“ಕನ್ನಡ ಸಾಹಿತ್ಯದಲ್ಲಿ ಆದಿಪಂಪನಿಗೆ ಒಂದು ವಿಶೇಷ ಸ್ಥಾನಮಾನವಿದೆ. ಪಂಪ ನದ್ದು ಎಲ್ಲಾ ಕಾಲಕ್ಕೂ ಸಲ್ಲುವಂಥ ವ್ಯಕ್ತಿತ್ವ. ಅದರಂತೆ, ಅದೇ ಹೆಸರನ್ನು ಇಟ್ಟುಕೊಂಡು ಬರುತ್ತಿರುವ “ಪಂಪ’ ಚಿತ್ರ ಕೂಡ ಇಂದಿನ ಕಾಲಘಟ್ಟಕ್ಕೆ, ಕನ್ನಡದ ವಿಚಾರಗಳಿಗೆ ಸಲ್ಲುವಂಥದ್ದು. ಕನ್ನಡದ ಬಗ್ಗೆ ತುಡಿತವಿರುವ, ಕನ್ನಡಕ್ಕಾಗಿ ಹೊಸದೇ ನಾದ್ರೂ ಮಾಡಬೇಕು ಎಂಬ ಹಂಬಲ ವಿರುವ ಮನಸ್ಸುಗಳು ಸೇರಿ ಮಾಡಿದ “ಪಂಪ’ ಚಿತ್ರ, ವಿಭಿನ್ನವಾಗಿ ನಿಲ್ಲುತ್ತದೆ’ ಇದು ಬಿಡುಗಡೆಗೆ ತಯಾರಾಗಿರುವ “ಪಂಪ’ ಸಿನಿಮಾದ ಬಗ್ಗೆ ನಾದಬ್ರಹ್ಮ ಹಂಸಲೇಖ ಅವರ ಮಾತು.
ಹಿರಿಯ ನಿರ್ದೇಶಕ ಎಸ್. ಮಹೇಂದರ್ ನಿರ್ದೇಶನದಲ್ಲಿ ಮೂಡಿಬಂದಿರುವ “ಪಂಪ’ ಸಿನಿಮಾ, ಇದೇ ಸೆ. 16ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. “ಪಂಪ’ ಸಿನಿಮಾದ ಹಾಡುಗಳಿಗೆ ಹಂಸಲೇಖ ಸಾಹಿತ್ಯ-ಸಂಗೀತವಿದ್ದು, ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಕೇಳುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಇದೇ ವೇಳೆ “ಪಂಪ’ನ ಬಗ್ಗೆ ಮಾತನಾಡಿದ ಸಂಗೀತ ನಿರ್ದೇಶಕ ಹಂಸಲೇಖ “ಪಂಪ’ನ ಗುಣಗಾನ ಮಾಡಿದ್ದಾರೆ.
“ಇತ್ತೀಚಿನ ದಿನಗಳಲ್ಲಿ ಕನ್ನಡದ ವಿಷಯವನ್ನು ಇಟ್ಟುಕೊಂಡು ಚಿತ್ರ ಮಾಡುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಆದರೆ ವಾಸ್ತವದಲ್ಲಿ, ಹಿಂದೆಂದಿಗಿಂತಲೂ ಕನ್ನಡದ ವಿಷಯ ಇಂದಿಗೆ ಹೆಚ್ಚು ಪ್ರಸ್ತುತ. ಕನ್ನಡದ ಬಗ್ಗೆ ಹೆಚ್ಚು ಚರ್ಚೆಯಾಗಬೇಕಾಗಿದೆ. ಕನ್ನಡಕ್ಕೆ ಕೆಲಸ ಮಾಡುವ ಮನಸ್ಸುಗಳು, ಕೃತಿಗಳು, ಚಿತ್ರಗಳು ಹೆಚ್ಚಾಗಿ ಹೊರಬರಬೇಕಿದೆ. “ಪಂಪ’ ಅಂಥದ್ದೇ ಒಂದು ಚಿತ್ರ. “ಪಂಪ’ನ ಕಥೆ, ಚಿತ್ರದ ಆಶಯ ಎಲ್ಲವೂ ನೋಡುಗರಿಗೆ ಮುಟ್ಟುವಂತಿದೆ. ಬಹುದಿನಗಳ ನಂತರ ಅಪ್ಪಟ ಕನ್ನಡ ಚಿತ್ರವೊಂದಕ್ಕೆ ಸಂಗೀತ ನೀಡಿರುವುದಕ್ಕೆ ತುಂಬ ಖುಷಿಯಿದೆ’ ಎನ್ನುತ್ತಾರೆ ಹಂಸಲೇಖ.
ಇನ್ನು ಕಳೆದ ಕೆಲ ದಶಕಗಳಿಂದ “ಟೋಟಲ್ ಕನ್ನಡ’ ಹೆಸರಿನಲ್ಲಿ ಕನ್ನಡ ಕೈಂಕರ್ಯ ಮಾಡುತ್ತಿರುವ ವಿ. ಲಕ್ಷ್ಮೀಕಾಂತ್ “ಕೀ ಕ್ರಿಯೇ ಷನ್ಸ್’ ಬ್ಯಾನರ್‌ನಲ್ಲಿ “ಪಂಪ’ ಚಿತ್ರವನ್ನು ನಿರ್ಮಿಸಿದ್ದಾರೆ. ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಕಥಾಹಂದರ ಹೊಂದಿರುವ “ಪಂಪ’ ಚಿತ್ರದಲ್ಲಿ ಕೀರ್ತಿ ಭಾನು, ಸಂಗೀತಾ ಶೃಂಗೇರಿ, ರಾಘವ್ ನಾಯಕ್, ಕೃಷ್ಣ ಭಟ್ ಮತ್ತಿತರರು ಅಭಿನಯಿಸಿದ್ದಾರೆ.