Advertisement

ಮತ್ತೆ ತೆರೆದ ಶಬರಿಮಲೆ​​​​​​​

06:00 AM Nov 06, 2018 | Team Udayavani |

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ನೀಡುವಂತೆ ಆದೇಶಿಸಿ ಸುಪ್ರೀಂಕೋರ್ಟ್‌ ಆದೇಶ ಹೊರಡಿಸಿದ ನಂತರ ಎರಡನೇ ಬಾರಿಗೆ ಸೋಮವಾರ ಪೊಲೀಸರ ಸರ್ಪಗಾವಲಿನಲ್ಲಿ ದೇಗುಲದ ಬಾಗಿಲು ತೆರೆದಿದೆ. 

Advertisement

ಚೆರ್ತಲ ಭಾಗದ ಒಬ್ಬ ಮಹಿಳೆ ದೇಗುಲ ಪ್ರವೇಶಕ್ಕೆ ಅವಕಾಶ ಕೋರಿದ್ದು, ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಅವರು ಪಂಪಾಕ್ಕೆ ಪ್ರವೇಶಿಸಿದ್ದಾರೆ. ಮಹಿಳೆ ಪ್ರವೇಶ ಕೋರಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಭಕ್ತರು ತೀವ್ರ ಪ್ರತಿಭಟನೆ ನಡೆಸಿದ್ದಾರೆ.

ಇದೇ ವೇಳೆ, ಈಕೆ ಹೋರಾಟಗಾರ್ತಿಯೇ ಎಂಬುದನ್ನು ಪತ್ತೆ ಮಾಡಲು ಪೊಲೀಸರು ಆಕೆಯ ಹಿನ್ನೆಲೆ ಪರಿಶೀಲನೆ ನಡೆಸುತ್ತಿರುವುದರಿಂದ ಮಂಗಳವಾರ ಪ್ರವೇಶಕ್ಕೆ ಅವಕಾಶ ನೀಡುವ ಸಾಧ್ಯತೆ ಕಡಿಮೆ.  ರಾಜ್ಯ ಹಾಗೂ ಹೊರರಾಜ್ಯಗಳಿಂದ ಸಾವಿರಾರು ಭಕ್ತಾದಿಗಳು ದೇಗುಲ ಪ್ರವೇಶಕ್ಕಾಗಿ ಆಗಮಿಸಿದ್ದಾರೆ. ಸಂಜೆ 5 ಗಂಟೆ ಸುಮಾರಿಗೆ ಬಾಗಿಲು ತೆರೆಯಲಾಗಿದ್ದು, ವಿಶೇಷ ಪೂಜೆ ಸಲ್ಲಿಸಿ ಮಂಗಳವಾರ ರಾತ್ರಿ 10 ಗಂಟೆಗೆ ಮುಚ್ಚಲಾಗುತ್ತದೆ. 

ಜಾಮರ್‌ ಅಳವಡಿಕೆ
ದೇಗುಲದ ಭದ್ರತೆಗಾಗಿ ಸೋಮವಾರ 2300 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಅಲ್ಲದೆ ತಂತ್ರಿ ಹಾಗೂ ಇತರ ದೇಗುಲದ ಆಡಳಿತ ಮಂಡಳಿ ಸದಸ್ಯರ ಕಚೇರಿಯ ಸುತ್ತ ಜಾಮರ್‌ಗಳನ್ನು ಅಳವಡಿಸಲಾಗಿದೆ. ಇವರು ಮಾಧ್ಯಮದವರೊಂದಿಗೆ ಮಾತನಾಡದಂತೆ ಹಾಗೂ ದೇಗುಲದ ಯಾವುದೇ ಮಾಹಿತಿಯನ್ನು ಹೊರಬಿಡದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಭದ್ರತೆಗಾಗಿ ಸೇನಾ ಕಮಾಂಡೋಗಳನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿ ನಿಗಾ ವಹಿಸಲು ಕ್ಯಾಮೆರಾಗಳನ್ನೂ ಅಳವಡಿಸಲಾಗಿದೆ.

