Advertisement

ರಷ್ಯಾಕ್ಕೆ ಗೇಟ್‌ಪಾಸ್‌ ಶಿಕ್ಷೆ 

11:42 PM Apr 07, 2022 | Team Udayavani |

ಹೊಸದಿಲ್ಲಿ: ರಷ್ಯಾಕ್ಕೆ ಜಾಗತಿಕವಾಗಿ ಭಾರೀ ಮುಖಭಂಗವಾಗಿದೆ. ವಿಶ್ವಸಂಸ್ಥೆಯ ಟಾಪ್‌-5 ಸ್ಥಾನದಲ್ಲಿದ್ದಂಥ, ವಿಟೋ ಪವರ್‌ ಇದ್ದಂಥ ಬಲಿಷ್ಠ ರಾಷ್ಟ್ರ ರಷ್ಯಾವನ್ನು “ಮಾನವ ಹಕ್ಕು ಮಂಡಳಿ’ಯಿಂದಲೇ ಹೊರದಬ್ಬಿದ ಕ್ಷಿಪ್ರ ಬೆಳವಣಿಗೆ ಗುರುವಾರ ನಡೆದಿದೆ.

Advertisement

ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ರಷ್ಯನ್‌ ಸೇನೆ ಬುಚಾ, ಕೀವ್‌ ಸೇರಿದಂತೆ ಹಲವು ತಾಣಗಳಲ್ಲಿ ನರ ಮೇಧ ಕೈಗೊಂಡ ಸಂಗತಿಯೇ ವಿಶ್ವಸಂಸ್ಥೆಯ ಕೆಂಗಣ್ಣಿಗೆ ಗುರಿಯಾಗಿತ್ತು. ವಿಶ್ವಸಂಸ್ಥೆಯ ಅಂಗ ಘಟಕವಾದ “ಮಾನವ ಹಕ್ಕು ಮಂಡಳಿ’ಯಲ್ಲಿದ್ದೂ ರಷ್ಯಾ ತನ್ನ ಹೊಣೆ ಮರೆತ ಕಾರಣ, ಈ ಶಿಕ್ಷೆ ನೀಡಲಾಗಿದೆ.

ರಷ್ಯಾ ಪರ ಅಲ್ಪಮತ: ಮಾನವ ಹಕ್ಕು ಮಂಡಳಿಯಿಂದ ರಷ್ಯಾವನ್ನು ಕೈಬಿಡುವ ವಿಚಾರವನ್ನು ವಿಶ್ವಸಂಸ್ಥೆಯಲ್ಲಿ ಮತಕ್ಕೆ ಹಾಕಲಾಗಿತ್ತು. 197 ಸದಸ್ಯ ರಾಷ್ಟ್ರಗಳ ಪೈಕಿ, 93 ರಾಷ್ಟ್ರಗಳು ಮಂಡಳಿಯ ನಿಲುವನ್ನು ಬೆಂಬಲಿಸಿ, ಮತ ಚಲಾಯಿಸಿದವು. ರಷ್ಯಾದ ಪರವಾಗಿ ಮತ್ತು ಮಂಡಳಿ ನಿಲುವಿನ ವಿರುದ್ಧವಾಗಿ ಕೇವಲ 24 ಮತಗಳಷ್ಟೇ ಬಿದ್ದಿವೆ.

ದೂರವುಳಿದ 58 ದೇಶಗಳು: ಮಾನವ ಹಕ್ಕು ಮಂಡಳಿಯಲ್ಲಿ ಉಳಿದುಕೊಳ್ಳಲು ರಷ್ಯಾಕ್ಕೆ 47 ಮತಗಳ ಆವಶ್ಯಕತೆ ಇತ್ತು. ಆದರೆ ಭಾರತವೂ ಸೇರಿದಂತೆ ಒಟ್ಟು 58 ರಾಷ್ಟ್ರ ಗಳು ಮತದಾನ ಪ್ರಕ್ರಿಯೆಯಿಂದಲೇ ದೂರವುಳಿದು, ತಟಸ್ಥ ಧೋರಣೆ ಅನುಸರಿಸಿದವು.

