Advertisement

ಆನ್‌ಲೈನ್‌ ಓದುಗರನ್ನು ಸೆಳೆಯಲು “ಸಭಾ ಮನೆ’

11:07 PM Jun 17, 2019 | Lakshmi GovindaRaj |

ಬೆಂಗಳೂರು: ಆನ್‌ಲೈನ್‌ ಕ್ಷೇತ್ರ ಇತ್ತೀಚಿನ ದಿನಗಳಲ್ಲಿ ಪ್ರಬಲ ಮಾಧ್ಯಮವಾಗಿ ಹೆಜ್ಜೆಯಿಡುತ್ತಿದ್ದು, ಕಾಲೇಜು ವಿದ್ಯಾರ್ಥಿಗಳು ಸೇರಿ ಯುವ ಸಮೂಹ ಈ ಮಾಧ್ಯಮದಲ್ಲಿ ಸಕ್ರಿಯವಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣದ ಓದುಗರಲ್ಲಿ ಸಾಹಿತ್ಯಾಸಕ್ತಿಯ ಅಭಿರುಚಿ ಬಿತ್ತಲು ಕರ್ನಾಟಕ ಸಾಹಿತ್ಯ ಅಕಾಡೆಮಿ “ಸಭಾ ಮನೆ’ಎಂಬ ವಿಶಿಷ್ಟ ಕಾರ್ಯಕ್ರಮ ರೂಪಿಸುತ್ತಿದೆ.

Advertisement

ಆನ್‌ಲೈನ್‌ ಕ್ಷೇತ್ರ ಇತ್ತೀಚಿನ ದಿನಗಳಲ್ಲಿ ತನ್ನದೇ ಆದ ಓದುಗರನ್ನು ಸೃಷ್ಟಿಸಿಕೊಂಡಿದೆ. ಇದರಲ್ಲಿ ಸಾಹಿತ್ಯದ ಬಗ್ಗೆ ಒಲವು ಹೊಂದಿರುವವರು ಹಲವರಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ಸೇರಿ ಹಲವರು ಫೇಸ್‌ಬುಕ್‌ ಮೇಲೆ ಒಮ್ಮೆ ಕಣ್ಣಾಯಿಸದೆ ಇರರು. ಇಂತವರನ್ನು ಸಾಹಿತ್ಯದ ಓದಿನತ್ತ ಸೆಳೆಯಲು ಸಾಹಿತ್ಯ ಅಕಾಡೆಮಿ ಸಭಾಮನೆ ಕಾರ್ಯಕ್ರಮ ರೂಪಿಸುವಲ್ಲಿ ನಿತರವಾಗಿದ್ದು, ಮುಂದಿನ ತಿಂಗಳಿಂದ ಕಾರ್ಯ ಆರಂಭಿಸಲಿದೆ.

ಫೇಸ್‌ಬುಕ್‌ನಲ್ಲಿ ಲೈವ್‌: ಕರ್ನಾಟಕ ಸಾಹಿತ್ಯ ಅಕಾಡೆಮಿ, ಸಾಹಿತ್ಯಕ್ಕೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಇದರಲ್ಲಿ ಸಭಾ ಮನೆ ಹೊಸ ಪ್ರವೃತ್ತಿಯದ್ದಾಗಿದೆ. ಸಾಹಿತ್ಯ ವಲಯದಲ್ಲಿ ಯಾವುದೇ ಹೊಸ ಪುಸ್ತಕ ಲೋಕಾರ್ಪಣೆಯಾಗಲಿ, ಆ ಪುಸ್ತಕಗಳ ಬಗ್ಗೆ ಹೆಸರಾಂತ ಸಾಹಿತಿಗಳು ಮಾತನಾಡಲಿದ್ದಾರೆ. ಇವರ ಜತೆಗೆ ಕಿರಿಯ ಸಾಹಿತಿಗಳು, ಲೇಖಕರು, ಬರಹಗಾರರೂ ಇರಲಿದ್ದಾರೆ.

