ನವದೆಹಲಿ: ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತ ತೀರ್ಪಿನ ಮರುಪರಿಶೀಲನಾ ಅರ್ಜಿಯ ಕುರಿತು ಸುಪ್ರೀಂಕೋರ್ಟ್ ನ ವಿಸ್ತೃತ ಪೀಠ ಅಂತಿಮ ತೀರ್ಪು ಪ್ರಕಟಿಸುವವರೆಗೆ ಶಬರಿಮಲೆ ದೇವಾಲಯದೊಳಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಬೇಕು. ಈ ಹಿನ್ನೆಲೆಯಲ್ಲಿ ನವೆಂಬರ್ 16ರಂದು ಶಬರಿಮಲೆಗೆ ತೆರಳಿ ಪ್ರಾರ್ಥನೆ ಸಲ್ಲಿಸುವುದಾಗಿ ಮಹಿಳಾ ಹೋರಾಟಗಾರ್ತಿ ತೃಪ್ತಿ ದೇಸಾಯಿ ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ಇಂದು ನೀಡಿರುವ ತೀರ್ಪಿನಲ್ಲಿ ಮಹಿಳೆಯರಿಗೆ ಪ್ರವೇಶ ನೀಡಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿಗೆ ತಡೆ ನೀಡಿಲ್ಲ. ಹೀಗಾಗಿ ಮಹಿಳೆಯರ ಪ್ರವೇಶಕ್ಕೆ ಅವಕಾಶ ಇದೆ. ಯಾರೊಬ್ಬರು ಇದರ ಬಗ್ಗೆ ಪ್ರತಿಭಟಿಸಲು ಸಾಧ್ಯವಿಲ್ಲ. ಎಲ್ಲಾ ವಯೋಮಾನದ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ಅವಕಾಶವಿದೆ. ಈ ನಿಟ್ಟಿನಲ್ಲಿ ನವೆಂಬರ್ 16ಕ್ಕೆ ಮತ್ತೆ ಶಬರಿಮಲೆಗೆ ತೆರಳುವುದಾಗಿ ಹೇಳಿದ್ದಾರೆ.
ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ಪಂಚಸದಸ್ಯ ಪೀಠ ತೀರ್ಪು ನೀಡಿದ ನಂತರ ಕಳೆದ ವರ್ಷ ನವೆಂಬರ್ ನಲ್ಲಿ ತೃಪ್ತಿ ದೇಸಾಯಿ ಶಬರಿಮಲೆ ಪ್ರವೇಶಕ್ಕೆ ಯತ್ನಿಸಿ ವಿಫಲರಾಗಿದ್ದರು.
ಈ ಬಗ್ಗೆ ಕೇರಳದಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು. ಅಲ್ಲದೇ ಸಂಪ್ರದಾಯದ ವಿರುದ್ಧವಾಗಿ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಬಲಪಂಥೀಯ ಸಂಘಟನೆಗಳು, ಶಬರಿಮಲೆ ಭಕ್ತರು ಆಗ್ರಹಿಸಿದ್ದರು.
ನಂತರ 2018ರಲ್ಲಿ ಸುಪ್ರೀಂಕೋರ್ಟ್ ಶಬರಿಮಲೆ ಕುರಿತು ನೀಡಿರುವ ತೀರ್ಪನ್ನು ಮರುಪರಿಶೀಲಿಸಬೇಕೆಂದು ಕೋರಿ ಹಲವಾರು ಮೇಲ್ಮನವಿ ಸಲ್ಲಿಕೆಯಾಗಿತ್ತು. ಈ ಕುರಿತು ಅರ್ಜಿ ವಿಚಾರಣೆ ನಡೆಸಿ ಸುಪ್ರೀಂಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಈ ಕುರಿತು ತೀರ್ಪು ನೀಡಿದ ಸುಪ್ರೀಂಕೋರ್ಟ್ ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತು ಸಲ್ಲಿಕೆಯಾಗಿದ್ದ ಮರುಪರಿಶೀಲನಾ ಅರ್ಜಿಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿ ಆದೇಶ ನೀಡಿದೆ.