Advertisement

ಫೇಸ್‌ಬುಕ್‌ನಲ್ಲಿ ಸಚಿನ್‌ “ಮನ್‌ ಕೀ ಬಾತ್‌’!

06:00 AM Dec 23, 2017 | Team Udayavani |

ಮುಂಬೈ/ನವದೆಹಲಿ: ರಾಜ್ಯಸಭೆಯಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಗದ್ದಲದಿಂದ ಮಾತನಾಡಲು ಅವಕಾಶ ಸಿಗದೇ ಇದ್ದರೂ ಮಾಜಿ ಕ್ರಿಕೆಟಿಗ, ರಾಜ್ಯಸಭಾ ಸದಸ್ಯ ಸಚಿನ್‌ ತೆಂಡುಲ್ಕರ್‌ ಫೇಸ್‌ಬುಕ್‌ ಮೂಲಕ ತಮ್ಮ ಅನಿಸಿಕೆಗಳನ್ನು ಹೇಳಿಕೊಂಡಿದ್ದಾರೆ.

Advertisement

ರಾಜ್ಯಸಭೆಯಲ್ಲಿ 10 ನಿಮಿಷಗಳವರೆಗೂ ನಿಂತು ಕಾಯ್ದರೂ ತಮ್ಮ ಕಾಯುವಿಕೆಗೆ ರಾಜಕಾರಣಿಗಳು ಬೆಲೆ ಕೊಡದೇ ಇದ್ದುದಕ್ಕೆ ಅವರು ಹತಾಶರಾಗಿಲ್ಲ. ತಮ್ಮ 24 ವರ್ಷಗಳ ವೃತ್ತಿಜೀವನದಲ್ಲಿ ಅನೇಕ ವೈರುಧ್ಯಗಳನ್ನು, ಟೀಕೆ-ಟಿಪ್ಪಣಿಗಳನ್ನು ಎದುರಿಸಿದ್ದಾರೆ. ಅವೆಲ್ಲದಕ್ಕೂ ಕ್ರಿಕೆಟ್‌ ಜಗತ್ತಿನಲ್ಲಿ ಸಾಧನೆಯ ಮೂಲಕವೇ ಉತ್ತರಿಸಿದ್ದಾರೆ. ಕ್ರೀಡೆಯಿಂದ ನಿವೃತ್ತಿಯಾದರೂ ತಮ್ಮಲ್ಲಿನ ಕ್ರೀಡಾ ಸ್ಫೂರ್ತಿ ನಿವೃತ್ತಿಯಾಗಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇದೀಗ ಸಂಸತ್‌ನಲ್ಲಾದ ಅವಮಾನಕ್ಕೆ ಫೇಸ್‌ಬುಕ್‌ ಮೂಲಕ ಉತ್ತರಿಸಿದ್ದಾರೆ.

ಸಚಿನ್‌ ಏನೇನು ಹೇಳಿದ್ದಾರೆ ಎನ್ನುವದರ ವಿವರ ಇಲ್ಲಿದೆ.
ತಂದೆಯ ಸ್ಮರಣೆ:
ನಾನು ಕ್ರಿಕೆಟಿಗನಾಗಲು ನನ್ನ ತಂದೆ ರಮೇಶ್‌ ತೆಂಡುಲ್ಕರ್‌ ನೀಡಿದ ಪ್ರೋತ್ಸಾಹವೇ ಕಾರಣ. ಕವಿಯಾಗಿದ್ದ ಅವರು ನನ್ನ ಆಸೆಗೆ ನೀರೆರೆದರು. ಅವರು ಕೊಟ್ಟ ಸ್ವಾತಂತ್ರ್ಯದಿಂದ ಕ್ರಿಕೆಟಿಗನಾಗಲು ಸಾಧ್ಯವಾಯಿತು. ಅದಕ್ಕಾಗಿ ಅವರಿಗೆ ಋಣಿಯಾಗಿದ್ದೇನೆ.

