Advertisement

ಕೆಂಡವಾದ ಕಣ್ಣೂರು

12:30 AM Jan 06, 2019 | Team Udayavani |

ತಿರುವನಂತಪುರ: ಮಹಿಳೆಯರ ದೇಗುಲ ಪ್ರವೇಶಕ್ಕೆ ಸಂಬಂಧಿಸಿ ಕೇರಳದಲ್ಲಿ ಎದ್ದಿರುವ ಆಕ್ರೋಶದ ಬೆಂಕಿ ಇನ್ನೂ ತಣ್ಣಗಾಗಿಲ್ಲ. ಗುರುವಾರ ಆರಂಭವಾದ ಹಿಂಸಾಚಾರ ಶನಿವಾರವೂ ಮುಂದುವರಿದಿದ್ದು, “ಪ್ರತೀಕಾರದ ರಾಜಕೀಯ ಹತ್ಯೆಗಳ ತವರೂರು’ ಎಂದೇ ಕುಖ್ಯಾತಿ ಪಡೆದಿರುವ ಕಣ್ಣೂರು ಬೆಂಕಿಯುಂಡೆಯಾಗಿ ಬದಲಾಗಿದೆ. ಇಲ್ಲಿ ಬಿಜೆಪಿ- ಆರೆಸ್ಸೆಸ್‌ ಹಾಗೂ ಆಡಳಿತಾರೂಢ ಸಿಪಿಎಂ ಕಾರ್ಯಕರ್ತರು ಹಾಗೂ ನಾಯಕರ ಮನೆಗಳು, ಅಂಗಡಿಗಳ ಮೇಲೆ ಬಾಂಬ್‌ ದಾಳಿ, ಕಲ್ಲು ತೂರಾಟ, ಚೂರಿ ಇರಿತದಂಥ ಪ್ರಕರಣಗಳು ವರದಿಯಾಗಿವೆ. ಹಿಂಸಾಚಾರ ಮುಂದುವರಿದಿರುವಂತೆಯೇ ರಾಜಕೀಯ ಪಕ್ಷಗಳ ಆರೋಪ- ಪ್ರತ್ಯಾರೋಪಗಳೂ ಆರಂಭವಾಗಿದ್ದು, ಗಲಭೆಗೆ ನೀವೇ ಕಾರಣ ಎಂದು ಬಿಜೆಪಿ ಹಾಗೂ ಸಿಪಿಎಂ ಪರಸ್ಪರ ಆರೋಪಿಸತೊಡಗಿವೆ.

Advertisement

ಬಾಂಬ್‌ ಎಸೆತ, ಚೂರಿ ಇರಿತ
ಶುಕ್ರವಾರ ರಾತ್ರಿ ಕಣ್ಣೂರಿನ ಇರಿಟ್ಟಿಯಲ್ಲಿ ಸಿಪಿಎಂ ಕಾರ್ಯಕರ್ತರೊಬ್ಬರಿಗೆ ಚೂರಿ ಇರಿದ ಘಟನೆ ನಡೆದಿದೆ. ಮಡಪೀಡಿಕಾಯಿಲ್‌ನಲ್ಲಿ ಸಿಪಿಎಂ ಶಾಸಕ ಎ.ಎನ್‌. ಶಮೀರ್‌ ನಿವಾಸದ ಮೇಲೆ ಬಾಂಬ್‌ ಎಸೆಯಲಾಗಿದೆ. ಇವರಲ್ಲದೆ ಬಿಜೆಪಿ ರಾಜ್ಯಸಭಾ ಸದಸ್ಯ ವಿ. ಮುರಳೀಧರನ್‌ ಅವರ ತಲಶೆರಿಯ ಮನೆಯ ಮೇಲೆ ಬಾಂಬ್‌ ಎಸೆದಿದ್ದಾರೆ. ಸಿಪಿಎಂ ಕಣ್ಣೂರು ಜಿಲ್ಲಾ ಮಾಜಿ ಕಾರ್ಯದರ್ಶಿ ಪಿ. ಶಶಿ ಮನೆ ಮೇಲೂ ಬಾಂಬ್‌ ದಾಳಿ ನಡೆಸಲಾಗಿದೆ. ಆದರೆ ಈ ಘಟನೆಗಳಲ್ಲಿ ಯಾವುದೇ ಸಾವು ನೋವು ಉಂಟಾಗಿಲ್ಲ. ಕಣ್ಣೂರಿನಲ್ಲಿರುವ ಆರೆಸ್ಸೆಸ್‌ ಕಚೇರಿಗೂ ಬೆಂಕಿ ಹಚ್ಚಲಾಗಿದೆ. ಆರೆಸ್ಸೆಸ್‌ ನಾಯಕ ಕೆ. ಚಂದ್ರಶೇಖರನ್‌ ಅವರ ಮೇಲೆ ಶುಕ್ರವಾರ ರಾತ್ರಿ ಹಲ್ಲೆ ನಡೆದಿದೆ. ಈ ಜಿಲ್ಲೆಯಲ್ಲಿ ಹಿಂಸಾಚಾರ ಭುಗಿಲೇಳುವ ಸಾಧ್ಯತೆ ಅಧಿಕವಾಗಿದೆ ಎಂದು ಗುಪ್ತಚರ ದಳ ಮಾಹಿತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್‌ ನಿಯೋಜಿಸಲಾಗಿದೆ. 