50ಕ್ಕಿಂತ ಹೆಚ್ಚು ವರ್ಷದ ಪೊಲೀಸರ ನೇಮಕ
ದೇಗುಲದಲ್ಲಿ ಭದ್ರತೆಗಾಗಿ 50ಕ್ಕಿಂತ ಹೆಚ್ಚು ವಯಸ್ಸಾದ ಮಹಿಳಾ ಪೊಲೀಸರನ್ನೇ ನೇಮಿಸಲಾಗಿತ್ತು. ಇತಿಹಾಸದಲ್ಲೇ ಮೊದಲ ಬಾರಿಗೆ ದೇಗುಲದ ಬಳಿ ಮಹಿಳಾ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ದೇಗುಲ ಸಂಜೆ ಬಾಗಿಲು ತೆರೆಯುತ್ತಿದ್ದಂತೆ ಈ ಮಹಿಳಾ ಪೊಲೀಸರು ಶ್ರದ್ಧೆ ಭಕ್ತಿಯಿಂದ ಅಯ್ಯಪ್ಪನನ್ನು ಕಣ್ತುಂಬಿಕೊಂಡರು. ಸುಮಾರು 15 ಮಹಿಳೆಯರನ್ನು ಇಲ್ಲಿ ನಿಯೋಜಿಸಲಾಗಿದೆ.

Advertisement

ಭಕ್ತರು, ಮಾಧ್ಯಮದವರನ್ನು ತಡೆಯಬೇಡಿ
ಶಬರಿಮಲೆ ದೇಗುಲ ಭೇಟಿಗೆ ಭಕ್ತರು ಮತ್ತು ಮಾಧ್ಯಮದ ಸಿಬ್ಬಂದಿಯನ್ನು ತಡೆಯಬಾರದು ಎಂದು ಕೇರಳ ಹೈಕೋರ್ಟ್‌ ಸೋಮವಾರ ಆದೇಶ ನೀಡಿದೆ. ದೇಗುಲದ ದಿನನಿತ್ಯದ ಚಟುವಟಿಕೆಯಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಬಾರದು ಎಂದೂ ಕೋರ್ಟ್‌ ಈ ವೇಳೆ ಹೇಳಿದೆ. ಅಲ್ಲದೆ ಕಳೆದ ತಿಂಗಳು ದೇಗುಲ ತೆರೆದಾಗ ನಡೆದ ಗಲಭೆಯಲ್ಲಿ ಭಕ್ತರ ವಾಹನಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಪೊಲೀಸರ ಪಾತ್ರದ ಬಗ್ಗೆ ಇಲಾಖೆ ಮಟ್ಟದ ತನಿಖೆ ನಡೆಸಬೇಕು ಎಂದು ಕೋರ್ಟ್‌ ಸೂಚನೆ ನೀಡಿದೆ. 

