Advertisement

ಶಬರಿಮಲೆ ಪ್ರಸಾದ ಇನ್ನೂ ಸ್ವಾದಿಷ್ಟ

05:20 AM Apr 30, 2018 | Team Udayavani |

ತಿರುವನಂತಪುರ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಸಿಗುವ ಪ್ರಸಾದ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ? ಪ್ರತಿಯೊಬ್ಬರೂ ಒಂದಲ್ಲ ಒಂದು ಬಾರಿ ಅದರ ರುಚಿ ಸವಿದಿರುತ್ತೀರಿ. ಇನ್ನು ಮುಂದೆ ಈ ‘ಅಪ್ಪಮ್‌’ ಮತ್ತು ‘ಅರವಣ’ ಪ್ರಸಾದ ಇನ್ನಷ್ಟು ಸ್ವಾದಿಷ್ಟವಾಗಿರಲಿದೆ. ಮೈಸೂರಿನ ಕೇಂದ್ರ ಆಹಾರ ತಾಂತ್ರಿಕ ಸಂಶೋಧನ ಸಂಸ್ಥೆ (CFTRI) ಸದ್ಯದಲ್ಲೇ ಅಪ್ಪಮ್‌ ಮತ್ತು ಅರವಣ ಪ್ರಸಾದಕ್ಕೆ ಹೊಸ ರುಚಿ ನೀಡಲಿದೆ. ಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಸಿಗುವ “ಲಡ್ಡು’, ಪಳನಿ ಸ್ವಾಮಿ ಮುರುಗ ದೇವಸ್ಥಾನದಲ್ಲಿ ಸಿಗುವ “ಪಂಚಾಮೃತಂ’ ಪ್ರಸಾದ ತಯಾರಿಕೆಗೆ ಮಾರ್ಗದರ್ಶನ ನೀಡುತ್ತಿರುವಂಥ CFTRI, ಇನ್ನು ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಸಿಗುವ ಅಪ್ಪಮ್‌ ಮತ್ತು ಅರವಣಕ್ಕೂ ಹೊಸ ಸ್ವಾದ ಮೂಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ.

Advertisement

ಏನು ಬದಲಾವಣೆ? 
ಅಪ್ಪಮ್‌, ಅರವಣ ಪ್ರಸಾದದ ಗುಣಮಟ್ಟ, ಸ್ವಾದ ಮತ್ತು ಬಾಳಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ CFTRI ಕಾರ್ಯನಿರ್ವಹಿಸಲಿದೆ. ಸಂಸ್ಥೆಯ ತಜ್ಞರ ತಂಡ ಆಗಮಿಸಿ ಪ್ರಸಾದ ತಯಾರಕರಿಗೆ ತರಬೇತಿ ನೀಡಲಿದೆ. ಪ್ರಸ್ತುತ ಸ್ವಲ್ಪ ಗಟ್ಟಿ ಇರುವ ಅಪ್ಪಮ್‌ ಅನ್ನು ಮೆದುವಾಗಿಯೂ ಸಿಹಿಯಾಗಿಯೂ ಇರುವಂತೆ ನೋಡಿಕೊಳ್ಳಲು ನಿರ್ಧರಿಸಲಾಗಿದೆ. ಅರವಣದಲ್ಲಿನ ಬೆಲ್ಲದ ಪ್ರಮಾಣವನ್ನು ಶೇ. 30-40ರಷ್ಟು ಕಡಿಮೆಗೊಳಿಸಿ, ಹೆಚ್ಚು ಸ್ವಾದಿಷ್ಟಗೊಳ್ಳುವಂತೆ ಮಾಡಲಾಗುತ್ತದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮೇ 16ರಂದು CFTRI ಜತೆ ಒಪ್ಪಂದಕ್ಕೆ ಸಹಿ ಹಾಕಿ ಮುಂದಿನ ಶಬರಿಮಲೆ ಯಾತ್ರೆಯ ಅವಧಿಯಲ್ಲೇ ಹೊಸ ಬಗೆಯ ಪ್ರಸಾದ ಸಿಗುವಂತೆ ಮಾಡಲಾಗುತ್ತದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧ್ಯಕ್ಷ ಎ. ಪದ್ಮಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next