Advertisement

ಮಹಿಳಾ ಕ್ರಿಕೆಟ್‌ನ ಸಚಿನ್‌ ತೆಂಡುಲ್ಕರ್‌! ಮಿಥಾಲಿ ರಾಜ್‌ 

03:55 AM Jul 08, 2017 | |

ಸಚಿನ್‌ ಅಂದ್ರೆ ಕ್ರಿಕೆಟ್‌, ಕ್ರಿಕೆಟ್‌ ಅಂದ್ರೆ ಸಚಿನ್‌ ಅನ್ನುವಷ್ಟರ ಮಟ್ಟಿಗೆ ಸಚಿನ್‌ ತೆಂಡುಲ್ಕರ್‌ ಕ್ರಿಕೆಟ್‌ನಲ್ಲಿ ಛಾಪು ಮೂಡಿಸಿದ್ದಾರೆ. ಆದರೆ ಅದೇ ರೀತಿ ಭಾರತದ ಮಹಿಳಾ ತಂಡದಲ್ಲಿಯೂ ಒಬ್ಬ ಸಚಿನ್‌ ಇದ್ದಾರೆ. ಒಂದರ ಹಿಂದೆ ಒಂದರಂತೆ ದಾಖಲೆ ನಿರ್ಮಿಸಿದ್ದಾರೆ. ತಂಡ ಆಪತ್ಕಾಲದಲ್ಲಿ ಇದ್ದಾಗ ನೆರವಾಗುತ್ತಾರೆ, ಎದುರಾಳಿ ಬೌಲರ್‌ಗಳನ್ನು ದಂಡಿಸುತ್ತಾರೆ. ಇವರು ತಂಡದಲ್ಲಿ ಇದ್ದರೆ ಆನೆಬಲ ಇದ್ದಂತೆ. ಅವರೇ ಮಿಥಾಲಿ ರಾಜ್‌.

Advertisement

ಭಾರತ ತಂಡಕ್ಕೆ ಮಿಥಾಲಿ ನಾಯಕಿ. ನಾಯಕತ್ವ ಸ್ಥಾನದ ಜತೆಗೆ ಭಾರತ ತಂಡದ ಪ್ರದರ್ಶನವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋದ ಖ್ಯಾತಿ ಇವರದು. ಬಲಾಡ್ಯ ತಂಡಗಳಾದ ಆಸ್ಟ್ರೇಲಿಯಾ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ….ತಂಡದ ಬೌಲರ್‌ಗಳನ್ನು ಚೆಂಡಾಡಿದ್ದಾರೆ. ಪದಾರ್ಪಣೆಯ ಪಂದ್ಯದಲ್ಲಿಯೇ ಶತಕ ಬಾರಿಸಿ ದಾಖಲೆ ನಿರ್ಮಿಸಿದ್ದಾರೆ. ಪ್ರಸ್ತುತ ಇಂಗ್ಲೆಂಡ್‌ನ‌ಲ್ಲಿ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿ ನಡೆಯುತ್ತಿದ್ದು, ಅಲ್ಲಿಯೂ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಇಂತಹ ಸಾಧನೆ ಮಾಡಿದ ಮಹಿಳಾ ತಂಡದ ಸಚಿನ್‌ ಎಂದೇ ಪ್ರಸಿದ್ಧರಾದ ಮಿಥಾಲಿ ಬಗ್ಗೆ ಒಂದು ಕಿರು ಪರಿಚಯ.

