Advertisement

ರಷ್ಯ ದೇಶದ ಕತೆ: ಸಂಗೀತಗಾರ ಮತ್ತು ಸಮುದ್ರ ಕನ್ಯೆ

09:28 AM May 20, 2018 | |

ಒಂದು ನಗರದಲ್ಲಿ ಸ್ಕಾಡೊ ಎಂಬ ಯುವ ಸಂಗೀತಗಾರನಿದ್ದ. ಅವನ ಸುಶ್ರಾವ್ಯ ಕಂಠದಲ್ಲಿ ಅದ್ಭುತವಾದ ಶಕ್ತಿ ಇತ್ತು. ಆತ ಮಧುರವಾಗಿ ಹಾಡಲು ತೊಡಗಿದರೆ ಬಹುದೂರದಿಂದ ಪ್ರಾಣಿ, ಪಕ್ಷಿಗಳು ಧಾವಿಸಿ ಬಂದು, ಸಂಗೀತ ನಿಲ್ಲಿಸುವ ವರೆಗೂ ನಿಂತು ಆಲಿಸುತ್ತಿದ್ದವು. ಒಣಮರಗಳು ಸಂಗೀತದ ಮಾಧುರ್ಯದಿಂದಾಗಿ ಮತ್ತೆ ಚಿಗುರೊಡೆದು ಹೂ, ಹಣ್ಣುಗಳಿಂದ ತುಂಬಿಕೊಳ್ಳುತ್ತಿದ್ದವು. ಊರಿನ ಶ್ರೀಮಂತರು ಮದುವೆ, ಹುಟ್ಟುಹಬ್ಬ ಮೊದಲಾದ ವಿಶೇಷ ಸಮಾರಂಭಗಳಿಗೆ ಅವನನ್ನು ಬರಮಾಡಿ ಮನಸೋಲುವ ವರೆಗೂ ಅವನ ಹಾಡುಗಳನ್ನು ಕೇಳಿ ಆನಂದಿಸುತ್ತಿದ್ದರು. ಸ್ಯಾಡೊÉ ಹಾಡಲು ಆರಂಭಿಸುತ್ತಲೇ ಅಲ್ಲಿರುವ ಸುಂದರ ಹುಡುಗಿಯರು ತಾವಾಗಿ ನೃತ್ಯ ಆರಂಭಿಸಿ ಅದರಲ್ಲಿ ಮೈಮರೆಯುತ್ತಿದ್ದರು. ಇಂತಹ ಖ್ಯಾತಿಯಿದ್ದರೂ ಅವನಿಗೆ ಹಾಡಿನ ಪ್ರತಿಫ‌ಲವೆಂದು ಧನಿಕರು ಕೆಲವು ಬಿಲ್ಲೆಗಳನ್ನು ಮಾತ್ರ ಕೊಡುತ್ತಿದ್ದರು. ಅದರಿಂದ ಒಂದೆರಡು ದಿವಸ ಜೀವನ ನಡೆಸಲು ಸಾಧ್ಯವಾಗುತ್ತಿತ್ತು ವಿನಃ ಕೈಯಲ್ಲಿ ಹಣ ಉಳಿತಾಯವಾಗುತ್ತಿರಲಿಲ್ಲ.