8 ಮಹಿಳೆಯರ ಪ್ರವೇಶ!
ಸೆ.28ರ ಸುಪ್ರೀಂ ಕೋರ್ಟ್‌ ತೀರ್ಪಿನ ಬಳಿಕ ಒಟ್ಟು 8 ಮಂದಿ ಮಹಿಳೆಯರು ಶಬರಿಮಲೆ ದೇಗುಲ ಪ್ರವೇಶಿಸಿ ಅಯ್ಯಪ್ಪನ ದರ್ಶನ ಮಾಡಿದ್ದಾರೆ ಎಂದು ಕೇರಳ ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ ಇದನ್ನು ಶಬರಿಮಲೆ ಕರ್ಮ ಸಮಿತಿ ತಳ್ಳಿಹಾಕಿದ್ದು, ಪೊಲೀಸರು ಹೇಳುತ್ತಿರುವುದು ಶುದ್ಧ ಸುಳ್ಳು. ಅಲ್ಲದೆ, ಶ್ರೀಲಂಕಾ ಮಹಿಳೆ ಶಶಿಕಲಾ ಅವರು ಗುರುವಾರ ರಾತ್ರಿ ಅಯ್ಯಪ್ಪ 
ದರ್ಶನ ಪಡೆದಿದ್ದಾರೆ ಎಂಬುದು ಕೂಡ ಸುಳ್ಳು ಎಂದೂ ಸಮಿತಿ ಹೇಳಿದೆ.

15, 24ಕ್ಕೆ ಮೋದಿ ರ್ಯಾಲಿ
ಪ್ರಧಾನಿ ನರೇಂದ್ರ ಮೋದಿ ಅವರು ಸದ್ಯದಲ್ಲೇ ಕೇರಳಕ್ಕೆ ಭೇಟಿ ನೀಡಲಿದ್ದು, 15ರಂದು ಕೇರಳದ ಕೊಲ್ಲಂನಲ್ಲಿ ಹಾಗೂ 24ರಂದು ತ್ರಿಶೂರ್‌ನಲ್ಲಿ ಎರಡು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಇದಕ್ಕೂ ಮುನ್ನ ಜ.6ರಂದು ಪ್ರಧಾನಿ ಪಟ್ಟಣಂತಿಟ್ಟದಲ್ಲಿ ರ್ಯಾಲಿ ನಡೆಸುತ್ತಾರೆ ಎಂದು ಹೇಳಲಾಗಿತ್ತು.

ಶಬರಿಮಲೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ತೀರ್ಪು ಕೊಟ್ಟಾಗಿದೆ. ಎಲ್ಲರಿಗೂ ಸಮಾನ ಹಕ್ಕು ಎಂಬ ವಿಚಾರ ದಲ್ಲಿ ವಿಶ್ವಸಂಸ್ಥೆ ಯಾವತ್ತೂ ರಾಜಿ ಮಾಡಿಕೊಳ್ಳುವುದಿಲ್ಲ. ಹಾಗಾಗಿ ಕಾನೂನನ್ನು ಎಲ್ಲರೂ ಗೌರವಿಸಬೇಕು.
– ಆ್ಯಂಟೋನಿಯೋ ಗುಟೆರಸ್‌, ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ

Advertisement
Advertisement

Udayavani is now on Telegram. Click here to join our channel and stay updated with the latest news.

Next