ಕೊಚ್ಚಿ: ಆಜೀವ ನಿಷೇಧದಿಂದ ಹೊರಬಂದ ಬಳಿಕ ಕೇರಳ ರಣಜಿ ತಂಡದಲ್ಲಿ ಆಡಲು ಅವಕಾಶ ಪಡೆಯುತ್ತಿರುವ ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಕೇರಳ ಎಕ್ಸ್‌ಪ್ರೆಸ್ ಖ್ಯಾತಿಯ ಎಸ್.ಶ್ರೀಶಾಂತ್ 2021ರಲ್ಲಿ ಭಾರತ ತಂಡದ ಪರ ಟೆಸ್ಟ್ ಆಡುವ ಕನಸು ಕಾಣುತ್ತಿದ್ದಾರೆ. ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಹೋದರೆ ಖಂಡಿತವಾಗಿಯೂ ಭಾರತ ಪ್ರತಿನಿಧಿಸುವ ಕನಸಿದೆ ಎಂದು ಶ್ರೀಶಾಂತ್ ತಿಳಿಸಿದ್ದಾರೆ. ಸೆಪ್ಟೆಂಬರ್‌ನಲ್ಲಿ 37 ವರ್ಷದ
ಶ್ರೀಶಾಂತ್ ನಿಷೇಧ ಅವಧಿ ಅಂತ್ಯವಾಗಲಿದೆ. ಆ ಬಳಿಕ ಕೇರಳ ಪರ ರಣಜಿ ಕ್ರಿಕೆಟ್ ಆಡಲು ಶ್ರೀಶಾಂತ್ ಲಭ್ಯವಿದ್ದಾರೆ ಎಂದು ಕೇರಳ ಕ್ರಿಕೆಟ್ ಸಂಸ್ಥೆ ಹೇಳಿಕೊಂಡಿತ್ತು. 2013ರಲ್ಲಿ ಐಪಿಎಲ್ ವೇಳೆ ಸ್ಪಾಟ್ ಘಿಕ್ಸಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದು ಶ್ರೀಶಾಂತ್ ಆಜೀವ ನಿಷೇಧಕ್ಕೆ ಗುರಿಯಾಗಿದ್ದರು. ಇತ್ತೀಚೆಗೆ ನ್ಯಾಯಾಲಯ ಇವರ ನಿಷೇಧ ಅವಧಿಯನ್ನು ತಗ್ಗಿಸಿದ್ದನ್ನು ಸ್ಮರಿಸಬಹುದು.