Advertisement

ಅಮೂಲ್ –ಕೆಎಂಎಫ್ ವಿಲೀನ ಇಲ್ಲ: ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟನೆ

07:02 PM Jan 01, 2023 | Team Udayavani |

ಬೆಂಗಳೂರು: ಕೆಎಂಎಫ್ ಮತ್ತು ಗುಜರಾತ್‍ನ ಅಮೂಲ್ ವಿಲೀನದ ಪ್ರಶ್ನೆ ಇಲ್ಲ. ಕೆಎಂಎಫ್ ವಿಲೀನದ ಕುರಿತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಮಾತನಾಡಿಲ್ಲ ಎಂದು ರಾಜ್ಯದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ತಿಳಿಸಿದರು.

Advertisement

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕೆಎಂಎಫ್ ಬಲಿಷ್ಠ ಸಂಸ್ಥೆ. 15 ಮಿಲ್ಕ್ ಯೂನಿಯನ್, 9 ಲಕ್ಷ ಮಹಿಳೆಯರು ಸೇರಿ 26 ಲಕ್ಷ ಇದರಡಿ ಬರುತ್ತಾರೆ. ಸಾವಿರಾರು ಕೋಟಿ ವ್ಯವಹಾರ ನಡೆಯುತ್ತಿದೆ ಎಂದು ವಿವರಿಸಿದರು.

ಇಲ್ಲಿನ ಮಿಲ್ಕ್ ಯೂನಿಯನ್ ಮತ್ತು ಫೆಡರೇಶನ್ ಗುಜರಾತ್‍ನಷ್ಟೇ ಪ್ರಬಲವಾಗಿ ಬೆಳೆದಿದೆ. ವಿಲೀನ ಪ್ರಸ್ತಾಪ ಇಲ್ಲವೆಂದು ಮುಖ್ಯಮಂತ್ರಿಗಳೂ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿದ್ದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೂ ಇದರ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. ಕರ್ನಾಟಕದ ಪ್ರತಿ ಗ್ರಾಮಗಳಲ್ಲೂ ಮಿಲ್ಕ್ ಡೈರಿ ಮಾಡಬೇಕು; ಪತ್ತಿನ ಸಹಕಾರ ಸಂಘಕ್ಕೆ ಹೊಸ ನಿಯಮಾವಳಿ ಮಾಡಬೇಕು. 3 ವರ್ಷಗಳೊಳಗೆ ಒಂದೇ ಸಾಫ್ಟ್‍ವೇರ್ ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಸರಕಾರ ಸೂಚಿಸಿದೆ ಎಂದು ವಿವರಿಸಿದರು.

ಹೊಸ ಸಾಫ್ಟ್‍ವೇರ್ ಅಳವಡಿಸಲು ಶೇ 60ರಷ್ಟು ಹಣವನ್ನು ಕೇಂದ್ರ ಸರಕಾರ ಕೊಡಲಿದೆ. ಒಂದೇ ನಿಯಮಾವಳಿ, ಒಂದೇ ಸಾಫ್ಟ್‍ವೇರ್ ಅಳವಡಿಕೆ ಆಗಲಿದೆ. ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ರೇಷನ್ ಡಿಪೊ, ಪೆಟ್ರೋಲ್ ಬಂಕ್ ನಿರ್ವಹಣೆ ಇನ್ನಿತರ ಅವಕಾಶಗಳಿದ್ದರೆ ಅನುಮತಿ ಕೊಡಲು ಯೋಜಿಸಿದೆ. ಇಂಥ ಸಹಕಾರ ಸಂಘಗಳು ಮತ್ತು ಹಾಲಿನ ಸೊಸೈಟಿಗಳು ಶಕ್ತಿಶಾಲಿಯಾಗಿ ಕಾರ್ಯ ನಿರ್ವಹಿಸಬೇಕೆಂಬ ಚಿಂತನೆ ಮಾಡಿ ಅದರ ಅನುಷ್ಠಾನ ಆಗುತ್ತಿದೆ ಎಂದು ತಿಳಿಸಿದರು.

ಈ ಕುರಿತಂತೆ ಸಚಿವಸಂಪುಟದಲ್ಲಿ ಚರ್ಚಿಸಿ ಮಾದರಿ ನಿಯಮಾವಳಿ ಜಾರಿಗೊಳಿಸುವ ಉದ್ದೇಶವಿದೆ ಎಂದು ವಿವರ ನೀಡಿದರು. ಗೆಜ್ಜಲಗೆರೆಯಲ್ಲಿ ಮಾತನಾಡುವಾಗ ಗುಜರಾತ್‍ನಷ್ಟೇ ಪ್ರಬಲವಾಗಿ ಕೆಎಂಎಫ್ ಬೆಳೆಯುತ್ತಿದೆ; ಎರಡೂ ಒಟ್ಟಾಗಿ ಹೋದರೆ ಅಭಿವೃದ್ಧಿ ಸಾಧ್ಯ ಎಂದು ಅಮಿತ್ ಶಾ ಅವರು ಹೇಳಿದ್ದರು. ವಿಲೀನದ ಚರ್ಚೆಯೂ ಆಗಿಲ್ಲ; ಅಂಥ ಮಾತನ್ನೂ ಅವರು ಆಡಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಅವರು ಉತ್ತರ ಕೊಟ್ಟರು. 2 ದಿನವೂ ಅವರ ಜೊತೆಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಅಂಥ ಪ್ರಸ್ತಾಪವೇ ಇಲ್ಲ.

Advertisement

ಇದನ್ನೂ ಓದಿ : ಅಂಕೋಲಾದಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ನಾಲ್ವರ ದುರ್ಮರಣ; ಓರ್ವ ಗಂಭೀರ

Advertisement

Udayavani is now on Telegram. Click here to join our channel and stay updated with the latest news.

Next