ಫಿಟ್‌ ಇಂಡಿಯಾ: 2020ರ ವೇಳೆ ಭಾರತದಲ್ಲಿ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಯುವ ಜನರು ಇರುವ ದೇಶವಾಗಲಿದೆ. ಈ ಹಿನ್ನೆಲೆಯಲ್ಲಿ ಅದು ಸದೃಢ, ಆರೋಗ್ಯವಂತರ ದೇಶವಾಗಬೇಕು.

ಮಧುಮೇಹದ ರಾಜಧಾನಿ: ನಮ್ಮ ದೇಶದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಅದರಿಂದಾಗಿಯೇ ಈ ಕಾಯಿಲೆಗೆ ನಮ್ಮ ದೇಶ ಜಗತ್ತಿನಲ್ಲಿ ರಾಜಧಾನಿಯಾಗಿದೆ. ಬೊಜ್ಜಿನ ಸಮಸ್ಯೆಯಲ್ಲಿ ವಿಶ್ವದ 3ನೇ ಸ್ಥಾನದಲ್ಲಿದ್ದೇವೆ. ಈ ಕಾಯಿಲೆಗಳ ಆರ್ಥಿಕ ಹೊರೆ, ನಮ್ಮ ದೇಶದ ಅಭಿವೃದ್ಧಿ ಕುಂಠಿತಗೊಳಿಸುತ್ತದೆ. ವಿಶ್ವಸಂಸ್ಥೆಯ ವರದಿಯೊಂದರ ಪ್ರಕಾರ 2012-2030ರ ವರೆಗಿನ ಅವಧಿಯಲ್ಲಿ ಕಾಯಿಲೆಗಳಿಂದಾಗಿಯೇ ಸುಮಾರು 4 ಲಕ್ಷ ಕೋಟಿ ರೂ.ಗಳನ್ನು ದೇಶದ ಅರ್ಥ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

Advertisement

ಹೆಚ್ಚಾಗಬೇಕು ಕ್ರೀಡಾ ಸ್ಫೂರ್ತಿ
ಆರೋಗ್ಯವಂತ ಭಾರತ ನಿರ್ಮಾಣವಾಗಬೇಕಾದರೆ ಜನರು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಜತೆಗೆ ಕ್ರೀಡೋತ್ಸಾಹ ಇನ್ನೂ ಹೆಚ್ಚಬೇಕು. ಈಶಾನ್ಯ ರಾಜ್ಯಗಳು ಭಾರತದ ಶೇ.4ರಷ್ಟು ಜನಸಂಖ್ಯೆ ಹೊಂದಿದ್ದರೂ ಅಲ್ಲಿನ ಜನರ ಕ್ರೀಡೋತ್ಸಾಹ ಬಣ್ಣನೆಗೆ ನಿಲುಕದ್ದು. ಮೇರಿ ಕೋಂ, ಮೀರಾಬಾಯಿ ಚಾನು, ದೀಪಾ ಕರ್ಮಾಕರ್‌ ಹಾಗೂ ಬೈಚುಂಗ್‌ ಭುಟಿಯಾರಂಥ ಕ್ರೀಡಾಳುಗಳು ಅಲ್ಲಿಂದಲೇ ಬಂದಿದ್ದು. ಒಲಿಂಪಿಕ್ಸ್‌ಗೆ ದಿನಗಳು ಸಮೀಪಿಸುತ್ತಿರುವಂತೆಯೇ ಹೆಚ್ಚಿನ ಸಂಖ್ಯೆಯಲ್ಲಿ ಪದಕಗಳು ಬೇಕು ಎಂದು ಹೇಳಿಕೊಳ್ಳುತ್ತೇವೆ. ಅದಕ್ಕೆ ಆರಂಭದಿಂದಲೂ ತಯಾರಿ ಬೇಕು. ನಮ್ಮ ದೇಶದಲ್ಲಿ ಕ್ರೀಡಾಪಟಗಳಿಗೆ ಕೊರತೆ ಇಲ್ಲ. ಆದರೆ ಭಾರತ ಕ್ರೀಡಾ ಪಟುಗಳ ದೇಶವಾಗಿ ಬದಲಾಗಬೇಕು. ಹೀಗಾಗಿ ನನ್ನ ಕನಸಿನಲ್ಲಿ ನೀವೆಲ್ಲರೂ ಭಾಗವಹಿಸಿ. ಕನಸು ನನಸಾಗಿಸಲು ಪ್ರಯತ್ನಿಸುತ್ತೇನೆ. ದಕ್ಷಿಣ ಆಫ್ರಿಕಾದಲ್ಲಿ ರಗಿºಯನ್ನು ದಿ.ನೆಲ್ಸನ್‌ ಮಂಡೇಲಾ ಜನಪ್ರಿಯಗೊಳಿಸಿದ ರೀತಿ ನಮ್ಮ ದೇಶದಲ್ಲಿಯೂ ಕ್ರೀಡಾ ಸಾಮರಸ್ಯ ಹೆಚ್ಚುವಂತಾಗಬೇಕು ಎಂದು ಸಚಿನ್‌ ಹೇಳಿದ್ದಾರೆ.