ಭರತನಾಟ್ಯದಿಂದ ಕ್ರಿಕೆಟ್‌ನತ್ತ
ಆಂಧ್ರ ಪ್ರದೇಶದಲ್ಲಿ ಜನಿಸಿದ ಮಿಥಾಲಿ, ಮೂಲತಃ ಒಬ್ಬ ಭರತನಾಟ್ಯ ಕಲಾವಿದೆ. ಪ್ರಾಥಮಿಕ ಶಾಲೆಯಲ್ಲಿರುವಗಾಲೇ ನೃತ್ಯದತ್ತ ಆಕರ್ಷಿತರಾಗಿ, ಅಭ್ಯಾಸದ ತರಗತಿಗೆ ಸೇರಿದ್ದರು. ಪ್ರಸಿದ್ಧ ಭರತ ನಾಟ್ಯ ಕಲಾವಿದೆ ಆಗುವ ಕನಸು ಕಂಡಿದ್ದರು. ಆದರೆ ಆಗಿದ್ದೇ ಬೇರೆ. ಶಾಲಾ ತಂಡದಲ್ಲಿ ಕ್ರಿಕೆಟ್‌ ಆಡಲು ಸಿಕ್ಕಿದ ಅವಕಾಶ ಮುಂದೆ ಒಬ್ಬ ಖ್ಯಾತ ಆಟಗಾರ್ತಿಯನ್ನಾಗಿ ರೂಪಿಸಿತು. ಕ್ರಿಕೆಟ್‌ನಲ್ಲಿ ಪರಿಣಿತಿ ಸಾಧಿಸಿದ ಮಿಥಾಲಿಗೆ ಕುಟುಂಬದಲ್ಲಿ ತುಂಬಾ ಪ್ರೋತ್ಸಾಹವಿತ್ತು. ರಾಜ್ಯ ತಂಡದಲ್ಲಿ ನೀಡಿದ ಅದ್ಭುತ ಪ್ರದರ್ಶನ ರಾಷ್ಟ್ರೀಯ ತಂಡದಲ್ಲಿಯೂ ಅವಕಾಶ ಕಲ್ಪಿಸಿತು. ಒಮ್ಮೆ ತಂಡಕ್ಕೆ ನುಗ್ಗಿದ ಮೇಲೆ ಮಿಥಾಲಿ ತಿರುಗಿ ನೋಡಿಲ್ಲ. ಆನಂತರ ತಂಡದ ನಾಯಕತ್ವ ವಹಿಸಿಕೊಂಡು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ಪಾದಾರ್ಪಣೆ ಪಂದ್ಯದಲ್ಲಿಯೇ ಶತಕ
ಮಿಥಾಲಿ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದು, 1999ರಲ್ಲಿ. ಐರೆಲಂಡ್‌ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದ ಮಿಥಾಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದರು. ಮೊದಲ ವಿಕೆಟ್‌ಗೆ ಆರ್‌.ಗಾಂಧಿ ಮತ್ತು ಮಿಥಾಲಿ 50 ಓವರ್‌ಗಳನ್ನು ಪೂರ್ತಿ ಆಡಿ 258 ರನ್‌ ಜತೆಯಾಟವಾಡಿದರು. ಇದರಲ್ಲಿ ಮಿಥಾಲಿ ಕೊಡುಗೆ 114 ರನ್‌. ಹೀಗೆ ಭರ್ಜರಿಯಾಗಿ ರಾಷ್ಟ್ರೀಯ ತಂಡಕ್ಕೆ ಎಂಟ್ರಿಯಾದ ಮಿಥಾಲಿ ನಂತರ ತಿರುಗಿ ನೋಡಲಿಲ್ಲ.

ಸತತ 7 ಅರ್ಧಶತಕದ ಸಾಧನೆ
ಮಹಿಳೆಯರ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಸತತ 7 ಅರ್ಧಶತಕ ದಾಖಲಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದೇ ರೀತಿ ಒಟ್ಟು 47 ಅರ್ಧಶತಕ ದಾಖಲಿಸುವ ಮೂಲಕ ಏಕದಿನದಲ್ಲಿ ಅತಿ ಹೆಚ್ಚು ಅರ್ಧಶತಕ ದಾಖಲಿಸಿದ ಆಟಗಾರ್ತಿ ಎಂಬ ದಾಖಲೆಯೂ ಮಿಥಾಲಿ ಹೆಸರಲ್ಲಿದೆ. ಇದಕ್ಕೂ ಮುನ್ನ ಇಂಗ್ಲೆಂಡ್‌ನ‌ ಚಾರ್ಲೊಟ್‌ ಎಡ್ವರ್ಡ್‌ 46 ಅರ್ಧಶತಕ ದಾಖಲಿಸಿರುವುದೇ ಗರಿಷ್ಠವಾಗಿತ್ತು.

