ಮುಂಬಯಿ: ಕಳೆದ ಐಪಿಎಲ್‌ನಲ್ಲಿ ಆರೇಂಜ್ ಕ್ಯಾಪ್ ಏರಿಸಿಕೊಂಡ ಬಳಿಕ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲೂ ರನ್ ಪ್ರವಾಹ ಹರಿಸುತ್ತಿರುವ ಋತುರಾಜ್ ಗಾಯಕ್ವಾಡ್ ಅವರನ್ನು ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ಸರಣಿಗೆ ಆಯ್ಕೆ ಮಾಡಬೇಕು ಎಂಬುದಾಗಿ ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್‌ಸರ್ಕಾರ್ ಹೇಳಿದ್ದಾರೆ.
“ಓರ್ವ ಕ್ರಿಕೆಟಿಗನನ್ನು ಫಾರ್ಮ್ನಲ್ಲಿರುವಾಗಲೇ ತಂಡಕ್ಕೆ ಆಯ್ಕೆ ಮಾಡಬೇಕು. ಇದಕ್ಕಾಗಿ ಅವರು ಕಾಯುವಂತಾಗಬಾರದು. ಗಾಯಕ್ವಾಡ್ ಇನ್ನೆಷ್ಟು ರನ್ ಗಳಿಸಬೇಕು? ಅವರ ಆಯ್ಕೆಗೆ ಇದು ಸೂಕ್ತ ಸಮಯ’ ಎಂದು ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷರೂ ಆದ ವೆಂಗ್‌ಸರ್ಕಾರ್ ಹೇಳಿದರು.
“ಗಾಯಕ್ವಾಡ್‌ಗೆ ಈಗ 24 ವರ್ಷ. 28 ಅಥವಾ 30 ವರ್ಷ ಆದೊಡನೆ ಆಯ್ಕೆ ಮಾಡಿದರೆ ಪ್ರಯೋಜನವಿಲ್ಲ. ಅವರು 3ನೇ ಕ್ರಮಾಂಕದಲ್ಲೂ ಬ್ಯಾಟ್ ಬೀಸಬಲ್ಲರು’ ಎಂದು ವೆಂಗ್‌ಸರ್ಕಾರ್ ಅಭಿಪ್ರಾಯಪಟ್ಟರು.
ಇದನ್ನೂ ಓದಿ:ಅಭ್ಯಾಸದ ವೇಳೆ ರೋಹಿತ್ ಶರ್ಮ ಕೈಗೆ ಏಟು : ಪಾಂಚಾಲ್‌ಗೆ ಬುಲಾವ್
2021ನೇ ಸಾಲಿನ ಐಪಿಎಲ್‌ನಲ್ಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಪರ 45.36ರ ಸರಾಸರಿಯಲ್ಲಿ 635 ರನ್ ಪೇರಿಸಿದ ಹೆಗ್ಗಳಿಕೆ ಗಾಯಕ್ವಾಡ್ ಅವರದು. ವಿಜಯ್ ಹಜಾರೆ ಟ್ರೋಫಿ ಕೂಟದ 4 ಇನ್ನಿಂಗ್ಸ್‌ಗಳಿಂದ ಈಗಾಗಲೇ 435 ರನ್ ಬಾರಿಸಿದ್ದಾರೆ. ಇದರಲ್ಲಿ 3 ಸೆಂಚುರಿ ಕೂಡ ಸೇರಿದೆ.