ಮುಂಬಯಿ : 2013 ರಲ್ಲಿ ಕ್ರಿಕೆಟ್ ದೇವರು ಎಂದು ಕರೆಸಿಕೊಂಡ ಭಾರತ ರತ್ನ ಸಚಿನ್ ತೆಂಡೂಲ್ಕರ್ ಅವರ ನಿವೃತ್ತಿ ಅಭಿಮಾನಿಗಳಿಗೆ ಭಾವನಾತ್ಮಕ ಕ್ಷಣವಾಗಿತ್ತು. ಕ್ರಿಕೆಟ್ ದಿಗ್ಗಜ ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳಿಗೆ ಆರಾಧ್ಯ ದೈವವಾಗಿದ್ದರು ಮಾತ್ರವಲ್ಲದೆ ಅವರ ಕಿರಿಯ ಸಹ ಆಟಗಾರರಿಗೂ ನೆಚ್ಚಿನವರಾಗಿದ್ದರು.
ವಿರಾಟ್ ಕೊಹ್ಲಿ ಕೂಡ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ ತೆಂಡೂಲ್ಕರ್ ಅವರ ಒಡನಾಟ ಮತ್ತು ಮಾರ್ಗದರ್ಶನ ಪಡೆದಿದ್ದರು. ಇತ್ತೀಚೆಗಷ್ಟೇ ತೆಂಡೂಲ್ಕರ್ ತಮ್ಮ ನಿವೃತ್ತಿಯ ಭಾವನಾತ್ಮಕ ಕ್ಷಣವನ್ನು ನೆನಪಿಸಿಕೊಂಡಿದ್ದು,ಕೊಹ್ಲಿ ಅವರು ತನ್ನ ದಿವಂಗತ ತಂದೆ ನೀಡಿದ ಪವಿತ್ರ ದಾರವನ್ನು ಸಚಿನ್ ಅವರಿಗೆ ಉಡುಗೊರೆ ಯಾಗಿ ನೀಡಿದ್ದರು.
ತೆಂಡೂಲ್ಕರ್ ಯೂಟ್ಯೂಬ್ ಚಾನೆಲ್‌ನಲ್ಲಿ ಅಮೆರಿಕದ ಪತ್ರಕರ್ತ ಗ್ರಹಾಂ ಬೆನ್‌ಸಿಂಗರ್‌ಗೆ ನೀಡಿದ ಸಂದರ್ಶನದಲ್ಲಿ, ನಾನೊಬ್ಬನೇ ಒಂದು ಮೂಲೆಯಲ್ಲಿ ತಲೆಯ ಮೇಲೆ ಟವೆಲ್ ಹಾಕಿಕೊಂಡು ಕುಳಿತು, ಕಣ್ಣೀರು ಒರೆಸುತ್ತಿದ್ದೆ ಮತ್ತು ನಾನು ನಿಜವಾಗಿಯೂ ಭಾವುಕನಾಗಿದ್ದೆ. ಆ ಸಮಯದಲ್ಲಿ, ವಿರಾಟ್ ನನ್ನ ಬಳಿಗೆ ಬಂದರು ಮತ್ತು ಅವರ ತಂದೆ ಅವರಿಗೆ ನೀಡಿದ ಪವಿತ್ರ ದಾರವನ್ನು ನನಗೆ ನೀಡಿದರು” ಎಂದು ಹೇಳಿಕೊಂಡಿದ್ದಾರೆ.
ತಮ್ಮ ಉಡುಗೊರೆ ಆಯ್ಕೆಯ ಹಿಂದಿನ ಕಾರಣವನ್ನು ಕೊಹ್ಲಿ ವಿವರಿಸಿದ್ದು, “ನಾವು ಸಾಮಾನ್ಯವಾಗಿ ನಮ್ಮ ಮಣಿಕಟ್ಟಿನ ಸುತ್ತಲೂ ದಾರಗಳನ್ನು ಧರಿಸುತ್ತೇವೆ. ಭಾರತದಲ್ಲಿ, ಬಹಳಷ್ಟು ಜನರು ಧರಿಸುತ್ತಾರೆ. ನನ್ನ ತಂದೆ ಒಂದನ್ನು ಕೊಟ್ಟಿದ್ದರು ಅದನ್ನು ನನ್ನ ಚೀಲದಲ್ಲಿ ನನ್ನೊಂದಿಗೆ ಇಡುತ್ತಿದ್ದೆ. ನಂತರ ನಾನು ಯೋಚಿಸಿದೆ, ನನ್ನ ಬಳಿ ಇರುವ ಅತ್ಯಮೂಲ್ಯವಾದ ವಸ್ತು ಅದು, ನಾನು ಸಚಿನ್ ಅವರಿಗೆ ಹೆಚ್ಚು ಬೆಲೆಬಾಳುವ ಯಾವುದನ್ನೂ ನೀಡಲು ಸಾಧ್ಯವಿಲ್ಲ ಮತ್ತು ಅವರು ನನಗೆ ಎಷ್ಟು ಸ್ಫೂರ್ತಿ ನೀಡಿದ್ದಾರೆ. ಹಾಗಾಗಿ ಚಿಕ್ಕದಾದ ಉಡುಗೊರೆ ಕೊಟ್ಟಿ ದ್ದೇನೆ ಎಂದು ಹೇಳಿದ್ದಾರೆ.
ಕೊಹ್ಲಿಗೆ ಆ ಉಡುಗೊರೆಯನ್ನು ಹಿಂದಿರುಗಿಸಬೇಕೆಂದು ನಾನು ಭಾವಿಸಿದೆ. ಅದನ್ನು ಸ್ವಲ್ಪ ಸಮಯದವರೆಗೆ ಇಟ್ಟುಕೊಂಡ ನಂತರ ಅವನಿಗೆ ಹಿಂತಿರುಗಿಸಿದ್ದೇನೆ. ಇದು ಬೆಲೆ ಕಟ್ಟಲಾಗದ್ದು, ಇದು ನಿಮ್ಮೊಂದಿಗೆ ಇರಬೇಕೆ ಹೊರತು ಬೇರೆ ಯಾರೊಂದಿಗೂ ಅಲ್ಲ ಎಂದು ಹೇಳಿದ್ದೆ. ನಿಜವಾಗಿ ಇದು ಒಂದು ಭಾವನಾತ್ಮಕ ಕ್ಷಣವಾಗಿತ್ತು, ಅದು ನನ್ನ ನೆನಪಿನಲ್ಲಿ ಯಾವಾಗಲೂ ಇರುತ್ತದೆ ಎಂದು ಸಚಿನ್ ಹೇಳಿದ್ದಾರೆ.