ಪಕ್ಷಕ್ಕೆ ಸುವರ್ಣಾವಕಾಶ ಎಂದ ಬಿಜೆಪಿ ಮುಖ್ಯಸ್ಥ?
ಶಬರಿಮಲೆ ವಿಷಯವು ಪಕ್ಷಕ್ಕೆ ಸುವರ್ಣಾವಕಾಶ ಎಂದು ಕೇರಳ ಬಿಜೆಪಿ ಅಧ್ಯಕ್ಷ ಪಿ.ಎಸ್‌.ಶ್ರಿಧರನ್‌ ಪಿಳ್ಳೆ„ ಹೇಳಿದ್ದಾರೆ ಎನ್ನಲಾಗಿರುವ ವಿಡಿಯೋವೊಂದು ಬಿಡುಗಡೆಯಾಗಿದ್ದು, ಭಾರಿ ವೈರಲ್‌ ಆಗಿದೆ. ಮಹಿಳೆಯರು ದೇಗುಲಕ್ಕೆ ಪ್ರವೇಶಿಸಿದರೆ ಗರ್ಭಗುಡಿಯನ್ನು ಮುಚ್ಚುವುದಾಗಿ ಬೆದರಿಕೆ ಒಡ್ಡುವುದಕ್ಕೂ ಮೊದಲು ಮುಖ್ಯ ಅರ್ಚಕರಾದ ಕಂದರಾರು ರಾಜೀವರು ನನ್ನ ಸಲಹೆ ಪಡೆದಿದ್ದರು ಎಂದೂ ಈ ವಿಡಿಯೋದಲ್ಲಿ ಪಿಳ್ಳೆ„ ಹೇಳಿದ್ದಾರೆ ಎನ್ನಲಾಗಿದೆ. ಕಲ್ಲಿಕೋಟೆಯಲ್ಲಿ ಯುವ ಮೋರ್ಚಾ ರಾಜ್ಯ ಸಮಿತಿಯನ್ನು ಉದ್ದೇಶಿಸಿ ಅವರು ಮಾತನಾಡುವಾಗ ಹೀಗೆ ಹೇಳಿದ್ದಾರೆ. ದೇಗುಲವನ್ನು ಮುಚ್ಚಿದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಅರ್ಚಕರು ಬೆದರಿದ್ದರು. ಹೀಗಾಗಿ ನನ್ನ ಸಲಹೆ ಪಡೆದಿದ್ದರು ಎಂದು ಪಿಳ್ಳೆ„ ಹೇಳಿದ್ದಾರೆ. ಈ ಬಗ್ಗೆ ನಂತರ ಪ್ರತಿಕ್ರಿಯೆ ನೀಡಿದ ಪಿಳ್ಳೆ„, ಈ ವಿಡಿಯೋ ಬಿಜೆಪಿ ಯುವ ಮೋರ್ಚಾ ಫೇಸ್‌ಬುಕ್‌ ಪುಟದಲ್ಲೇ ಇದೆ. ಯುವ ಕಾರ್ಯಕರ್ತರನ್ನು ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿ ಪ್ರತಿಭಟನೆ ನಡೆಸಲು ಸ್ಫೂರ್ತಿ ನೀಡುವ ಮಾತು ಇದಾಗಿತ್ತು. ಇದನ್ನು ಈಗ ದುರುದ್ದೇಶದಿಂದ ಬಳಕೆ ಮಾಡಲಾಗುತ್ತಿದೆ ಎಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಪಿಣರಾಯಿ ವಿಜಯನ್‌, ಇದು ಬಿಜೆಪಿಯ ಕುತಂತ್ರವನ್ನು ಬಹಿರಂಗಪಡಿಸಿದೆ. ಶಬರಿಮಲೆ ದೇಗುಲದಲ್ಲಿ ಸಮಸ್ಯೆ ಸೃಷ್ಟಿಸಲು ಬಿಜೆಪಿ ಯೋಜನೆ ರೂಪಿಸಿದ್ದಕ್ಕೆ ಸಾಕ್ಷಿ ಇದರಲ್ಲಿ ಸಿಕ್ಕಿದೆ ಎಂದಿದ್ದಾರೆ.

ಬೆಳಗ್ಗೆ ಭಕ್ತರ ಪ್ರತಿಭಟನೆ
ದೇಗುಲದ ಬಾಗಿಲು ತೆರೆಯುವ ಹಲವು ಗಂಟೆಗಳಿಗೂ ಮುನ್ನವೇ ಶಬರಿಮಲೆಯತ್ತ ಭಾರಿ ಸಂಖ್ಯೆಯಲ್ಲಿ ವಾಹನಗಳು ಹೊರಟಿದ್ದವು. ಭಕ್ತರ ತಪಾಸಣೆಗಾಗಿ ವಾಹನಗಳನ್ನು ಗಂಟೆಗಟ್ಟಲೆ ನಿಲ್ಲಿಸಿಕೊಂಡಿದ್ದಕ್ಕೆ ಭಕ್ತರು ಪೊಲೀಸರ ವಿರುದ್ಧ ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ ಘಟನೆಯೂ ಸೋಮವಾರ ಬೆಳಗ್ಗೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next