ಉಕ್ರೇನ್ : ಉಕ್ರೇನ್ ಮೇಲೆ ರಷ್ಯಾ ಸೇನೆಯ ದಾಳಿ ಇಂದಿಗೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು ರಷ್ಯಾ ಪಡೆ ಉಕ್ರೇನ್ ನ ಖಾರ್ಕಿವ್ ನಗರದ ಡ್ಯಾನಿಲಿವ್ಕಾ ಜಿಲ್ಲೆಯಲ್ಲಿರುವ ಗ್ಯಾಸ್ ಪೈಪ್ ಲೈನ್ ಅನ್ನು ಸ್ಪೋಟಿಸಿದೆ ಎಂದು ಉಕ್ರೇನ್ ಅಧ್ಯಕ್ಷರ ಕಚೇರಿ ಅಧಿಕೃತವಾಗಿ ತಿಳಿಸಿದೆ.
ಖಾರ್ಕಿವ್ ಉಕ್ರೇನ್ ನ ಅತೀ ದೊಡ್ಡ ನಗರವಾಗಿದ್ದು ರಷ್ಯಾ ಪಡೆಗಳು ಇಲ್ಲಿನ ಗ್ಯಾಸ್ ಪೈಪ್‌ಲೈನ್ ನನ್ನೇ ಗುರಿಯಾಗಿಸಿ ಸ್ಪೋಟಿಸಿದೆ. ಇದರಿಂದ ಪರಿಸರದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಲಿದೆ ಎಂದು ಖಾರ್ಕಿವ್ ಪ್ರಾದೇಶಿಕ ನಾಗರಿಕ-ಮಿಲಿಟರಿ ಆಡಳಿತವು ದೃಢಪಡಿಸಿದೆ.
ಗ್ಯಾಸ್ ಪೈಪ್ ಲೈನ್ ಸ್ಪೋಟದ ಪರಿಣಾಮ ನಿವಾಸಿಗಳು ಮನೆಯ ಕಿಟಕಿಗಳನ್ನು ಒದ್ದೆ ಬಟ್ಟೆಯಲ್ಲಿ ಮುಚ್ಚಬೇಕು. ಜೊತೆಗೆ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ದ್ರವ ಪದಾರ್ಥಗಳನ್ನು ಹೆಚ್ಚು ಸೇವಿಸುವಂತೆ ಉಕ್ರೇನ್ ಸರ್ಕಾರ ಸೂಚಿಸಿದೆ.
ರಷ್ಯಾ ಗಡಿಯಿಂದ ಖಾರ್ಕಿವ್ ನಗರ ಕೇವಲ 40 ಕಿಲೋ ಮೀಟರ್ ದೂರದಲ್ಲಿದ್ದು, ಇಲ್ಲಿ ಸುಮಾರು 15 ಲಕ್ಷ ಜನರು ವಾಸಿಸುತ್ತಿದ್ದಾರೆ.