ಫೇಸ್‌ಬುಕ್‌ ಮೂಲಕ ಸಭಾ ಮನೆ ಕಾರ್ಯಕ್ರಮ ನೇರ ಪ್ರಸಾರವಾಗಲಿದ್ದು, ಸಾಹಿತ್ಯಾಸಕ್ತರು ಹೊಸ ಪುಸ್ತಕದ ಬಗ್ಗೆ ಅತಿಥಿಗಳಿಗೆ ಪ್ರಶ್ನೆ ಕೇಳಬಹುದಾಗಿದೆ. ಈ ಪ್ರಯತ್ನ ಯಶಸ್ವಿಯಾಗುವ ಭರವಸೆಯನ್ನು ಅಕಾಡೆಮಿಯ ಹಿರಿಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಹೊರನಾಡ ಕನ್ನಡಿಗರಿಗೂ ಅನುಕೂಲ: ಫೇಸ್‌ಬುಕ್‌ ಮೂಲಕ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮ ನೇರ ಪ್ರಸಾರವಾದರೆ ಅದು ಹೊರನಾಡ ಮತ್ತು ಗಡಿನಾಡ ಸಾಹಿತ್ಯಾಸಕ್ತರನ್ನು ಕೂಡ ತಲುಪಲಿದೆ. ಜತೆಗೆ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಕೂಡ ಸಮಾರಂಭವನ್ನು ವೀಕ್ಷಿಸಬಹುದಾಗಿದೆ. ಫೇಸ್‌ಬುಕ್‌ ಲೈವ್‌ ಕಾರ್ಯಕ್ರಮ ಸಾಹಿತ್ಯಾಸಕ್ತರಿಗೆ ಹಲವು ರೀತಿಯಲ್ಲಿ ಅನುಕೂಲವಾಗಲಿದೆ ಎಂದು ಅಕಾಡೆಮಿ ಅಧಿಕಾರಿಗಳು ಹೇಳಿದ್ದಾರೆ.

Advertisement

ತಿಂಗಳಿಗೊಂದು ಕಾರ್ಯಕ್ರಮ: “ಸಭಾ ಮನೆ’ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಸಾಹಿತಿಗಳು ಭಾಗವಹಿಸಲಿದ್ದು, ತಿಂಗಳಿಗೊಂದು ಕಾರ್ಯಕ್ರಮ ಹಮ್ಮಿಕೊಳ್ಳುವ ಆಲೋಚನೆ ಅಕಾಡೆಮಿಯದ್ದಾಗಿದೆ. ಜತೆಗೆ ಈ ಕಾರ್ಯಕ್ರಮವನ್ನು ಯೂಟ್ಯೂಬ್‌ನಲ್ಲೂ ಅಪ್‌ಲೋಡ್‌ ಮಾಡಲಾಗುವುದು.

ಯೂ ಟ್ಯೂಬ್‌ಗ ಅಪ್‌ ಲೋಡ್‌ ಮಾಡುವುದು ಸೇರಿ ಅಂತರ್‌ ಜಾಲತಾಣದ ಇನ್ನಿತರ ಮಾಹಿತಿಗಾಗಿ ಹೆಸರಾಂತ ಆನ್‌ಲೈನ್‌ ಸಂಸ್ಥೆಗಳೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ ಎಂದು ಸಾಹಿತ್ಯ ಅಕಾಡೆಮಿ ಹಿರಿಯ ಅಧಿಕಾರಿಗಳು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ಈ ಹಿಂದೆ ಆಯ್ದ ಸಾಹಿತ್ಯಾಸಕ್ತರಿಗಾಗಿ ಅಕಾಡೆಮಿ “ಚಕೋರ’ಎಂಬ ವಾಟ್ಸ್‌ಆ್ಯಪ್‌ ಗ್ರೂಪ್‌ ಸೃಷ್ಟಿಸಿತ್ತು. ಈ ಗ್ರೂಪ್‌ ಈಗಾಗಲೇ ಸುಮಾರು 26 ಜಿಲ್ಲೆಗಳಲ್ಲಿ ಸಕ್ರಿಯವಾಗಿದ್ದು, ಅಕಾಡೆಮಿ ನಡೆಸುವ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಪೂರಕ ಮಾಹಿತಿ, ದೃಶ್ಯಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ. ಇದು ಯಶಸ್ವಿಯಾದ ನಂತರ ಫೇಸ್‌ಬುಕ್‌ ಲೈವ್‌ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಆನ್‌ಲೈನ್‌ ಕ್ಷೇತ್ರ ತನ್ನದೇ ಆದ ಓದುಗರನ್ನು ಸೃಷ್ಟಿಸಿಕೊಂಡಿದ್ದು, ಅಲ್ಲಿರುವ ಓದುಗರಿಗೆ ಸಾಹಿತ್ಯಾಸಕ್ತಿಯನ್ನು ಬಿತ್ತುವುದು ಸಭಾ ಮನೆ ಕಾರ್ಯಕ್ರಮದ ಮುಖ್ಯ ಉದ್ದೇಶ. ಇದಕ್ಕಾಗಿ ಅಕಾಡೆಮಿ ಸಿದ್ಧವಾಗುತ್ತಿದೆ.
-ಡಾ.ಅರವಿಂದ ಮಾಲಗತ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next