ಭಾರತ ತಟಸ್ಥವಾಗಿದ್ದೇಕೆ?: ರಷ್ಯಾ- ಉಕ್ರೇನ್‌ ಯುದ್ಧದ ವಿಚಾರದಲ್ಲಿ ತಾನು ಶಾಂತಿ ಪರ ಎಂಬುದನ್ನು ಭಾರತ ಈಗಾಗಲೇ ಘೋಷಿಸಿದೆ. ಗುರುವಾರದ ಮತಪ್ರಕ್ರಿಯೆಯಲ್ಲೂ ಇದೇ ನಿಲುವನ್ನೇ ಎತ್ತಿಹಿಡಿದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆಯ ಭಾರತೀಯ ರಾಯಭಾರಿ ಟಿ.ಎಸ್‌. ತಿರುಮೂರ್ತಿ, “ಈ ಯುದ್ಧದ ಆರಂಭದಿಂದಲೂ ಭಾರತ ಶಾಂತಿ, ಮಾತುಕತೆ ಮತ್ತು ರಾಜತಾಂತ್ರಿಕತೆಯ ಪರವಾಗಿ ನಿಂತಿದೆ. ರಕ್ತದ ಪ್ರವಾಹದಿಂದ, ಮುಗ್ಧ ನಾಗರಿಕರ ಸಾವಿನಿಂದ ಯಾವುದೇ ಪರಿಹಾರವಿಲ್ಲ ಎಂಬುದನ್ನು ನಂಬಿದವರು ನಾವು. ಭಾರತ ನಿಲ್ಲುವುದಾದರೆ, ಅದು ಶಾಂತಿಯ ಪರ ಮಾತ್ರ. ತಕ್ಷಣದಿಂದಲೇ ಹಿಂಸೆ ನಿಲ್ಲುವುದಕ್ಕೆ ನಮ್ಮ ಬೆಂಬಲವಿದೆ’ ಎಂದಿದ್ದಾರೆ.

Advertisement

ಪುತಿನ್‌ ಮಕ್ಕಳಿಗೆ ಅಮೆರಿಕ ನಿರ್ಬಂಧ :

ರಷ್ಯಾದ ಮೇಲೆ ಹಲವು ರೀತಿಯ ದಿಗ್ಬಂಧನಗಳನ್ನು ಹೇರಿರುವ ಅಮೆರಿಕ ಸರಕಾರ ಈಗ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಅವರ ಇಬ್ಬರು ಹೆಣ್ಣು ಮಕ್ಕಳಾ ಗಿರುವ ಕ್ಯಾಥರೀನಾ ಟಿಕೋರ್ನೋವಾ  ಮತ್ತು ಮರಿಯಾ ಪುತಿನ್‌ ಮೇಲೆ ನಿರ್ಬಂಧ ಹೇರಿದೆ. ಅಮೆರಿಕ ಸರಕಾರದ ಪ್ರಕಾರ ಪುತಿನ್‌ ಅವರ ಬಹುಕೋಟಿ ಡಾಲರ್‌ ಮೊತ್ತದ ಆಸ್ತಿ ಕುಟುಂಬದ ಸದಸ್ಯರ ಹೆಸರಿನಲ್ಲಿದೆ. ಹೀಗಾಗಿ ಅವರ ಕುಟುಂಬದ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯ ವಾಗಿದೆ ಎಂದು ಬೈಡೆನ್‌ ಸರಕಾರದ ವಾದ. ಪುತಿನ್‌ ಮಕ್ಕಳ ಹೆಸರಿನಲ್ಲಿ ಅಮೆರಿಕದಲ್ಲಿಯೂ ಭಾರೀ ಪ್ರಮಾ ಣದಲ್ಲಿ ಆಸ್ತಿ ಇರುವ ಸಾಧ್ಯತೆ ಇದೆ. ಗಮನಾರ್ಹ ವೆಂದರೆ ಲೈಡ್ಮಿಲಾ ಪುತಿನ್‌ರ ಜತೆಗಿನ ದಾಂಪತ್ಯದಿಂದ ಜನಿಸಿದ ಈ ಹೆಣ್ಣು ಮಕ್ಕಳನ್ನು ವ್ಲಾದಿಮಿರ್‌ ಪುತಿನ್‌ ಇನ್ನೂ ತನ್ನ ಮಕ್ಕಳೆಂದು ಅಂಗೀಕರಿಸಿಲ್ಲ. ಪುತಿನ್‌ ಮಕ್ಕಳ ಜತೆಗೆ ಅಲ್ಲಿನ ವಿದೇ ಶಾಂಗ ಸಚಿವ ಸರ್ಗೆ ಲಾವ್ರೋ ಪತ್ನಿ ಮತ್ತು ಪುತ್ರಿ ಕೂಡ ಅಮೆರಿಕದಲ್ಲಿ ಹೇರಳವಾಗಿ ಆಸ್ತಿ ಹೊಂದಿದ್ದಾರೆ.

