆ ಮಾಡಿದರು.

ಮತ್ತೆ ಅಸಮಾಧಾನ: ಆಯೋಗದ ವರದಿ ಜಾರಿ ಕುರಿತು ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಮತ್ತು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಧ್ಯೆ ಮತ್ತೆ ಅಸಮಾಧಾನ ಬಹಿರಂಗವಾಗಿದೆ.

ಪರಿಶಿಷ್ಟ ಜಾತಿಯಲ್ಲಿ ಮಾದಿಗ ಸಮುದಾಯ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿದ್ದು, ಬೇರೆ ಸಮುದಾಯಗಳಿಗೆ ಹೋಲಿಸಿದರೆ ಇದು ಅತ್ಯಂತ ಹಿಂದುಳಿದಿದೆ. ಹೀಗಾಗಿ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಕಲ್ಪಿಸುವ ನ್ಯಾ.ಸದಾಶಿವ ಆಯೋಗದ ವರದಿ ಅನುಷ್ಠಾನ ಆಗಲೇ ಬೇಕು. ಇದು ಸರ್ಕಾರದ ಭರವಸೆಯೂ ಹೌದು ಎಂದು ಸಚಿವ ಆಂಜನೇಯ ಪ್ರತಿಪಾದಿಸಿದರು.

Advertisement

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನರೇಂದ್ರಸ್ವಾಮಿ, ಅಂಜನೇಯ ಹೇಳಿದಂತೆ ಮಾಡಿದರೆ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಮೀಸಲಾತಿಯಿಂದ ಎಲ್ಲರಿಗೂ ಒಂದೇ ರೀತಿಯ ಸೌಲಭ್ಯ ಸಿಕ್ಕಿದರೂ ಕೆಲವರು ಉಪಯೋಗಿಸಿಕೊಂಡರೆ, ಇನ್ನು ಕೆಲವರು ಕೈಚೆಲ್ಲಿದರು. ಕೆಲವು ಸಮುದಾಯಗಳಿಗೆ ಅನುಕೂಲವಾಗುತ್ತದೆ ಎಂದು ಆಯೋಗದ ವರದಿ ಜಾರಿ ಮಾಡಿದರೆ ಅದನ್ನು ಪ್ರಶ್ನಿಸಿ ಇನ್ನೊಂದು ಸಮುದಾಯ ಕೋರ್ಟ್‌ಗೆ ಹೋಗುವುದಿಲ್ಲ
ಎಂದು ಏನು ಖಾತರಿ. ಆದ್ದರಿಂದ ಚುನಾವಣೆ ಸಮೀಪ ಇಟ್ಟುಕೊಂಡು ಅಪಾಯ ಮೈಮೇಲೆ ಎಳೆದುಕೊಳ್ಳುವುದು ಬೇಡ ಎಂದು ಒತ್ತಾಯಿಸಿದರು.

ಆಯೋಗದ ವರದಿ ಜಾರಿಗೊಳಿಸುವುದಾಗಿ ಮೊದಲಿನಿಂದಲೂ ಹೇಳಿಕೊಂಡು ಬಂದು ಈಗ ಚುನಾವಣೆ ಸಮೀಪಿಸುತ್ತಿದೆ ಎಂಬ ಕಾರಣಕ್ಕೆ ಜಾರಿ ಮಾಡದಿದ್ದರೆ ಹೇಗೆ? ಹಾಗೆ ಮಾಡಿದರೆ ಅದು ಪಕ್ಷದ ಮೇಲೆ ಪರಿಣಾಮ ಬೀರಬಹುದು ಎಂದು ಸಚಿವ ಆರ್‌.ಬಿ.ತಿಮ್ಮಾಪುರ್‌ ಹೇಳಿದರೆ,ಎಲ್ಲಾ ವರ್ಗದಲ್ಲೂ ಬಡವರಿದ್ದು, ಶೀಘ್ರ ಸಮಸ್ಯೆ ಬಗೆಹರಿಸಿ ಎಂದು ವಿಧಾನ ಪರಿಷತ್‌ ಸದಸ್ಯ ಧರ್ಮಸೇನಾ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next