Advertisement

    ಒಂದು ಸಲ ಒಬ್ಬ ಹಣವಂತನು ತನ್ನ ಮಗಳ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ನಡೆಸಿದ. ಗಣ್ಯ ಅತಿಥಿಗಳ ಸಂತೋಷಕ್ಕಾಗಿ ಸ್ಯಾಡ್ಲೂನನ್ನು ಕರೆಸಿ ಸಂಗೀತ ಕಾರ್ಯಕ್ರಮವನ್ನೂ ಏರ್ಪಡಿಸಿದ. ಹಾಡುವುದು ಮುಕ್ತಾಯಗೊಂಡ ಬಳಿಕ ಹಣವಂತನು ಸಂತೋಷದಿಂದ ಸ್ಯಾಡ್ಲೂನನ್ನು ಹೊಗಳುತ್ತ, “”ಕರ್ಣಾನಂದಕರವಾದ ಸಂಗೀತ ಸಿಹಿಯನ್ನು ಉಣಬಡಿಸಿದ ನಿನಗೆ ಏನು ಬೇಕಿದ್ದರೂ ಕೋರಿಕೋ, ಕೊಡುತ್ತೇನೆ” ಎಂದು ಹೇಳಿದ. ಸ್ಯಾಡ್ಲೂ, “”ಏನು ಬೇಕಿದ್ದರೂ ಕೊಡುತ್ತೀರಾ? ನಾನು ಹರೆಯದ ಯುವಕ. ನನಗೆ ಮದುವೆಯಾಗಿ ಹೆಂಡತಿಯೊಂದಿಗೆ ಸುಖವಾಗಿ ಬದುಕಬೇಕೆಂಬ ಆಶೆಯಿದೆ. ನಿಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಟ್ಟು ಅಳಿಯನಾಗಿ ಮಾಡಿಕೊಳ್ಳಿ” ಎಂದು ಕೋರಿದ.

    ಸ್ಯಾಡ್ಲೂ ಕೋರಿದ ಅಪೇಕ್ಷೆಯನ್ನು ಕೇಳಿ ಹಣವಂತನಿಗೆ ಕೆಂಡದಂತಹ ಸಿಟ್ಟು ಬಂತು. “”ಏನೆಂದೆ? ನಿನ್ನಂತಹ ಭಿಕಾರಿಗೆ ನನ್ನ ಅಳಿಯನಾಗುವ ಬಯಕೆಯೆ? ಬಿಡಿಗಾಸಿಗೆ ಕೈಯೊಡ್ಡಿ ಹಾಡು ಹೇಳುವ ನಿನಗೂ ನನಗೂ ಎಂದಿಗಾದರೂ ಸಂಬಂಧ ಬೆಳೆಯಲು ಸಾಧ್ಯವೆ? ನನ್ನ ಮಗಳು ಬಿಡು, ಒಬ್ಬ ಭಿಕ್ಷುಕನ ಮಗಳು ಕೂಡ ನಿನ್ನ ಕೈ ಹಿಡಿಯುವುದಿಲ್ಲ. ತೊಲಗು ಇಲ್ಲಿಂದ” ಎಂದು ಹೇಳಿ ಅವನ ಕತ್ತು ಹಿಡಿದು ಮನೆಯಿಂದ ಹೊರಗೆ ತಳ್ಳಿದ.

