ಮುಂಬಯಿ: ಸಂಸದ ರಾಜು ಶೆಟ್ಟಿ ನೇತೃತ್ವದ ಸ್ವಾಭಿಮಾನಿ ಶೇತ್ಕರಿ ಸಂಘಟನೆಯಿಂದ ಉಚ್ಚಾಟನೆಗೊಂಡಿರುವ ಕೃಷಿ ರಾಜ್ಯ ಸಚಿವ ಸದಾಭಾವು ಖೋತ್ ಅವರು ಹೊಸ ಸಂಘಟನೆ ರಚಿಸುವ ಬಗ್ಗೆ ಘೋಷಣೆ ಮಾಡಿದ್ದಾರೆ.
ಸೆ. 21ರಂದು ಕೊಲ್ಲಾಪುರದಲ್ಲಿ ಪಕ್ಷದ ಹೆಸರು, ಧ್ವಜ ಮತ್ತು ಚೆಹ್ನೆಯನ್ನು ಘೋಷಣೆ ಮಾಡಲಾಗುವುದು. ಈ ಉದ್ದೇಶಕ್ಕಾಗಿ 16 ಸದಸ್ಯರನ್ನು ಒಳಗೊಂಡಿರುವ ಕರಡು ಸಮಿತಿ ರಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸೆ. 30ರಂದು ದಸರಾ ಮುನ್ನಾದಿನ ಈಚಲಕರಂಜಿಯಲ್ಲಿ ರೈತ ರ್ಯಾಲಿಯೊಂದು ನಡೆಯಲಿದೆ. ರ್ಯಾಲಿಯಲ್ಲಿ ಹೊಸ ಪಕ್ಷವು ರೈತರು, ಕೃಷಿ ಕಾರ್ಮಿಕರು, ಮಹಿಳೆಯರು, ನೌಕರರು ಮತ್ತು ಯುವಕರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಉದ್ದೇಶಿಸಿ ಭಾಷಣ ಮಾಡಲಿದೆ ಎಂದು ರೈತ ನಾಯಕ ಖೋತ್ ತಿಳಿಸಿದ್ದಾರೆ.
ಹೊಸ ಪಕ್ಷವು ಸರಕಾರದೊಂದಿಗೆ ಸಂವಾದ ಮತ್ತು ಸಂಘರ್ಷದ ಅವಳಿ ವಿಧಾನಗಳ ಮೂಲಕ ರೈತರ ಸಮಸ್ಯೆಗಳನ್ನು ಬಗೆಹರಿಸುವ ಕಡೆಗೆ ಗಮನ ಕೇಂದ್ರೀಕರಿಸಲಿದೆ. ಪಕ್ಷದಲ್ಲಿ ರೈತರು, ಯುವಕರು ಮತ್ತು ಮಹಿಳೆ ಯರು ಸೇರಿದಂತೆ ಸಮಾಜದ ಎಲ್ಲ ವರ್ಗಗಳು ಹಾಗೂ ಸಂಘಟನೆಗಳಿಗೆ ಸ್ಥಾನ ನೀಡಲಾಗುವುದು ಎಂದರು.ಆದಾಗ್ಯೂ, ಹೊಸ ಪಕ್ಷವು ಚುನಾವಣಾ ರಾಜಕೀಯಕ್ಕೆ ಇಳಿಯಲಿದೆಯೇ, ಇಲ್ಲವೇ ಎಂಬ ಬಗ್ಗೆ ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ. ಚುನಾವಣೆ ಸ್ಪರ್ಧಿಸುವ ಬಗ್ಗೆ ಮುಂದೆ ನಿರ್ಣಯಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ತಮ್ಮ ಮಾಜಿ ಬಾಸ್ ರಾಜು ಶೆಟ್ಟಿ ವಿರುದ್ಧ ಟೀಕಾಪ್ರಹಾರ ನಡೆಸಿರುವ ಸಚಿವ ಖೋತ್ ಅವರು, ತಾನು ವೈಯಕ್ತಿಕ ಆಸಕ್ತಿಯೊಂದಿಗೆ ರಾಜ್ಯ ಸಂಪುಟಕ್ಕೆ ರಾಜೀನಾಮೆ ನೀಡುವಂತೆ ಮಾಡಲು ಶೆಟ್ಟಿ ತನ್ನ ವಿರುದ್ಧ ದುರುದ್ದೇಶಪೂರಿತ ಪ್ರಚಾರವನ್ನು ಆರಂಭಿಸಿದ್ದರು. ಶೆಟ್ಟಿ ಅವರ ಆತ್ಮಕ್ಲೇಶ ಯಾತ್ರೆಯು ತನ್ನ ವಿರುದ್ಧದ ಯಾತ್ರೆ ಆಗಿತ್ತು. ನಾನು ರಾಜ್ಯ ಸಚಿವ ಆದಾಗಿನಿಂದ ಅವರು ತನಗೆ ರಾಜೀನಾಮೆ ನೀಡುವಂತೆ ಒತ್ತಡವನ್ನು ಹೇರುತ್ತಿದ್ದರು ಎಂದು ದೂರಿದ್ದಾರೆ.
ಶೆಟ್ಟಿ ತನ್ನ ವಿರುದ್ಧ ಹೊರೆಸಿರುವ ಆರೋಪಗಳು ಅತ್ಯಂತ ಕಳಪೆ ಮಟ್ಟದ್ದಾಗಿದೆ. ತಾನು ರಾಜ್ಯ ಸಂಪುಟಕ್ಕೆ ಸೇರಿದಾಗಿನಿಂದ ಅವರು ತನ್ನ ಕಾಲೆಳೆಯುವ ಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಖೋತ್ ಅರೋಪಿಸಿದ್ದಾರೆ.
ಶೇತ್ಕರಿ ಸಂಘಟನೆಯಿಂದ ಉಚ್ಚಾಟನೆಗೊಂಡಿರುವ ಬಗ್ಗೆ ಮಾತನಾಡಿದ ಅವರು ತನಗೆ ಪಕ್ಷ ತ್ಯಜಿಸಲು ಇಷ್ಟವಿರಲಿಲ್ಲ. ಆದರೆ, ತನ್ನನ್ನು ಉಚ್ಚಾಟಿಸಲಾಯಿತು ಎಂದರು.