ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಭೀಕರ ಹಂತಕ್ಕೆ ತಲುಪಿದ್ದು, ಮತ್ತೊಂದೆಡೆ ತಮ್ಮ ದೇಶದ ಅಣ್ವಸ್ತ್ರ ಪಡೆಗೆ ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ರಷ್ಯಾ ಅಧ್ಯಕ್ಷ ಪುಟಿನ್ ಹೇಳಿಕೆ ನೀಡಿರುವುದು ಹೆಚ್ಚಿನ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಏತನ್ಮಧ್ಯೆ ಉಕ್ರೇನ್ ನಲ್ಲಿರುವ ಭಾರತೀಯರ ರಕ್ಷಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ಫೆ.28) ಉನ್ನತ ಮಟ್ಟದ ಸಭೆಯನ್ನು ನಡೆಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಐಪಿಎಲ್ 2022: ನೂತನ ನಾಯಕನನ್ನು ನೇಮಿಸಿದ ಪಂಜಾಬ್ ಕಿಂಗ್ಸ್
ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ಭಾರತೀಯರ ರಕ್ಷಣೆಗಾಗಿ ಕೆಲವು ಕೇಂದ್ರ ಸಚಿವರನ್ನು ಉಕ್ರೇನ್ ನ ನೆರೆಯ ದೇಶಗಳಿಗೆ ಕಳುಹಿಸುವ ಬಗ್ಗೆ ಭಾರತ ಸರ್ಕಾರ ಸಿದ್ಧತೆ ನಡೆಸಿರುವುದಾಗಿ ಮೂಲಗಳು ತಿಳಿಸಿರುವುದಾಗಿ ವರದಿ ವಿವರಿಸಿದೆ.
ಉಕ್ರೇನ್, ರಷ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬೇರೆ ದೇಶಗಳ ಸಹಕಾರ ಪಡೆದು ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಸರ್ವ ರೀತಿಯಲ್ಲಿಯೂ ಪ್ರಯತ್ನಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಉಕ್ರೇನ್ ನ ನೆರೆದೇಶಗಳ ಸಹಕಾರದೊಂದಿಗೆ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಕೇಂದ್ರ ಸಚಿವರಾದ ಹರ್ದೀಪ್ ಪುರಿ, ಜ್ಯೋತಿರಾದಿತ್ಯ ಸಿಂದಿಯಾ, ಕಿರಣ್ ರಿಜಿಜು ಮತ್ತು ಜನರಲ್ ವಿಕೆ ಸಿಂಗ್ ನೇತೃತ್ವದ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹೊಣೆಗಾರಿಕೆ ನೀಡಿರುವುದಾಗಿ ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಯುದ್ಧವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ರಷ್ಯಾ ಜೊತೆ ಮಾತುಕತೆ ನಡೆಸಲು ಉಕ್ರೇನ್ ನಿಯೋಗ ಈಗಾಗಲೇ ಬೆಲಾರೂಸ್ ಗೆ ಆಗಮಿಸಿರುವುದಾಗಿ ಸ್ಪೆಕ್ಟೆಟರ್ ಇಂಡೆಕ್ಸ್ ವರದಿ ಮಾಡಿದೆ. ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ಎಲ್ಲಾ ದೇಶದ ನಾಗರಿಕರಿಗೆ ನೆರವು ನೀಡುವುದಾಗಿ ಪೋಲ್ಯಾಂಡ್ ಘೋಷಿಸಿದೆ.
ಭಾರತೀಯರ ಸುರಕ್ಷಿತ ಸ್ಥಳಾಂತರಕ್ಕೆ ವೀಸಾ ಅಗತ್ಯವಿಲ್ಲ ಎಂದು ಭಾರತದಲ್ಲಿರುವ ಪೋಲ್ಯಾಂಡ್ ರಾಯಬಾರಿ ಆ್ಯಡಂ ಬುರಾಕೋವಾಸ್ಕಿ ತಿಳಿಸಿದ್ದಾರೆ. ರಾಷ್ಟ್ರೀಯತೆ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ತಾರತಮ್ಯ ಇಲ್ಲ, ಎಲ್ಲಾ ದೇಶದವರಿಗೂ ನಾವು ನೆರವು ನೀಡುವುದಾಗಿ ಪೋಲ್ಯಾಂಡ್ ಭರವಸೆ ನೀಡಿರುವುದಾಗಿ ವರದಿ ವಿವರಿಸಿದೆ.