    ದುಃಖದಿಂದ ಸ್ಯಾಡ್ಲೂ ಪ್ರಾಣ ಕಳೆದುಕೊಳ್ಳಲು ನಿರ್ಧರಿಸಿ ಸಮುದ್ರ ತೀರಕ್ಕೆ ಹೋದ. ಸಮುದ್ರವನ್ನು ನೋಡುತ್ತ ನಿಟ್ಟುಸಿರುಬಿಟ್ಟು, “”ಏನು ಮಾಡಲಿ, ನೀನೊಬ್ಬಳು ಹೆಣ್ಣಾಗಿರುತ್ತಿದ್ದರೆ ನನ್ನ ಕೈಹಿಡಿದು ಮನಸ್ಸಿಗೆ ಖುಷಿ ಕೊಡುತ್ತಿದ್ದೆಯೋ ಏನೊ!” ಎಂದು ಹೇಳಿಕೊಂಡು ಸುಶ್ರಾವ್ಯವಾಗಿ ಬಹು ಹೊತ್ತಿನ ತನಕ ಹಾಡಿದ. ಇನ್ನು ಸಮುದ್ರಕ್ಕೆ ಜಿಗಿದು ಸಾಯಬೇಕೆಂದು ಯೋಚಿಸುವಾಗ ದಿವ್ಯ ವಸ್ತ್ರಾಭರಣಗಳನ್ನು ಧರಿಸಿದ ವ್ಯಕ್ತಿಯೊಬ್ಬ ಸಮುದ್ರದಿಂದ ಮೇಲೆದ್ದು ಬಂದ. “”ಅಯ್ನಾ, ನೀನೊಬ್ಬ ಅಸಾಧಾರಣ ಸಂಗೀತಗಾರ. ನಿನ್ನ ಮಧುರವಾದ ಕಂಠಧ್ವನಿ ಸಮುದ್ರದ ಆಳಕ್ಕೂ ತಲುಪಿತು. ಸಮುದ್ರರಾಜನಾದ ನಾನು ನನ್ನ ಮಗಳ ಜೊತೆಗೆ ಅದನ್ನು ಆಲಿಸಿ ಮರುಳಾಗಿ ಹೋಗಿದ್ದೇನೆ. ನೀನು ನನ್ನ ಅರಮನೆಗೆ ಬರಬೇಕು ಎಂಬುದು ನನ್ನ ಮಗಳ ಬಯಕೆ. ನನ್ನ ಜೊತೆಯಲ್ಲಿ ಬಂದುಬಿಡು” ಎಂದು ಅವನು ಕೋರಿದ.

    ಸಮುದ್ರ ರಾಜನ ಜೊತೆಗೆ ಸ್ಯಾಡ್ಲೂ ಕಡಲಿನ ಆಳದಲ್ಲಿರುವ ಅವನ ಅರಮನೆಗೆ ಸುರಕ್ಷಿತವಾಗಿ ತಲುಪಿದ. ಸುಂದರಿಯಾದ ರಾಜಕುಮಾರಿ ಅವನನ್ನು ಬರಮಾಡಿಕೊಂಡು, “”ನಿನ್ನ ಸಂಗೀತದಿಂದ ನನ್ನ ಮನತಣಿಸು” ಎಂದು ಮತ್ತೆ ಮತ್ತೆ ಅವನ ಹಾಡುಗಳನ್ನು ಕೇಳಿ ಸಂತೋಷಪಟ್ಟಳು. ತುಂಬ ದಿನಗಳ ಕಾಲ ಅವನು ಅದೇ ಅರಮನೆಯಲ್ಲಿ ಸುಖವಾಗಿ ಕಾಲ ಕಳೆದ. ಬಳಿಕ ತನ್ನ ಊರಿಗೆ ಹೊರಟು ನಿಂತಾಗ ಸಮುದ್ರರಾಜನು, “”ನಿನ್ನಂತಹ ಸಂಗೀತ ಸಾಮ್ರಾಟನನ್ನು ಕಳುಹಿಸಿಕೊಡಲು ನನ್ನ ಮಗಳಿಗೆ ಕೊಂಚವೂ ಇಷ್ಟವಿಲ್ಲ. ಅವಳು ನಿನ್ನ ಮೇಲೆ ಅನುರಕ್ತಳಾಗಿದ್ದಾಳೆ. ನಿನಗೆ ಒಪ್ಪಿಗೆಯಿದ್ದರೆ ಅವಳನ್ನು ಮದುವೆಯಾಗಿ ವೈಭವದ ನನ್ನ ಅರಮನೆಯಲ್ಲಿಯೇ ನೆಲೆಸಿರಬಹುದು” ಎಂದು ಮನವಿ ಮಾಡಿದ. ಸ್ಯಾಡೊÉàನಿಗೂ ರಾಜಕುಮಾರಿ ಇಷ್ಟವಾಗಿದ್ದಳು. ಅವನು ಸಮುದ್ರರಾಜನ ಕೋರಿಕೆಯನ್ನು ನಿರಾಕರಿಸದೆ ತನ್ನ ಸಮ್ಮತಿ ಸೂಚಿಸಿದ.

