ಹೊಸದಿಲ್ಲಿ : ಎಲ್ಲ ವಯೋವರ್ಗದ ಮಹಿಳೆಯರಿಗೆ ಕೇರಳದ ಶಬರಿಮಲೆ ದೇವಳಕ್ಕೆ ಪ್ರವೇಶಾವಕಾಶ ಕಲ್ಪಿಸುವ ಮೂಲಕ ಸುಪ್ರೀಂ ಕೋರ್ಟ್ ದೇಶದ ಕೋಟ್ಯಂತರ ಹಿಂದುಗಳ ದಾರ್ಮಿಕ ಭಾವನೆಗಳನ್ನು ನೋಯಿಸಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಆರೋಪಿಸಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿ ನಡೆದಿರುವ ವಿಶ್ವ ಹಿಂದೂ ಪರಿಷತ್ ಧರ್ಮ ಸಂಸದ್ ನಲ್ಲಿ ಮಾತನಾಡುತ್ತಿದ್ದ ಭಾಗವತ್, ಸುಪ್ರೀಂ ಕೋರ್ಟಿನ ಆದೇಶವನ್ನು ಗೌರವಿಸಲಾಗಿದೆಯಾದರೂ ಅದು ತನ್ನ ತೀರ್ಪನ್ನು ಅವಸರದಿಂದ ಮತ್ತು ಹಿಂದೂ ಧಾರ್ಮಿಕ ಭಾವನೆಗಳನ್ನು ಲೆಕ್ಕಿಸದೆ ನೀಡಿದೆ ಎಂದು ಟೀಕಿಸಿದರು.
ಪ್ರಯಾಗ್‌ರಾಜ್ ನಲ್ಲಿ ಇಂದು ಗುರುವಾರದಿಂದ ಎರಡು ದಿನಗಳ ಮಹೋನ್ನತ ವಿಹಿಂಪ ಧರ್ಮ ಸಂಸದ್ ಆರಂಭಗೊಂಡಿದೆ.
‘ದೇವರ ಅಸ್ತಿತ್ವವನ್ನೇ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ’ ಎಂದು ಆರೋಪಿಸಿದ ಭಾಗವತ್, ‘ಶಬರಿಮಲೆ ಒಂದು ಸಾರ್ವಜನಿಕ ಸ್ಥಳ ಅಲ್ಲ; ಅದೊಂದು ಹಿಂದೂ ದೇವಾಲಯ’ ಎಂದು ಹೇಳಿದರು.
‘ಶಬರಿಮಲೆ ದೇವಸ್ಥಾನ ಸಂಕೀರ್ಣದಲ್ಲಿ ನಾಲ್ಕು ದೇವಳಗಳಿವೆ. ಇವುಗಳಲ್ಲಿ ಅಯ್ಯಪ್ಪ ಸ್ವಾಮಿ ದೇವಳಕ್ಕೆ ಮಾತ್ರವೇ ಮಹಿಳೆಯರಿಗೆ ಪ್ರವೇಶ ಇಲ್ಲ. ಇದನ್ನು ಅರಿಯದೆ ಸುಪ್ರೀಂ ಕೋರ್ಟ್ ಅವಸರದ ತೀರ್ಪು ನೀಡಿದೆ ಮತ್ತು ಆ ಮೂಲಕ ದೇವರ ಅಸ್ತಿತ್ವವನ್ನೇ ಪ್ರಶ್ನಿಸಿದೆ’ ಎಂದು ಭಾಗವತ್ ಹೇಳಿದರು.
‘ತನ್ನ ತೀರ್ಪಿನಿಂದ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ನೋವುಂಟಾದೀತು ಎಂಬುದನ್ನು ಸುಪ್ರೀಂ ಕೋರ್ಟ್ ಪರಿಗಣಿಸಲೇ ಇಲ್ಲ. ಇದೀಗ ಹಿಂದುಗಳ ಮನನೋಯಿಸುವ ಬೇರೆ ಕೆಲವು ಹುನ್ನಾರಗಳನ್ನು ರೂಪಿಸಲಾಗುತ್ತಿದೆ; ಅಯ್ಯಪ್ಪನ ಭಕ್ತರು ಕೇರಳಕ್ಕೆ ಮಾತ್ರವೇ ಸೀಮಿತವಾಗಿಲ್ಲ; ವಿಶ್ವಾದ್ಯಂತ ಅಯ್ಯಪ್ಪ ಭಕ್ತರಿದ್ದಾರೆ’ ಎಂದು ಭಾಗವತ್ ಹೇಳಿದರು.