Advertisement

ಗರಿಷ್ಠ ರನ್‌, ಗರಿಷ್ಠ ಪಂದ್ಯದತ್ತ ದಾಪುಗಾಲು
ಏಕದಿನ ಕ್ರಿಕೆಟ್‌ನಲ್ಲಿ ಮಿಥಾಲಿ ವಿಶ್ವದಲ್ಲಿಯೇ 2ನೇ ಗರಿಷ್ಠ ಮೊತ್ತ ಬಾರಿಸಿದ್ದಾರೆ. ಅದೇ ರೀತಿ ಗರಿಷ್ಠ ಪಂದ್ಯವನ್ನು ಆಡಿರುವ ದಾಖಲೆ ಕೂಡ ಸದ್ಯದಲ್ಲಿಯೇ ಈಕೆಯ ಪಾಲಾಗಲಿದೆ. ಇಂಗ್ಲೆಂಡ್‌ನ‌ ಮಾಜಿ ಆಟಗಾರ್ತಿ ಚಾರ್ಲೊಟ್‌ ಎಡ್ವರ್ಡ್‌ 191 ಪಂದ್ಯವನ್ನು ಆಡಿದ್ದು, 5992 ರನ್‌ ಬಾರಿಸಿ ಗರಿಷ್ಠ ರನ್‌ ಮತ್ತು ಗರಿಷ್ಠ ಪಂದ್ಯವನ್ನು ಆಡಿದ ದಾಖಲೆ ಹೊಂದಿದ್ದಾರೆ. ಮಿಥಾಲಿ ಈಗಾಗಲೇ 180 ಪಂದ್ಯ ಆಡಿದ್ದು, 5906 ರನ್‌ ಬಾರಿಸಿದ್ದಾರೆ. ಹೀಗಾಗಿ ಎಡ್ವರ್ಡ್‌ ಸಾಧನೆಯನ್ನು ಮುರಿಯಲು ಮಿಥಾಲಿಗೆ ಇನ್ನೂ 11 ಪಂದ್ಯ, 86 ರನ್‌ಗಳ ಅಗತ್ಯವಿದೆ.

ಭಾರತ ವಿಶ್ವಕಪ್‌ ಗೆಲ್ಲುತ್ತಾ?
ಪ್ರಸ್ತುತ ಇಂಗ್ಲೆಂಡ್‌ನ‌ಲ್ಲಿ ನಡೆಯುತ್ತಿರುವ ಏಕದಿನ ಮಹಿಳೆಯರ ವಿಶ್ವಕಪ್‌ನಲ್ಲಿ ಮಿಥಾಲಿ ನೇತೃತ್ವದ ಭಾರತ ತಂಡ ಭರ್ಜರಿ ಆರಂಭ ಪಡೆಯುವ ಮೂಲಕ ಇಂಥದೊಂದು ಆಸೆಯನ್ನು ಕ್ರೀಡಾಭಿಮಾನಿಗಳಲ್ಲಿ ಬಿತ್ತಿದೆ. ಈಗಾಗಲೇ ಲೀಗ್‌ನಲ್ಲಿ ಇಂಗ್ಲೆಂಡ್‌, ವೆಸ್ಟ್‌ ಇಂಡೀಸ್‌, ಪಾಕಿಸ್ತಾನದ ವಿರುದ್ಧ ಗೆದ್ದು ಬೀಗಿದೆ. ಮಿಥಾಲಿ ರಾಜ್‌, ಸ್ಮತಿ ಮಂಧನಾ, ಪೂನಂ ರಾವುತ್‌ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸುತ್ತಿದ್ದರೆ, ಏಕ್ತಾ ಬಿಸ್ಟ್‌, ಜೂಲನ್‌ ಗೋಸ್ವಾಮಿ ಎದುರಾಳಿಗಳನ್ನು ನಿಯಂತ್ರಿಸುತ್ತಿದ್ದಾರೆ. ಹೀಗಾಗಿ ಭಾರತ ಮಹಿಳೆಯರ ತಂಡ ಮೊದಲ ಬಾರಿಗೆ ವಿಶ್ವಕಪ್‌ ಗೆಲ್ಲುವ ಭರವಸೆ ಮೂಡಿಸಿದೆ. 2005ರ ಏಕದಿನ ವಿಶ್ವಕಪ್‌ನಲ್ಲಿ ಮಿಥಾಲಿ ರಾಜ್‌ ನೇತೃತ್ವದ ಭಾರತ ತಂಡ ವಿಶ್ವಕಪ್‌ ಫೈನಲ್‌ ತಲುಪಿದ್ದೇ ಗರಿಷ್ಠ ಸಾಧನೆಯಾಗಿತ್ತು. ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತವಾಗಿತ್ತು.

ಆದಿತ್ಯ ಎಚ್‌.ಎಸ್‌ 

Advertisement

Udayavani is now on Telegram. Click here to join our channel and stay updated with the latest news.

Next