ಕೀವ್: ಉಕ್ರೇನ್ ಮೇಲೆ ದಾಳಿ ಮುಂದುವರಿಸಿರುವ ರಷ್ಯಾ, ಶುಕ್ರವಾರ ರಾತ್ರಿ ರಾಜಧಾನಿ ಕೀವ್‌ಗೆ ಲಗ್ಗೆಯಿಟ್ಟಿದೆ. ಭಾರೀ ಪ್ರಮಾಣ ದಲ್ಲಿ ಗುಂಡಿನ ಸದ್ದು, ಶೆಲ್ ದಾಳಿ ಆರಂಭಿಸಿದೆ.
ಕೀವ್ ಜತೆಗೆ ಡಿನಿಪ್ರೋ, ಲಸ್ಕ್, ಇವಾನೋ- ಫ್ರಾಂಕ್‌ವಿಸ್ಕ್, ಇಜಿಯುಂ ಸಹಿತ ಹಲವು ನಗರಗಳಲ್ಲಿ ರಷ್ಯಾ ದಾಳಿ ಮುಂದುವರಿದಿದೆ. ಇದೇ ಮೊದಲ ಬಾರಿಗೆ ಉಕ್ರೇನ್‌ನ ಪಶ್ಚಿಮ ಭಾಗದಲ್ಲಿ ವಿಮಾನ ನಿಲ್ದಾಣಗಳನ್ನು ಗುರಿ ಯಾಗಿಸಿಕೊಂಡು ರಾಕೆಟ್ ದಾಳಿ ನಡೆಸಲಾಗಿದೆ.
ಆ ದೇಶವನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ಪಡೆಯಲು ರಷ್ಯಾ ಮುಂದಾಗಿರುವುದು ಸ್ಪಷ್ಟವಾಗಿದೆ.
ಮರಿಯುಪೋಲ್‌ನಲ್ಲಿ ಹೆರಿಗೆ ಆಸ್ಪತ್ರೆ ಮೇಲೆ ಬಾಂಬೆಸೆದ ಮಾರನೇ ದಿನವೇ ರಷ್ಯಾ ಪಡೆ, ಅಂಗವಿಕಲರ ಆರೈಕೆ ಕೇಂದ್ರವನ್ನು ಸ್ಫೋಟಿಸಿದೆ. ಕೆಲವು ದಿನಗಳಿಂದ ರಷ್ಯಾ ಸೇನೆಯು ಉಕ್ರೇನ್‌ನ ಸೈನಿಕರ ಬದಲಾಗಿ ನಾಗರಿಕರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಈವರೆಗೆ 48 ಶಾಲೆಗಳನ್ನೂ ಧ್ವಂಸಗೊಳಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇನ್ನೊಂದೆಡೆ, ಉಕ್ರೇನ್ ಮೇಲಿನ ಆಕ್ರಮಣಕ್ಕೆ ನೆರವಾಗಲು ಮಧ್ಯಪ್ರಾಚ್ಯದಿಂದ ಐಸಿಸ್ ಉಗ್ರ ಸಂಘಟನೆಯ 16 ಸಾವಿರ ಮಾಜಿ ಸದಸ್ಯರನ್ನು ರಷ್ಯಾ ನೇಮಕ ಮಾಡಿದೆ ಎಂದು ಉಕ್ರೇನ್ ಆರೋಪಿಸಿದೆ.