Advertisement

ಪೈಲಟ್‌- ಗೆಹ್ಲೋಟ್‌ ಫೈಟ್‌! –ರಾಜಸ್ಥಾನದಲ್ಲಿ ಭುಗಿಲೆದ್ದ ಭಿನ್ನಮತ

08:47 PM Nov 24, 2022 | Team Udayavani |

ನವದೆಹಲಿ: ಕಾಂಗ್ರೆಸ್‌ ಅಧಿಕಾರದಲ್ಲಿರುವ ಏಕೈಕ ದೊಡ್ಡ ರಾಜ್ಯವಾದ ರಾಜಸ್ಥಾನದಲ್ಲಿ ಮತ್ತೆ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು ಮತ್ತೂಬ್ಬ ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ನಡುವಿನ ಜಗಳ ಉದ್ವಿಗ್ನಗೊಂಡಿದೆ.

Advertisement

ಸಚಿನ್‌ ಪೈಲಟ್‌ ಅವರನ್ನು ನೇರವಾಗಿಯೇ “ದ್ರೋಹಿ’ ಎಂದು ಕರೆದಿರುವ ಸಿಎಂ ಅಶೋಕ್‌ ಗೆಹ್ಲೋಟ್‌, ಪಕ್ಷದ ರಾಜ್ಯಾಧ್ಯಕ್ಷರಾಗಿದ್ದುಕೊಂಡು ತಮ್ಮದೇ ಪಕ್ಷದ ಸರ್ಕಾರವನ್ನು ಬೀಳಿಸಲು ನೋಡಿದ ಪೈಲಟ್‌ರನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ. ಅವರೊಬ್ಬ ವಂಚಕ ಮತ್ತು ದ್ರೋಹಿ ಎಂದು ಮತ್ತೆ ಮತ್ತೆ ಕರೆದಿದ್ದಾರೆ.

ಎನ್‌ಡಿಟಿವಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ  ಅಶೋಕ್‌ ಗೆಹ್ಲೋಟ್‌, ಸಚಿನ್‌ ಪೈಲಟ್‌ ಕುರಿತಂತೆ ಖಾರವಾಗಿಯೇ ಮಾತನಾಡಿದ್ದಾರೆ. 2018ರಲ್ಲಿ ಪಕ್ಷ ರಾಜಸ್ಥಾನದಲ್ಲಿ ಗೆದ್ದಾಗ, ಮುಖ್ಯಮಂತ್ರಿ ಪಟ್ಟವನ್ನು ರೋಟೇಶನ್‌ ಮಾದರಿಯಲ್ಲಿ ಹಂಚಿಕೊಳ್ಳಬೇಕು ಎಂಬ ಒಪ್ಪಂದವಾಗಿತ್ತು ಎಂದು ಸಚಿನ್‌ ಪೈಲಟ್‌ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಶೋಕ್‌ ಗೆಹ್ಲೋಟ್‌ಅಂಥ ಯಾವುದೇ ಒಪ್ಪಂದವಾಗಿರಲಿಲ್ಲ. ಬೇಕಾದರೆ ಮಾತುಕತೆ ವೇಳೆ ಇದ್ದ ಕೈ ನಾಯಕ ರಾಹುಲ್‌ ಗಾಂಧಿಯವರನ್ನೇ ಈ ಬಗ್ಗೆ ಕೇಳಿ ಎಂದಿದ್ದಾರೆ.

ಶಾ ಕೈವಾಡಕ್ಕೆ ಸಾಕ್ಷಿಯಿದೆ:

ಸಚಿನ್‌ ಪೈಲಟ್‌, ಮತ್ತವರ ಗುಂಪಿನ ದಂಗೆ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಧರ್ಮೇಂದ್ರ ಪ್ರಧಾನ್‌ ಇದ್ದಾರೆ. ಪ್ರತಿಯೊಬ್ಬ ಶಾಸಕರಿಗೂ 5ರಿಂದ 10 ಕೋಟಿ ರೂ. ನೀಡಲು ಮುಂದಾಗಿದ್ದರು. ನನ್ನ ಬಳಿ ಇದಕ್ಕೆ ಸಾಕ್ಷಿಗಳಿವೆ ಎಂದೂ ಅಶೋಕ್‌ ಗೆಹ್ಲೋಟ್‌ ಬಾಂಬ್‌ ಸಿಡಿಸಿದ್ದಾರೆ. ಸದ್ಯ ಸಚಿನ್‌ ಪೈಲಟ್‌ ಬಣದ ಶಾಸಕರು ಬಹಿರಂಗವಾಗಿಯೇ ಅಶೋಕ್‌ ಗೆಹ್ಲೋಟ್‌ ವಿರುದ್ಧ ಕಿಡಿಕಾರಿದ್ದು, ಪೈಲಟ್‌ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡುವಂತೆ ಒತ್ತಾಯಿಸಿದ್ದಾರೆ.

