ಮೈಸೂರು: ಭೈರಪ್ಪ ಅವರ ಪರ್ವ ಕಾದಂಬರಿ ಆಧಾರಿತ ಪರ್ವ ರಂಗ ಪ್ರಯೋಗವು ರಾಜ್ಯಾದ್ಯಂತ ನಡೆಯಲಿದ್ದು, ಮಾರ್ಚ್‌ನಲ್ಲಿ ಮೈಸೂರಿನಿಂದಲೇ ಆರಂಭವಾಗಲಿದೆ ಎಂದು ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
ನಗರದ ಕುವೆಂಪುನಗರದಲ್ಲಿರುವ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರ ನಿವಾಸಕ್ಕೆ ಭಾನುವಾರ ಸಂಜೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೈರಪ್ಪನವರು ರಾಜ್ಯದ ಹಿರಿಯ ಸಾಹಿತಿ ಹಾಗೂ ನನ್ನ ಮಾರ್ಗದರ್ಶಕರು. ಅವರ ಸಲಹೆ, ಸೂಚನೆ, ಆಶೀರ್ವಾದ ಪಡೆಯಲು ಬಂದಿದ್ದೇನೆ. ಜೊತೆಗೆ ಪರ್ವ ನಾಟಕ ಪ್ರಯೋಗ ಸಂಬಂಧ ಚರ್ಚೆ ನಡೆಸಿದ್ದೇನೆ ಎಂದರು.
ಮೈಸೂರಿನ ರಂಗಾಯಣವು ವಿವಿಧ ಕಾರ್ಯಕ್ರಮಗಳಿಗಾಗಿ 4 ಕೋಟಿ ರೂ. ಅನುದಾನ ಕೇಳಿದೆ. ಮಾರ್ಚ್ ಅಂತ್ಯದೊಳಗೆ ಮೊದಲ ಕಂತಾಗಿ 50 ಲಕ್ಷ ರೂ. ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ವಿವಿಧ ವಿಚಾರಗಳ ಬಗ್ಗೆ ಚರ್ಚಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೇರಿದ ವಿವಿಧ ಅಕಾಡೆಮಿ ಮತ್ತು ರಂಗಾಯಣ ನಿರ್ದೇಶಕರ ಸಭೆಯನ್ನು ಇನ್ನು ಕೆಲವೇ ದಿನಗಳಲ್ಲಿ ಕರೆಯಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ :ಜೋ ರೂಟ್ ಹಿಂದಿಕ್ಕಿ ಚೊಚ್ಚಲ ಐಸಿಸಿ ಪ್ಲೇಯರ್ ಆಫ್ ದಿ ಮಂತ್ ಪ್ರಶಸ್ತಿ ಪಡೆದ ಪಂತ್
ಡಾ.ಎಸ್.ಎಲ್. ಭೈರಪ್ಪ ಹುಟ್ಟೂರಾದ ಸಂತೆ ಶಿವಾರದ ಅಭಿವೃದ್ಧಿಗೆ ಮತ್ತು ಅಲ್ಲಿ ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರ ತರಬೇತಿ ಕೇಂದ್ರ ತೆರೆಯಲು ಚಿಂತನೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ 5 ಕೋಟಿ ರೂ. ಅನುದಾನ ನೀಡಲಾಗಿದೆ. ತರಬೇತಿ ಕೇಂದ್ರದ ರೂಪುರೇಷೆ ಕುರಿತು ಚರ್ಚಿಸಲಾಗಿದೆ. ಒಮ್ಮೆ ಭೈರಪ್ಪ ಅವರನ್ನೇ ಕರೆದುಕೊಂಡು ಹೋಗಿ ವ್ಯತ್ಯಾಸಗಳಿದ್ದರೆ ಸರಿಪಡಿಸುತ್ತೇವೆ. ಈ ಆರ್ಥಿಕ ವರ್ಷದೊಳಗೆ ಇದರ ಹಣ ವರ್ಗಾವಣೆ ಮಾಡಲಾಗುವುದು ಎಂದರು.
ಇದಕ್ಕೂ ಮುನ್ನ ಭೈರಪ್ಪ ಜೊತೆ ಮಾತುಕತೆ ನಡೆಸಿದರು. ಈ ವೇಳೆ ಭೈರಪ್ಪ ಅವರು ಸಚಿವರಿಗೆ ರಷ್ಯನ್, ಚೈನೀಸ್ ಭಾಷಗೆ ಭಾಷಾಂತರವಾಗಿರುವ ಪರ್ವ ಪುಸ್ತಕವನ್ನು ಕೊಡುಗೆಯಾಗಿ ನೀಡಿದರು.