Advertisement

ಇನ್ನು ಕೆರೆ ಖಾಸಗೀಕರಣವಿಲ್ಲ

06:00 AM Jun 16, 2018 | Team Udayavani |

ಬೆಂಗಳೂರು: ಜಲಮೂಲ ಸಂರಕ್ಷಣೆಗೆ ರಾಜ್ಯ ಸರಕಾರ ಮಹತ್ವದ ಹೆಜ್ಜೆ ಇರಿಸಿದೆ. ಸರಕಾರಿ ಕೆರೆ, ಕಟ್ಟೆ, ಕುಂಟೆ ಮತ್ತು ಹಳ್ಳಗಳನ್ನು ಖಾಸಗಿ ಉದ್ದಿಮೆ ಮತ್ತು ಸಂಘ - ಸಂಸ್ಥೆಗಳಿಗೆ ಇನ್ನು ಮುಂದೆ ಮಂಜೂರು ಮಾಡುವಂತಿಲ್ಲ. 2000ನೇ ಇಸವಿಯ ಸುತ್ತೋಲೆಯನ್ನು ಹಿಂಪಡೆದಿದೆ.

Advertisement

ಈ ಕುರಿತು ಮಾಹಿತಿ ನೀಡಿರುವ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ, ಸರಕಾರಿ ಜಲ ಮೂಲಗಳನ್ನು ಸಂರಕ್ಷಿಸಿ ಅಂತರ್ಜಲ ಮಟ್ಟ ಸುಧಾರಣೆ ಇದರ ಒಂದು ಉದ್ದೇಶವಾದರೆ, ಪರಿಸರ ಸಂರಕ್ಷಣೆ ದೃಷ್ಟಿಯಿಂದಲೂ ಇದು ಮಹತ್ವದ ಹೆಜ್ಜೆ ಎಂದಿದ್ದಾರೆ. ಖಾಸಗಿ ಉದ್ದಿಮೆ ಮತ್ತು ಸಂಘ-ಸಂಸ್ಥೆಗಳಿಗೆ ಮಾರಾಟ ಮಾಡುವ ಯಾವುದೇ ಪ್ರಸ್ತಾವವನ್ನೂ ಸರಕಾರಕ್ಕೆ ಕಳುಹಿಸಕೂಡದು ಎಂದು ಆದೇಶದಲ್ಲಿ ಉಲ್ಲೇಖೀಸಲಾಗಿದೆ. ಜತೆಗೆ ಅವುಗಳ ಸಂರಕ್ಷಣೆಗೆ ಒತ್ತು ನೀಡುವಂತೆ, ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ. 

ಖಾಲಿ ಕೆರೆಯೂ ಜಲಮೂಲವೇ: ಈ ಮಧ್ಯೆ ರಾಜ್ಯ ಸರಕಾರ ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧಿನಿಯಮ 2014ರ ಪ್ರಕರಣ 1(ಎಚ್‌) ಅನ್ವಯ ಕೂಡ “ನೀರು ಇರಲಿ ಅಥವಾ ಇಲ್ಲದಿರಲಿ, ಸರಕಾರಿ ಕೆರೆ, ಖರಾಬು, ಕುಂಟೆ, ಕಟ್ಟೆ, ರಾಜಕಾಲುವೆ ಎಲ್ಲವೂ ಜಲಮೂಲಗಳೇ ಆಗಿರುತ್ತವೆ’ ಎಂದು ವ್ಯಾಖ್ಯಾನಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಎನ್‌ಜಿಟಿ ಬಿಸಿ ತಟ್ಟಿತೇ?: ಬೆಂಗಳೂರಿನ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಮಾಲಿನ್ಯದ ಅನಂತರ ಎನ್‌ಜಿಟಿ ರಾಜ್ಯ ಸರಕಾರದ ವಿರುದ್ಧ ಗರಂ ಆಗಿರುವುದಲ್ಲದೆ ಕೆರೆಗಳ ಕಾಯುವಿಕೆಗೆ ಕೆಲವು ನಿಯಮಾವಳಿಗಳನ್ನೂ ರೂಪಿಸಿದೆ. ಇದರಲ್ಲಿ ಕೆರೆಗಳ ಅಂಚಿನಿಂದ ಸುತ್ತ 75 ಮೀ. ವ್ಯಾಪ್ತಿಯ ವರೆಗೆ ಯಾವುದೇ ನಿರ್ಮಾಣ ಕಾರ್ಯ ಕೈಗೊಳ್ಳುವಂತಿಲ್ಲ ಮತ್ತು ಹಾಲಿ ಇರುವ ನಿರ್ಮಿತಿಗಳನ್ನು ತೆರವುಗೊಳಿಸಬೇಕು ಎಂದು ಹೇಳಿದೆ. ಸರಕಾರದ ಆದೇಶಕ್ಕೆ ಇದೂ ಒಂದು ಕಾರಣ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next