Advertisement

ಸ್ಯಾಡ್ಲೂ ಸಮುದ್ರ ಕನ್ಯೆಯನ್ನು ಮದುವೆಯಾಗಿ ಬಹುಕಾಲ ಅಲ್ಲಿಯೇ ಇದ್ದ. ಸಮುದ್ರರಾಜನ ಅರಮನೆಯಲ್ಲಿ ಯಾರಿಗೂ ಮುಪ್ಪು$ಬರುತ್ತಿರಲಿಲ್ಲ. ಯಾರೂ ಸಾಯುತ್ತಿರಲಿಲ್ಲ. ಎಲ್ಲರೂ ಸಂತೋಷವಾಗಿಯೇ ಇದ್ದರು. ಹೀಗಿರುವಾಗ ಸ್ಯಾಡ್ಲೂನಿಗೆ ತನ್ನ ಊರಿನ ನೆನಪು ಬಂದಿತು. ಒಮ್ಮೆ ಅಲ್ಲಿಗೆ ಹೋಗಿ ಬರಬೇಕೆಂದು ಯೋಚಿಸಿ, ಹೆಂಡತಿಯೊಂದಿಗೆ ಹೇಳಿಕೊಂಡ. ಅವಳು, “”ಮತ್ತೆ ಯಾಕೆ ಭೂಮಿಗೆ ಹೋಗುತ್ತೀಯಾ? ಇಲ್ಲಿ ನಿನಗೆ ಬೇಕಾದ ಸೌಕರ್ಯಗಳು ಎಲ್ಲವೂ ಇದೆ. ಹಾಗಾಗಿ ಈ ಯೋಚನೆಯನ್ನು ಬಿಡು” ಎಂದಳು. ಆದರೆ ಸ್ಯಾಡ್ಲೂ ಅವಳ ಮಾತು ಕೇಳಲಿಲ್ಲ. “”ಒಬ್ಬ ಹಣವಂತ ನನ್ನನ್ನು ಒಬ್ಬ ಭಿಕ್ಷುಕನ ಮಗಳು ಕೂಡ ವರಿಸಲಾರಳೆಂದು ಹೇಳಿದ್ದ. ಈಗ ಅವನ ಬಳಿಗೆ ಹೋಗಿ ನನ್ನ ಕೈ ಹಿಡಿದಿರುವ ಸುಂದರಿಯ ಬಗೆಗೆ, ಈ ಅರಮನೆಯ ಬಗೆಗೆ ಹೇಳಿ ಅವನ ಮೇಲೆ ಸೇಡು ತೀರಿಸಿಕೊಳ್ಳಬೇಕಾಗಿದೆ” ಎಂದು ಹೇಳಿದ. ಸಮುದ್ರ ಕನ್ಯೆ ಖನ್ನಳಾಗಿ, “”ಸೇಡು ತೀರಿಸಿಕೊಳ್ಳಬೇಕು ಎನ್ನುವವರನ್ನು ದೇವರೂ ಮೆಚ್ಚುವುದಿಲ್ಲ. ಅವನನ್ನು ಮರೆತುಬಿಡು. ನೀನಿಲ್ಲಿಗೆ ಬಂದು ನೂರಾರು ವರ್ಷಗಳು ಕಳೆದಿವೆ. ಅಲ್ಲಿ ನಿನ್ನ ಗುರುತಿನವರು ಒಬ್ಬರೂ ಬದುಕಿಲ್ಲ” ಎಂದು ಹೇಳಿದಳು. “”ಇಲ್ಲ, ನಾನು ಹೋಗಲೇಬೇಕು” ಎಂದು ಸ್ಯಾಡ್ಲೂ ಹಟ ಹಿಡಿದ. ಆಗ ಅವಳು ಅವನಿಗೆ ಒಂದು ಟೋಪಿಯನ್ನು ಕೊಟ್ಟಳು. “”ಯಾವ ಕಾರಣಕ್ಕೂ ಈ ಟೋಪಿಯನ್ನು ತೆಗೆಯಬಾರದು. ತೆಗೆದರೆ ನೀನು ಬದುಕುವುದಿಲ್ಲ” ಎಂದು ಎಚ್ಚರಿಸಿದಳು.