ಮಕ್ಕಳ ಹಕ್ಕಾಗಬೇಕು
ಶಾಲೆಗಳಲ್ಲಿ ಕ್ರೀಡೆ ಮಕ್ಕಳ ಹಕ್ಕು ಆಗಬೇಕು. ಹತಾಶೆಗಳು ಇರುವಲ್ಲಿ ಕ್ರೀಡೆಗಳೇ ಆಶಾಭಾವನೆ ರೂಪಿಸಬಲ್ಲವು ಎಂದು ದಿ.ನೆಲ್ಸನ್‌ ಮಂಡೇಲಾ ಹೇಳಿದ್ದಾರೆ. ಮಕ್ಕಳು ಶಾಲೆಯಲ್ಲಿ ಚೆನ್ನಾಗಿ ಓದುತ್ತಾರೆಯೇ, ಊಟ- ತಿಂಡಿ ಮಾಡಿದರೇ ಎಂದು ಕೇಳುತ್ತಾರೆಯೇ ಹೊರತು ಚೆನ್ನಾಗಿ ಆಡಿದರೇ ಎಂದು ಕೇಳುವುದಿಲ್ಲ. ಹಾಗೆ ಕೇಳಿದರೆ ಅದು ನಿಜಕ್ಕೂ ಸಾಧನೆಯೇ ಆದೀತು ಎಂದಿದ್ದಾರೆ ಸಚಿನ್‌.
ನಿಮಗೆ (ಸಚಿನ್‌ ತೆಂಡುಲ್ಕರ್‌) ಭಾರತ ರತ್ನ ಕೊಟ್ಟಿರುವುದು ನಿಮ್ಮ ಸಾಧನೆಯನ್ನು ಗುರುತಿಸಿ. ನೀವು ರಾಜ್ಯಸಭೆಯಲ್ಲಿ ಮಾತನಾಡಲಿಕ್ಕಲ್ಲ. – ರೇಣುಕಾ ಚೌಧರಿ, ಕಾಂಗ್ರೆಸ್‌ ನಾಯಕಿ (ಸಂಸತ್ತಿನಲ್ಲಿ ಸಚಿನ್‌ ಮಾತನಾಡಲು ನಿಂತಿದ್ದಾಗ ನೀಡಿದ ಪ್ರತಿಕ್ರಿಯೆ)

ವಿಶ್ವದ ಅತ್ಯುತ್ತಮ ಕ್ರಿಕೆಟಿಗರಲ್ಲೊಬ್ಬರಾದ ಸಚಿನ್‌ ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿಸಿದ ಮಂದಿಯೇ (ಕಾಂಗ್ರೆಸ್‌ ಸಂಸದರು) ಅವರನ್ನು ಮಾತನಾಡಲು ಬಿಡಲಿಲ್ಲ.
– ಧರ್ಮೇಂದ್ರ ಪ್ರಧಾನ್‌, ಬಿಜೆಪಿ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next