ಮೆಲ್ಬೋರ್ನ್: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸುಮಾರು ಐದು ವರ್ಷಗಳ ಬಳಿಕ ಮೈದಾನದಲ್ಲಿ ಬ್ಯಾಟ್ ಬೀಸಿದ್ದಾರೆ. ಇಲ್ಲಿ ನಡೆದ ಬುಷ್ ಫೈರ್ ಸಹಾಯಾರ್ಥ ಪಂದ್ಯದಲ್ಲಿ ಸಚಿನ್ ಬ್ಯಾಟಿಂಗ್ ನಡೆಸಿದರು.
ಇಂದು ಪಾಂಟಿಂಗ್ ಇಲೆವೆನ್ ಮತ್ತು ಗಿಲ್ ಕ್ರಿಸ್ಟ್ ಇಲೆವೆನ್ ನಡುವಿನ ಪಂದ್ಯ ನಡೆಯಿತು. ಪಾಂಟಿಂಗ್ ಇಲೆವೆನ್ ತಂಡದ ಕೋಚ್ ಆಗಿದ್ದ ಸಚಿನ್ ಇನ್ನಿಂಗ್ಸ್ ಬ್ರೇಕ್ ವೇಳೆ ಬ್ಯಾಟಿಂಗ್ ನಡೆಸಿದರು. ಇದಕ್ಕೂ ಒಂದು ವಿಶೇಷ ಕಾರಣವಿತ್ತು.
ಸಚಿನ್ ಬ್ಯಾಟಿಂಗ್ ಮಾಡುವುದು ಮೊದಲು ನಿಗಧಿಯಾಗಿರಲಿಲ್ಲ. ಆದರೆ ಆಸೀಸ್ ಆಟಗಾರ್ತಿ ಎಲ್ಸಿ ಪೆರ್ರಿ ಸಚಿನ್ ಗೆ ವಿಶೇಷ ಕೋರಿಕೆ ಸಲ್ಲಿಸಿದ್ದರು. ನೀವು ನಿವೃತ್ತಿಯಿಂದ ಹೊರಬಂದು ನಮಗಾಗಿ ಒಂದು ಓವರ್ ಆಡಬೇಕು. ನಮಗೆ ಇದರಿಂದ ಸಂತಸವಾಗಲಿದೆ. ಮತ್ತು ದೇಣಿಗೆಯೂ ಹೆಚ್ಚಾಗಲಿದೆ ಎಂದು ಮನವಿ ಮಾಡಿದ್ದರು.
ಇದರಂತೆ ಇನ್ನಿಂಗ್ಸ್ ಬ್ರೇಕ್ ವೇಳೆ ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ಮಾಡಿದರು. ಎಲ್ಸಿ ಪೆರ್ರಿ ಬೌಲಿಂಗ್ ಮಾಡಿದರು. ಪೆರ್ರಿ ಮೊದಲ ಎಸೆತವನ್ನೇ ಸಚಿನ್ ಬೌಂಡರಿಗೆ ಬಾರಿಸಿದರು.
ಸಚಿನ್ ತೆಂಡೂಲ್ಕರ್ ಗೆ ಭುಜದ ನೋವಿದೆ. ವೈದ್ಯರು ಕ್ರಿಕೆಟ್ ಆಡಬಾರದು ಎಂದಿದ್ದರೂ ಉತ್ತಮ ಉದ್ದೇಶಕ್ಕಾಗಿ ಸಚಿನ್ ಕ್ರಿಕೆಟ್ ಆಡಿ ರಂಜಿಸಿದರು. 2013ರಲ್ಲಿ ನಿವೃತ್ತಿಯಾಗಿದ್ದ ಸಚಿನ್ 2014ರ ಪ್ರದರ್ಶನ ಪಂದ್ಯದಲ್ಲಿ ಆಡಿದ್ದರು.
ಸಹಾಯಾರ್ಥ ಪಂದ್ಯದಲ್ಲಿ ಪಾಂಟಿಂಗ್ ಇಲೆವೆನ್ ತಂಡ 1 ರನ್ ನಿಂದ ಗೆಲುವು ಸಾಧಿಸಿತು. ಪಾಂಟಿಂಗ್ ಇಲೆವೆನ್ 104 ರನ್ ಗಳಿಸಿದ್ದರೆ, ಗಿಲ್ ಕ್ರಿಸ್ಟ್ ಇಲೆವೆನ್ 103 ರನ್ ಗಳಿಸಿತು.