Advertisement

ಶಾಸಕರು ಒಪ್ಪಲ್ಲ :

ಪಕ್ಷ ವಿರೋಧಿ ಕೆಲಸ ಮಾಡಿದ ಸಚಿನ್‌ ಪೈಲಟ್‌ ಅವರನ್ನು ಸಿಎಂ ಸ್ಥಾನದಲ್ಲಿ ಕೂರಿಸಲು ಪಕ್ಷದ ಶಾಸಕರು ಒಪ್ಪಲ್ಲ. ಪೈಲಟ್‌ಗೆ ಕೇವಲ 10 ಶಾಸಕರ ಬಲವಿದೆ. ಆದರೆ, ನನಗೆ ಉಳಿದ 100ಕ್ಕೂ ಅಧಿಕ ಶಾಸಕರ ಬೆಂಬಲವಿದೆ. ಹೀಗಾಗಿ, ಸಚಿನ್‌ ಪೈಲಟ್‌ರನ್ನು ಮತ್ತೆ ಸಿಎಂ ಸ್ಥಾನದಲ್ಲಿ ಕೂರಿಸುವ ಮಾತೇ ಇಲ್ಲ ಎಂದು ಗೆಹ್ಲೋಟ್‌ ತಿಳಿಸಿದ್ದಾರೆ.

ಸುಳ್ಳು ಹೇಳಬೇಕಾದ ಅಗತ್ಯವಿಲ್ಲ:

ಗೆಹ್ಲೋಟ್‌ಅವರ ವಾಗ್ಧಾಳಿ ಮತ್ತು ಆರೋಪಗಳಿಗೆ ಪ್ರತಿಕ್ರಿಯಿಸಿರುವ ಸಚಿನ್‌ ಪೈಲಟ್‌, “ಅಶೋಕ್‌ ಗೆಹ್ಲೋಟ್‌ ಅವರು ನನ್ನನ್ನು ಅಸಮರ್ಥ, ದ್ರೋಹಿ ಎಂದೆಲ್ಲ ಆರೋಪ ಮಾಡಿದ್ದಾರೆ. ಈ ಆರೋಪಗಳು ಅನಗತ್ಯವಾದದ್ದು ಮತ್ತು ಸಂಪೂರ್ಣ ಸುಳ್ಳು’ ಎಂದಿದ್ದಾರೆ. ಅಲ್ಲದೇ, ಕಾಂಗ್ರೆಸ್‌ ಪಕ್ಷವನ್ನು ಬಲಿಷ್ಠಗೊಳಿಸುವುದೇ ನಮ್ಮೆಲ್ಲರ ಆದ್ಯತೆಯಾಗಿರಬೇಕು. ರಾಹುಲ್‌ಗಾಂಧಿಯವರ ಭಾರತ್‌ ಜೋಡೋ ಯಾತ್ರೆಯನ್ನು ಯಶಸ್ವಿಗೊಳಿಸಬೇಕು. ದೇಶಕ್ಕೆ ಬೇಕಾಗಿರುವುದು ಅದುವೇ. ಗುಜರಾತ್‌ ಚುನಾವಣೆ ಹತ್ತಿರದಲ್ಲಿದೆ. ಅಲ್ಲಿನ ಉಸ್ತುವಾರಿಯಾದ ಗೆಹ್ಲೋಟ್‌ ಅವರು ಗುಜರಾತ್‌ ಕಡೆ ಗಮನ ಹರಿಸಬೇಕು. ಇಂಥ ಪರಿಸ್ಥಿತಿಯಲ್ಲಿ ಈ ರೀತಿಯೆಲ್ಲ ಮಾತನಾಡುವುದು ಅವರ ಹಿರಿತನಕ್ಕೆ ತಕ್ಕುದಲ್ಲ ಎಂದೂ ಸಚಿನ್‌ ಪೈಲಟ್‌ ಹೇಳಿದ್ದಾರೆ.

ಸೋಲುವ ಭಯ:

ಶಾಸಕರ ದಂಗೆ ಹಿಂದೆ ಬಿಜೆಪಿ ಇತ್ತು ಎಂಬ ಅಶೋಕ್‌ ಗೆಹ್ಲೋಟ್‌ ಅವರ ಹೇಳಿಕೆ ಸತ್ಯಕ್ಕೆ ದೂರವಾದದ್ದು. ಸೋಲುವ ಭಯದಿಂದ ಗೆಹ್ಲೋಟ್‌ ಈ ರೀತಿ ಹೇಳುತ್ತಿದ್ದಾರೆ.– ಸತೀಶ್‌ ಪೂನಿಯಾ, ರಾಜಸ್ಥಾನ ಬಿಜೆಪಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next