    ಟೋಪಿ ಧರಿಸಿಕೊಂಡು ಸ್ಯಾಡ್ಲೂ ಭೂಮಿಗೆ ಬಂದ. ಸಮುದ್ರಕನ್ಯೆ ಹೇಳಿದ ಹಾಗೆಯೇ ಅಲ್ಲಿ ಎಲ್ಲವೂ ಬದಲಾಗಿದ್ದವು. ಅವನ ಪರಿಚಯದವರಾಗಲಿ, ಮನೆಗಳಾಗಲಿ ಮೊದಲಿನಂತೆ ಎಲ್ಲಿಯೂ ಕಾಣಿಸಲಿಲ್ಲ. ಆದರೂ ದಾರಿಯಲ್ಲಿ ಬರುತ್ತಿದ್ದ ಒಬ್ಬ ಯುವಕನನ್ನು ನಿಲ್ಲಿಸಿ, “”ಏನಯ್ಯ, ನಿನಗೆ ಸ್ಯಾಡ್ಲೂ ಗೊತ್ತೆ?” ಎಂದು ಕೇಳಿದ. ಅವನು ಮಿಕಿಮಿಕಿ ನೋಡಿ, “”ಸ್ಯಾಡ್ಲೂ? ಯಾರಿಗೆ ಗೊತ್ತಿಲ್ಲ? ಸಾವಿರ ವರ್ಷಗಳ ಹಿಂದೆ ಬದುಕಿದ್ದ ಅದ್ಭುತ ಸಂಗೀತಗಾರ ಅವನು. ನೋಡು ಅಲ್ಲಿ ಅವನ ಪುತ್ಥಳಿ ನಿಲ್ಲಿಸಿದ್ದಾರೆ” ಎಂದು ತೋರಿಸಿದ. ಸ್ಯಾಡ್ಲೂ ಜೋರಾಗಿ ನಕ್ಕ. “”ಅವನ ಪುತ್ಥಳಿ ನಿಲ್ಲಿಸಿದ್ದು ಯಾಕೆ? ಸ್ಯಾಡ್ಲೂ ಇನ್ನೂ ಸತ್ತಿಲ್ಲ. ನಾನೇ ಆ ಮಹಾನ್‌ ಕಲಾವಿದ” ಎಂದು ಹೇಳಿದ. ಯುವಕನು ತಿರಸ್ಕಾರದಿಂದ, “”ನೀನು ಸ್ಯಾಡ್ಲೂನೆ? ಹೋಗಯ್ಯ, ತಲೆ ಕೆಟ್ಟವರಂತೆ ಮಾತನಾಡಬೇಡ” ಎಂದು ಕೋಪದಿಂದ ಹೇಳಿದ.

    “”ನಾನು ಸ್ಯಾಡ್ಲೂನೇ. ಸರಿಯಾಗಿ ನೋಡು” ಎಂದು ಸ್ಯಾಡ್ಲೂ ಟೋಪಿಯನ್ನು ತಲೆಯಿಂದ ತೆಗೆದು ತೋರಿಸಲು ಮುಂದಾದ. ಟೋಪಿ ತೆಗೆದ ಕೂಡಲೇ ಅವನು ವೃದ್ಧಾಪ್ಯದಿಂದ ಸುಕ್ಕುಗಟ್ಟಿದ ಶರೀರದವನಾಗಿ ನೆಲಕ್ಕೆ ಬಿದ್ದು ಮಂಜಿನಂತೆ ಕರಗುತ್ತ ಕೆಲವೇ ಕ್ಷಣಗಳಲ್ಲಿ ಅಳಿದುಹೋದ.

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next