ಕೇಪ್ ಟೌನ್: ಇಲ್ಲಿನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆದ ಸೌತ್ ಆಫ್ರಿಕಾ ಟಿ20 ಲೀಗ್ ನಲ್ಲಿ ಡರ್ಬನ್ ಸೂಪರ್ ಜೈಂಟ್ಸ್ ವಿರುದ್ಧ ಸುಲಭ ಗೆಲುವು ಸಾಧಿಸಿದ ಸನ್ ರೈಸರ್ಸ್ ಈಸ್ಟರ್ನ್ ಕೇಪ್ ತಂಡವು ಸತತ ಎರಡನೇ ಬಾರಿ ಚಾಂಪಿಯನ್ ಆಗಿದೆ. ಕೂಟದುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದ ಡರ್ಬನ್ ಕೊನೆಯಲ್ಲಿ ಎಡವಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದೆ.
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ತಂಡವು 20 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿದರೆ, ಡರ್ಬನ್ ಸೂಪರ್ ಜೈಂಟ್ಸ್ ತಂಡವು 17 ಓವರ್ ಗಳಲ್ಲಿ ಕೇವಲ 115 ರನ್ ಗೆ ಆಲೌಟಾಯಿತು. ಈ ಮೂಲಕ ಸನ್ ರೈಸರ್ಸ್ ಈಸ್ಟರ್ನ್ ಕೇಪ್ ತಂಡವು 89 ರನ್ ಗಳ ಭಾರಿ ಅಂತರದ ಗೆಲುವು ಸಾಧಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಸನ್ ರೈಸರ್ಸ್ ತಂಡವು ಆರಂಭದಲ್ಲಿ ಮಲಾನ್ ವಿಕೆಟ್ ಕಳೆದುಕೊಂಡರೂ ನಂತರ ಜೋರ್ಡಾನ್ ಹೆರ್ಮಾನ್ ಮತ್ತು ಟಾಮ್ ಅಬೆಲ್ ಉತ್ತಮ ರನ್ ಪೇರಿಸಿದರು. ಅಬೆಲ್ 55 ರನ್ ಗಳಿಸಿದರೆ, ಜೋರ್ಡಾನ್ 42 ರನ್ ಮಾಡಿದರು. ನಂತರ ಜೊತೆಗೂಡಿದ ನಾಯಕ ಮಾರ್ಕ್ರಮ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅಜೇಯ 98 ರನ್ ಜೊತೆಯಾಟವಾಡಿದರು. ಸ್ಟಬ್ಸ್ 30 ಎಸೆತಗಳಲ್ಲಿ 56 ರನ್ ಮಾಡಿದರೆ, ಮಾರ್ಕ್ರಮ್ 26 ಎಸೆತಗಳಲ್ಲಿ 42 ರನ್ ಗಳಿಸಿದರು.
ಗುರಿ ಬೆನ್ನತ್ತಿದ ಡರ್ಬನ್ ಪರವಾಗಿ ಯಾವುದೇ ಬ್ಯಾಟರ್ ದೊಡ್ಡ ಇನ್ನಿಂಗ್ಸ್ ಆಡಲಿಲ್ಲ. 38 ರನ್ ಗಳಿಸಿದ ವಿಯಾನ್ ಮುಲ್ಡರ್ ಅವರದ್ದೇ ಹೆಚ್ಚಿನ ಗಳಿಕೆ. ಕೂಟದಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಹೆನ್ರಿಚ್ ಕ್ಲಾಸನ್ ಶೂನ್ಯಕ್ಕೆ ಔಟಾಗಿದ್ದು ದೊಡ್ಡ ಹಿನ್ನಡೆಯಾಯಿತು.
ಸನ್ ರೈಸರ್ಸ್ ಪರವಾಗಿ ಮ್ಯಾರ್ಕೊ ಜೆನ್ಸನ್ ಐದು ವಿಕೆಟ್ ಕಿತ್ತರೆ, ಡ್ಯಾನಿಯಲ್ ವೂರಲ್ ಮತ್ತು ಬಾರ್ಟಮನ್ ತಲಾ ಎರಡು ವಿಕೆಟ್ ಕಿತ್ತರು.
ಟಾಮ್ ಅಬೆಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದರೆ, ಹೆನ್ರಿಚ್ ಕ್ಯಾಸನ್ ಸರಣಿಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡರು.
ಸತತ ಪ್ರಶಸ್ತಿ ಗೆದ್ದ ಸನ್ ರೈಸರ್ಸ್ ತಂಡದ ಮಾಲಕಿ ಕಾವ್ಯಾ ಮಾರನ್ ಕುಣಿದಾಡಿದರು. ಬಳಿಕ ತಂಡದೊಂದಿಗೆ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಕೂಡಿಕೊಂಡರು. ಗೆಲುವಿನ ನಂತರ ಪ್ರಸಾರಕರೊಂದಿಗೆ ಮಾತನಾಡಿದ ಅವರು, ಸತತ ಎರಡನೇ ಬಾರಿ ಪ್ರಶಸ್ತಿ ಗೆದ್ದಿರುವುದು ಸಂತಸ ತಂದಿದೆ ಎಂದರು.