ಜೈಪುರ್/ನವದೆಹಲಿ:ಯುವ ನಾಯಕ ಸಚಿನ್ ಪೈಲಟ್ ಹಾಗೂ ಕಾಂಗ್ರೆಸ್ ನಡುವಿನ ಸಂಬಂಧ ಸಂಪೂರ್ಣ ಹಳಸಿ ಹೋಗಿದ್ದು, ಇದೀಗ ತಮ್ಮ ಮುಂದಿನ ನಡೆ ಏನು ಎಂಬ ಬಗ್ಗೆ ಬುಧವಾರ(15/07-20) ಬೆಳಗ್ಗೆ 10ಗಂಟೆಗೆ ನಡೆಸಲಿರುವ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸುವುದಾಗಿ ಪೈಲಟ್ ಅಧಿಕೃತವಾಗಿ ಘೋಷಿಸಿದ್ದಾರೆ.
ರಾಜಸ್ಥಾನ್ ರಾಜಕೀಯ ಬೆಳವಣಿಗೆಯಲ್ಲಿ ಪೈಲಟ್ ಬಳಗ ಕಾದು ನೋಡುವ ತಂತ್ರ ಅನುಸರಿಸಿತ್ತು. ಆದರೆ ಕಾಂಗ್ರೆಸ್ ಹೈಕಮಾಂಡ್ ಏಕಾಏಕಿ ಪೈಲಟ್ ಹಾಗೂ ಆಪ್ತರನ್ನು ವಜಾಗೊಳಿಸಿದೆ. ಈ ಘಟನೆ ನಂತರ ಟ್ವೀಟ್ ಮಾಡಿದ್ದ ಪೈಲಟ್, ಸತ್ಯಕ್ಕೆ ಕಿರುಕುಳ ನೀಡಬಹುದು, ಆದರೆ ಅದನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ತಿರುಗೇಟು ನೀಡಿದ್ದರು.
ರಾಜಕೀಯ ಜಟಾಪಟಿಯಲ್ಲಿ ಎರಡು ದಿನಗಳ ಕಾಲ ಸಾರ್ವಜನಿಕ ಹೇಳಿಕೆ ನೀಡದಿದ್ದ ಸಚಿನ್ ಪೈಲಟ್ ಮಂಗಳವಾರ ಅಧಿಕೃತವಾಗಿ ನಾಳೆ ಎಲ್ಲಾ ವಿಚಾರ ಬಹಿರಂಗಪಡಿಸುವುದಾಗಿ ತಿಳಿಸಿದ್ದಾರೆ.
ಅಶೋಕ್ ಗೆಹ್ಲೋಟ್ ನೇತೃತ್ವದ ಶಾಸಕಾಂಗ ಸಭೆಗೆ ಸಚಿನ್ ಪೈಲಟ್ ಮತ್ತು ಆಪ್ತರು ಗೈರು ಹಾಜರಾಗಿದ್ದರು. ಅಲ್ಲದೇ ತಾವು ಯಾವುದೇ ಕಾರಣಕ್ಕೂ ಶಾಸಕಾಂಗ ಸಭೆಗೆ ಹೋಗುವುದಿಲ್ಲ ಎಂದು ಪೈಲಟ್ ತಿಳಿಸಿದ್ದರು. ಈ ಎಲ್ಲಾ ರಾಜಕೀಯದ ಹಗ್ಗಜಗ್ಗಾಟದಲ್ಲಿ ಪೈಲಟ್ ಮತ್ತು ಆಪ್ತರು ಕಾಂಗ್ರೆಸ್ ಪಾಳಯದಿಂದ ಹೊರಬಿದ್ದಂತಾಗಿದೆ.
ಮೂಲಗಳ ಪ್ರಕಾರ, ತನ್ನ ಬೇಡಿಕೆ ಈಡೇರದಿದ್ದರೆ ತನ್ನ ದಾರಿ ತನಗೆ ಎಂಬುದಾಗಿ ಪೈಲಟ್ ಸ್ಪಷ್ಟಪಡಿಸಿದ್ದಾರೆನ್ನಲಾಗಿದೆ. ಒಂದು ವರ್ಷ ಕಾಲ ತನಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕೆಂಬ ಪೈಲಟ್ ಬೇಡಿಕೆಗೂ ಹೈಕಮಾಂಡ್ ಮನ್ನಣೆ ನೀಡಿಲ್ಲ ಎನ್ನಲಾಗಿದೆ. ತಮ್ಮ ಆಪ್ತರಿಗೆ ಉನ್ನತ ಸಚಿವ ಸ್ಥಾನ ನೀಡಬೇಕೆಂಬ ಬೇಡಿಕೆಗೂ ಕೈ ಹೈಕಮಾಂಡ್ ಮಣಿಯಲಿಲ್ಲ ಎಂಬುದಾಗಿ ವರದಿ ತಿಳಿಸಿದೆ.