ಮೈಸೂರು: ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಯಾವಾಗ ಜ್ಯೋತಿಷ್ಯ ಹೇಳುತ್ತಿದ್ದಾರೋ ಗೊತ್ತಿಲ್ಲ. ಈಗ ವಿರೋಧ ಪಕ್ಷದ ನಾಯಕರಾಗಿದ್ದರೂ ಕೆಲಸ ಇಲ್ಲದೆ ಜ್ಯೋತಿಷ್ಯ ಕಲಿಯುತ್ತಿರಬೇಕು. ಅದಕ್ಕೆ ಮುಖ್ಯಮಂತ್ರಿಗಳ ಬದಲಾವಣೆ ಬಗ್ಗೆ ಮಾತನಾಡುತ್ತಿರಬೇಕು ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಹೇಳಿದರು.
ಸಿದ್ದರಾಮಯ್ಯ ಅವರಿಗೆ ಈಗ ಪುರುಸೊತ್ತು ಇರಬೇಕು. ವಿರೋಧ ಪಕ್ಷದ ನಾಯಕರಾಗಿ ಮಾಡಬೇಕಾದ ಕೆಲಸವನ್ನು ಮಾಡುವುದು ಬಿಟ್ಟು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಮೊದಲಿಗೆ ಅವರ ಪಕ್ಷದಲ್ಲಾಗುತ್ತಿರುವುದನ್ನು ನೋಡಿಕೊಳ್ಳಲಿ. ನಮ್ಮ ಪಕ್ಷದ ಉಸಾಬರಿ ಯಾಕೆ? ಮುಖ್ಯಮಂತ್ರಿಗಳ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಸಿದ್ದರಾಮಯ್ಯ ಸರ್ಟಿಫಿಕೇಟ್ ಬೇಡ: ಸಿದ್ದರಾಮಯ್ಯ ಪದೇ ಪದೇ ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ತಮ್ಮ ಪಕ್ಷದಲ್ಲಿನ ಗೊಂದಲಗಳನ್ನು ಬಗೆಹರಿಸಿಕೊಳ್ಳಲಿ. ಪ್ರಚಾರಕ್ಕಾಗಿ ಅವರು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಮುಖ್ಯಮಂತ್ರಿಗಳು ಕೋವಿಡ್ ಹಾಗೂ ಉಳಿದ ಪರಿಸ್ಥಿತಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆಂದು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರೇ ಹೇಳಿದ್ದಾರೆ. ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ಇನ್ನು 2.5 ವರ್ಷ ಅವರೇ ಆಡಳಿತ ನಡೆಸುತ್ತಾರೆ. ಉತ್ತಮ ಮತ್ತು ದಕ್ಷ ಆಡಳಿತ ನೀಡುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನಮಗೆ ಶಾ ಅವರ ಸರ್ಟಿಫಿಕೇಟ್ ಸಾಕು. ಸಿದ್ದರಾಮಯ್ಯ ಅವರ ಸರ್ಟಿಫಿಕೇಟ್ ಬೇಡ. ಅದನ್ನು ಅವರೇ ಇಟ್ಟುಕೊಳ್ಳಲಿ ಎಂದು ಸಚಿವರು ಹೇಳಿದರು.
ಬೆಂಗಳೂರು ಅಭಿವೃದ್ಧಿ ಸಿಡಿ ಮಾತ್ರ ಗೊತ್ತು: ನನಗೆ ಯಾವುದೇ ಸಿಡಿ ಬಗ್ಗೆ ಮಾಹಿತಿ ಇಲ್ಲ. ನನಗೆ ಗೊತ್ತಿರುವುದು ಬೆಂಗಳೂರು ಅಭಿವೃದ್ಧಿಯ ಸಿಡಿ. ಮುಖ್ಯಮಂತ್ರಿಗಳು ಈಗಾಗಲೇ 2 ಸಭೆ ನಡೆಸಿ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಚರ್ಚಿಸಿದ್ದಾರೆ. ಅದಕ್ಕೊಂದು ರೂಪುರೇಷೆ ನೀಡಿ ಸಂಬಂಧಿಸಿದ ಸಿಡಿಯನ್ನು ನಮಗೆ ಕಳುಹಿಸುವುದಾಗಿ ಹೇಳಿದ್ದಾರೆ. ಅದು ಬಿಟ್ಟು ಬೇರೆ ಮಾಹಿತಿ ನನಗೆ ಇಲ್ಲ. ಅದನ್ನು ಹೇಳಿದವರಿಗೇ ಕೇಳಬೇಕು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು
ಇದನ್ನೂ ಓದಿ:ಲಂಡನ್ ನಿಂದ ನಾಯಿಮರಿ ತರಿಸಿಕೊಡುವುದಾಗಿ ಹಣ ಪಡೆದು ವಂಚನೆ
ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರ “ಡಬಲ್ ಇಂಜಿನ್” ಅಭಿವೃದ್ಧಿ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಚಿವರಾದ ಸೋಮಶೇಖರ್ ಅವರು, ರಾಜ್ಯದಲ್ಲಿಯೂ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಸಿಕ್ಕಿದ್ದಲ್ಲದೆ, ವೇಗ ಪಡೆದುಕೊಂಡಿದೆ. ಕೋವಿಡ್ ಹಿನ್ನೆಲೆಯಲ್ಲಿ 8-9 ತಿಂಗಳು ಎಲ್ಲ ಕಡೆಯೂ ಅಭಿವೃದ್ಧಿ ಕುಂಠಿತಗೊಂಡಿತ್ತು. ಆದರೆ, ಈಗ ಎಲ್ಲವೂ ಪ್ರಾರಂಭವಾಗಿದೆ. ಒಂದೊಂದು ಕ್ಷೇತ್ರಕ್ಕೆ ಲೋಕೋಪಯೋಗಿಯಿಂದ ಸುಮಾರು 25 ಕೋಟಿ ರೂಪಾಯಿಯಂತೆ ಅನುದಾನ ಬಿಡುಗಡೆ ಮಾಡಲಾಗಿದೆ. ಹೀಗೆ ಒಂದೊಂದಾಗಿ ಚಾಲನೆ ನೀಡಲಾಗುತ್ತಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್ ನಲ್ಲಿದ್ದಾಗ ನಾವು ಎಸ್ ಬಿ ಎಂ; ಈಗ ನಾನು ಬಿಜೆಪಿ ಸೋಮಶೇಖರ್ ನಾವು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಎಸ್ ಬಿಎಂ ಆಗಿದ್ದೆವು. ಈಗ ಬಿಜೆಪಿ ಸೇರಿದ್ದೇವೆ. ಈಗೇನಿದ್ದರೂ ನಾನು ಬಿಜೆಪಿ ಸೋಮಶೇಖರ್ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.