ಭಾರತ ನೆರವಿಗೆ ಬರಲಿ: ಝೆಲೆನ್‌ಸ್ಕಿ :

ರಷ್ಯಾ ಜತೆಗೆ ಸಂಧಾನ ನಡೆಸುವ ವಿಚಾರದಲ್ಲಿ ಭಾರತವನ್ನು ಸಂಪೂರ್ಣ ನಂಬಿದ್ದೇವೆ. ಭಾರತದಂಥ ದೇಶಗಳು ಉಕ್ರೇನ್‌ಗೆ ಭದ್ರತಾ ಖಾತ್ರಿದಾರ ನಾಗುವ ಭರವಸೆ ನೀಡಿದರೆ, ಖಂಡಿತವಾಗಿ ರಷ್ಯಾ ದೊಂದಿಗೆ ಸಂಧಾನದ ಮಾತುಕತೆ ನಡೆಸುತ್ತೇವೆ ಎಂದು ಯುದ್ಧ ಪೀಡಿತ ರಾಷ್ಟ್ರದ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ. “ರಿಪಬ್ಲಿಕ್‌’ ಆಂಗ್ಲ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು,  ರಷ್ಯಾ ಅಧ್ಯಕ್ಷ ಪುತಿನ್‌ ಜತೆಗಿನ ಮಾತುಕತೆಯಲ್ಲಿ ಇದೊಂದು ಸಮಾನಾಂತರ ಪ್ರಕ್ರಿಯೆ.

ಆದರೆ ನಮಗೆ ಭದ್ರತಾ ಖಾತ್ರಿ ನೀಡಲು ಹಲವು ದೇಶಗಳು ವಿಳಂಬ ಮಾಡುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬುಚಾ ಒಂದೇ ಅಲ್ಲ:  “ಬುಚಾದಲ್ಲಿ ರಷ್ಯಾ ನರಮೇಧ ನಡೆಸಿ, ಈಗ ನಕಲಿ ಎನ್ನುತ್ತಿದೆ. ಆದರೆ, ಸಾಕ್ಷ್ಯಗಳು ಸುಳ್ಳು ಹೇಳುವುದಿಲ್ಲ. ಬುಚಾದಂತೆ ರಷ್ಯಾ ಹಲವೆಡೆ ನರಮೇಧ ನಡೆಸಿದೆ. ಯುದ್ಧ ಕಣದಿಂದ ಕಾಲ್ಕಿàಳುವ ಪ್ರಶ್ನೆಯೇ ಇಲ್ಲ. ರಷ್ಯಾದ ತುಕಡಿಯನ್ನು ಹಿಮ್ಮೆಟ್ಟಿಸಿ, ಒಡೆಸ್ಸಾ ಮೇಲೆ ನಿಯಂತ್ರಣ ಸಾಧಿಸಿದ್ದೇವೆ. ಮರಿಯುಪೋಲ್‌ನ ಸ್ಥಿತಿ ಚಿಂತಾಜನಕವಾಗಿದೆ. ಅದನ್ನೂ ಪಡೆದೇ ತೀರುತ್ತೇವೆ’ ಎಂದಿದ್ದಾರೆ.

ಮಾಸ್ಕೋ ವಿಮಾನ ರದ್ದು  :

ಹೊಸದಿಲ್ಲಿಯಿಂದ ಮಾಸ್ಕೋಗೆ ತೆರಳಬೇಕಾಗಿದ್ದ ಏರ್‌ ಇಂಡಿಯಾ ವಿಮಾನ ರದ್ದುಗೊಳಿಸಲಾಗಿದೆ. ವಿಮೆ ನವೀಕರಣ ಸಾಧ್ಯವಾಗದೆ ಇದ್ದುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿನ ವಿಮಾ ಕಂಪೆನಿಗಳು ವಿಮಾನಗಳಿಗೆ ವಿಮೆ ನೀಡುತ್ತವೆ. ಆದರೆ ಆ ರಾಷ್ಟ್ರಗಳು ರಷ್ಯಾ ಜತೆಗಿನ ವಹಿವಾಟು ಕಡಿದುಕೊಂಡಿರುವುದರಿಂದ ನವೀಕರಣ ಸಾಧ್ಯವಾಗಿಲ್ಲ. ದಿಲ್ಲಿಯಿಂದ ಮಾಸ್ಕೋ ನಡುವೆ ವಾರಕ್ಕೆ 2 ಬಾರಿ ವಿಮಾನ ಸಂಚಾರವಿದೆ.

Advertisement

Udayavani is now on Telegram. Click here to join our channel and stay updated with the latest news.

Next