ಮಾಸ್ಕೊ: ನೆಲದಲ್ಲಿ, ಗಗನದಲ್ಲಿ, ನೀರಿನಲ್ಲಿ, ಬೆಂಕಿ ನಡುವೆ… ಹೀಗೆ ಭೂಮಿ ಮೇಲಿನ ವಿವಿಧ ಪ್ರದೇಶಗಳಲ್ಲಿ ಸಿನಿಮಾ ಶೂಟಿಂಗ್ ಮಾಡಿರುವುದು ಗೊತ್ತು! ಆದರೆ, ಬಾಹ್ಯಾಕಾಶದಲ್ಲಿ ಸಿನಿಮಾ ಶೂಟಿಂಗ್ ಮಾಡುವುದು ಎಂದರೆ…?!
ಹೌದು, ನಂಬಲೇಬೇಕು. ರಷ್ಯಾದ ಸಿನಿಮಾ ತಂಡವೊಂದು ಇಂಥ ಸಾಧನೆ ಮಾಡಲು ಹೊರಟಿದೆ. ಅಂತರಿಕ್ಷದಲ್ಲಿ ಏಕೆ ಸಿನಿಮಾ ಶೂಟಿಂಗ್ ಮಾಡಬಾರದು ಎಂದು “ಚಾಲೆಂಜ್’ ಆಗಿ ತೆಗೆದುಕೊಂಡು ಅಲ್ಲಿಗೇ ತೆರಳಿದೆ. ಈ ತಂಡದಲ್ಲಿ ಚಿತ್ರದ ನಿರ್ದೇಶಕ ಮತ್ತು ನಟಿ ಇದ್ದು, ಬಾಹ್ಯಾಕಾಶ ವಿಜ್ಞಾನಿ ಆ್ಯಂಟನ್ ಶಕ್ಲಪರೇವ್ ಅವರು ಇದ್ದಾರೆ.
ಸುಯೆಜ್ ಎಂಎಸ್-19 ಹೆಸರಿನ ರಾಕೆಟ್‌ನ ಮೂಲಕ ಚಿತ್ರತಂಡ ಮಂಗಳವಾರದಂದು ಕಜಕಿಸ್ತಾನದ ಬೈಕೊನೂರ್ ಪ್ರಾಂತ್ಯದಲ್ಲಿರುವ ರಷ್ಯಾ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದೆ. ಅಂತರಿಕ್ಷಕ್ಕೆ ತೆರಳುವ ಸಲುವಾಗಿ 4 ತಿಂಗಳಿಂದ ಕಠಿಣವಾದ ತರಬೇತಿ ಪಡೆಯಲಾಗಿದೆ. ಚಿತ್ರೀಕರಣ ಮುಗಿಸಿ ಅ.17ರಂದು ಈ ತಂಡ ಭಾರತಕ್ಕೆ ವಾಪಸ್ ಬರಲಿದೆ.
ಅಂದಹಾಗೆ, ಚಿತ್ರದ ಹೆಸರು ಚಾಲೆಂಜ್. ಬಾಹ್ಯಾಕಾಶದಲ್ಲಿ ಪ್ರಯೋಗದಲ್ಲಿ ತೊಡಗಿದ ರಷ್ಯಾದ ವಿಜ್ಞಾನಿಯೊಬ್ಬರಿಗೆ ಹೃದಯಾಘಾತ ಸಂಭವಿಸುತ್ತದೆ. ಅವರನ್ನು ಬದುಕಿಸಿ ಅವರನ್ನು ಅಲ್ಲಿಂದ ಭೂಮಿಗೆ ವಾಪಸ್ ತರಲು ಭೂಮಿಯಲ್ಲಿನ ವಿಜ್ಞಾನಿಗಳು ಒಬ್ಬ ಮಹಿಳಾ ತಜ್ಞ ವೈದ್ಯೆಯನ್ನು ಅಂತರಿಕ್ಷಕ್ಕೆ ಕಳುಹಿಸುತ್ತಾರೆ. ಆ ವೈದ್ಯ ಹಾಗೂ ಅವರ ತಂಡ 12 ದಿನಗಳ ಕಾಲ ಬಾಹ್ಯಾಕಾಶದಲ್ಲಿದ್ದು ಈ ಸವಾಲನ್ನು ಸಮರ್ಥವಾಗಿ ಮೆಟ್ಟುವುದೇ ಚಾಲೆಂಜ್ ಚಿತ್ರದ ಕಥಾಹಂದರ. ರಷ್ಯಾದ ನಟಿ ಯುಲಿಯಾ ಪೆರಿಸಿಲ್ಡ್ ವೈದ್ಯೆಯ ಪಾತ್ರ ನಿರ್ವಹಿಸುತ್ತಿದ್ದಾರೆ.
ಬಾಹ್ಯಾಕಾಶ ಪ್ರಯಾಣಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿದ ಚಿತ್ರದ ನಿರ್ದೇಶಕ ಕ್ಲಿಮ್ ಶಿಪೆಂಕೋ, ಬಾಹ್ಯಾಕಾಶದಲ್ಲಿ ಚಿತ್ರೀಕರಣ ನಡೆಸಲು ಕಲಾವಿದರಿಗೆ, ತಂತ್ರಜ್ಞರಿಗೆ ಕಷ್ಟಕರವಾದ ತರಬೇತಿ ಕೊಟ್ಟು ಕರೆದೊಯ್ಯಲಾಗುತ್ತಿದೆ ಎಂದಿದ್ದಾರೆ.