ಬೆಂಗಳೂರು: ಬಮೂಲ್ ನೇಮಕಾತಿಯಲ್ಲೂ ಅಕ್ರಮ ಆರೋಪ ವಿಚಾರಕ್ಕೆ ಸಂಬಂಧಿಸಿ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರಿಗೆ ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್ ತಿರುಗೇಟು ನೀಡಿದ್ದು,ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸೋಮಶೇಖರ್, ”ಈ ಹಿಂದೆ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಇತ್ತು. ಆಗ ಒಂದು ಆದೇಶ ಹೊರಡಿಸಿದ್ದರು. ಆಗ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್ ಜತೆ ಕುಮಾರಸ್ವಾಮಿ ಮಾತನಾಡಿ ಆ ಆದೇಶ ಹೊರಡಿಸಿದ್ದರು” ಎಂದರು.
”ನಾವು ಬಮೂಲ್ ನಲ್ಲಿ ಐದು ಸಾವಿರ ನೇಮಕಾತಿಗೆ ಘೋಷಣೆ ಮಾಡಿದ್ದೆವು. ಕೋವಿಡ್ ಸಂದರ್ಭದಲ್ಲಿ ಆದೇಶ ಮಾಡಿ,ಹದಿನೈದು ಮಿಲ್ಕ್ ಯೂನಿಯನ್ಸ್ ಪೈಕಿ ಹತ್ತು ಯೂನಿಯನ್ಸ್ ಗೆ ನೇಮಕಾತಿಗೆ ಸೂಚಿಸಿದ್ದೆ. ಅಕ್ರಮ ಸಂಬಂಧ ಡಿ.ಕೆ. ಸುರೇಶ್ ದೂರು ಕೊಟ್ಟಿದ್ದರು. ಆ ಹಿನ್ನೆಲೆಯಲ್ಲಿ ಒಬ್ಬ ಅಧಿಕಾರಿಯನ್ನ ನೇಮಕ ಮಾಡಿದ್ದೆವು. ಈಗಾಗಲೇ ಆ ಅಧಿಕಾರಿ ವರದಿಯನ್ನು ಕೊಟ್ಟಿದ್ದಾರೆ” ಎಂದರು.
”ಕುಮಾರಸ್ವಾಮಿ ಎಲ್ಲಾ ಹದಿನಾಲ್ಕು ಯೂನಿಯನ್ ಗಳಲ್ಲೂ ಅಕ್ರಮ ನಡೆದಿದೆ ಎಂದು ದೂರು ಕೊಟ್ಟಿದ್ದಾರೆ. ಎಲ್ಲಾ ಕಡೆ ಅಕ್ರಮದ ದೂರು ನೀಡಿದರೆ ಹೇಗೆ ? ಇವರ ತಮ್ಮ ಸಹಕಾರ ಸಚಿವರಾಗಿರಲಿಲ್ಲವಾ ? ಇವರ ಸಹೋದರ ಕೆಎಂಎಫ್ ಅಧ್ಯಕ್ಷ ಆಗಿರಲಿಲ್ವಾ? ಬಂಡೆಪ್ಪ ಕಾಶೆಂಪುರ್ ಆಗ ಸಹಕಾರ ಸಚಿವರಾಗಿರಲ್ಲವಾ ? ಆರೋಪ ಮಾಡಬೇಕಾದರೆ ದಾಖಲೆ ಇಟ್ಟು ಮಾಡಬೇಕು. ಬಹುಶಃ ಅವರು ಸಿಎಂ ಆದ ಅವಧಿಯಲ್ಲಿ ಅಕ್ರಮ ಆಗಿದೆ ಅನಿಸುತ್ತದೆ. ಹೀಗಾಗಿ ಆರೋಪ ಮಾಡಿದ್ದಾರೆ” ಎಂದು ತಿರುಗೇಟು ನೀಡಿದ್ದಾರೆ.
ಪ್ರಿಯಾಂಕ್ ಖರ್ಗೆಗೆ ಪೋಲಿಸ್ ನೋಟಿಸ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ಬಸವರಾಜ್ ಬೊಮ್ಮಾಯಿ ಇದನ್ನ ತುಂಬಾ ಗಂಭೀರವಾಗಿ ಪರಿಗಣಿಸಿದ್ದಾರೆ. ಯಾರು ಎಷ್ಟೇ ದೊಡ್ಡ ಮನುಷ್ಯರಾಗಿರಲಿ. ಬಲಿಹಾಕುವಂತೆ ಸೂಚನೆ ನೀಡಿದ್ದಾರೆ. ಯಾರಿಗೂ ಅನ್ಯಾಯವಾಗಬಾರದು. ಪ್ರಿಯಾಂಕ್ ಖರ್ಗೆ ಕ್ಯಾಸೆಟ್ ಬಿಡುಗಡೆ ಮಾಡಿದ್ದರು. ಹಾಗಾಗಿ ಪೋಲಿಸರು ಇದು ಎಲ್ಲಿಂದ ಬಂತು ಅಂತ ಕೇಳಿದ್ದಾರೆ. ಇದಕ್ಕೆ ಪ್ರಿಯಾಂಕ್ ಖರ್ಗೆ ಸಹಕಾರ ಕೊಡಬೇಕು. ಆಗ ಇದಕ್ಕೆ ಪರಿಹಾರ ಸಿಕ್ಕಂತಾಗಲಿದೆ ಎಂದರು.