Advertisement

ಅಣ್ವಸ್ತ್ರ ಒಪ್ಪಂದ ರದ್ದು; ಅಮೆರಿಕಕ್ಕೆ ಸವಾಲೆಸೆದ ರಷ್ಯಾ ಅಧ್ಯಕ್ಷ ಪುಟಿನ್‌

11:00 PM Feb 21, 2023 | Team Udayavani |

ಮಾಸ್ಕೋ/ವಾಷಿಂಗ್ಟನ್‌:ಅಮೆರಿಕ ಸರ್ಕಾರದ ಜತೆಗೆ 2010ರಲ್ಲಿ ಸಹಿ ಹಾಕಲಾಗಿದ್ದ ಪರಮಾಣು ಒಪ್ಪಂದವನ್ನು ರದ್ದುಗೊಳಿಸುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಮಂಗಳವಾರ ಪ್ರಕಟಿಸಿದ್ದಾರೆ.

Advertisement

ರಷ್ಯಾ ಸಂಸತ್‌ ಕ್ರೆಮ್ಲಿನ್‌ನಲ್ಲಿ ಮಂಗಳವಾರ ಮಾತನಾಡಿದ ಅವರು, ಉಕ್ರೇನ್‌ ವಿರುದ್ಧ ನಡೆಸುತ್ತಿರುವ ದಾಳಿಯನ್ನೂ ಅವರು ಸಮರ್ಥಿಸಿದ್ದಾರೆ. ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಉಕ್ರೇನ್‌ನಲ್ಲಿ ತೆÌàಷಮಯ ವಾತಾವರಣ ಇರಬೇಕಾಗಿದೆ ಎಂದು ಪುಟಿನ್‌ ಆರೋಪಿಸಿದ್ದಾರೆ.

ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳ ವಿರುದ್ಧ ಕಟು ಟೀಕಾ ಪ್ರಹಾರ ನಡೆಸಿದ ರಷ್ಯಾ ಅಧ್ಯಕ್ಷರು ಉಕ್ರೇನ್‌ ವಿರುದ್ಧ ಸದ್ಯ ಹೊಂದಿರುವ ಯಾವುದೇ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳುವುದಿಲ್ಲ ಎಂದರು. “ನಾವು ಉಕ್ರೇನ್‌ ಜನರಿಗಾಗಿ ಹೋರಾಟ ನಡೆಸುತ್ತಿಲ್ಲ. ಅಮೆರಿಕೆ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳ ತಂತ್ರಗಾರಿಕೆಯ ಹಿಡಿತದಲ್ಲಿ ಉಕ್ರೇನ್‌ ಇದೆ. ಹೀಗಾಗಿ, ಅಲ್ಲಿನ ಜನರು ಒಂದು ರೀತಿಯಲ್ಲಿ ಒತ್ತೆ ಸೆರೆಯಲ್ಲಿ ಇದ್ದಾರೆ’ ಎಂದು ಟೀಕಿಸಿದ್ದಾರೆ.

ಒಪ್ಪಂದ ರದ್ದು:
ಅಮೆರಿಕ ಮತ್ತು ರಷ್ಯಾ ತಮ್ಮಲ್ಲಿ ಇರುವ ಅಣ್ವಸ್ತ್ರಗಳ ವಿವರಗಳನ್ನು ಪರಸ್ಪರ ನೀಡುವ ಬಗ್ಗೆ 2010ರಲ್ಲಿ ಮಾಡಲಾಗಿದ್ದ ಒಪ್ಪಂದ ರದ್ದು ಮಾಡುವ ಬಗ್ಗೆ ಘೋಷಣೆ ಮಾಡಿದ್ದಾರೆ. ಜತೆಗೆ ಒಂದು ವೇಳೆ ಅಮೆರಿಕ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆ ನಡೆಸಿದರೆ, ತಮ್ಮ ದೇಶ ಕೂಡ ಅದಕ್ಕೆ ಸಿದ್ಧವಾಗಿಯೇ ಎಂದು ಸವಾಲನ್ನೂ ಅಮೆರಿಕಕ್ಕೆ ರಷ್ಯಾ ಅಧ್ಯಕ್ಷರು ನೀಡಿದ್ದಾರೆ. ಪುಟಿನ್‌ ಅವರ ಈ ಘೋಷಣೆಯಿಂದಾಗಿ ಜಗತ್ತಿನ ಒಟ್ಟೂ ರಾಜಕೀಯದ ಮೇಲೆ ಯಾವ ರೀತಿಯ ಪ್ರತಿಕೂಲ ಪರಿಣಾಮ ಬೀರಲಿದೆ ಎಂಬ ಬಗ್ಗೆ ಆತಂಕ ಶುರುವಾಗಿದೆ.

ಸೋಲಿಸಲಾಗದು:
ರಷ್ಯಾವನ್ನು ಯಾವುದೇ ರೀತಿಯಲ್ಲಿ ಸೋಲಿಸಲು ಸಾಧ್ಯವಿಲ್ಲ ಎಂದು ಹೇಳಿಕೊಂಡ ಪುಟಿನ್‌, “ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾವನ್ನು ಸೋಲಿಸಲೇಬೇಕು ಎಂಬ ವ್ಯೂಹಾತ್ಮಕ ಕಾರ್ಯಸೂಚಿಯನ್ನು ಹೊಂದಿವೆ. ಅದು ಈಡೇರಲು ಸಾಧ್ಯವಿಲ್ಲ. ನಮ್ಮ ದೇಶ, ಜನರ ವಿರುದ್ಧ ಸುಳ್ಳಿನ ಸರಮಾಲೆಯನ್ನೇ ಹೊಂದಿರುವ ಮಾಹಿತಿ ಯುದ್ಧ ನಡೆಸಿದ್ದಾರೆ. ಅದಕ್ಕೆ ಪೂರಕವಾಗಿ ಆರ್ಥಿಕ ದಿಗ್ಬಂಧನ ವಿಧಿಸಲಾಗಿದೆ. ಆದರೆ, ಅದರಿಂದ ಯಾವುದೇ ಪ್ರತಿಕೂಲ ಪರಿಣಾಮ ಉಂಟಾಗಿಲ್ಲ’ ಎಂದು ಘೋಷಿಸಿಕೊಂಡರು.

Advertisement

10 ಗಂಟೆ ರೈಲಲ್ಲಿ:
ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ರಹಸ್ಯವಾಗಿ ಉಕ್ರೇನ್‌ ಪ್ರಯಾಣ ಕೈಗೊಂಡಿದ್ದ ವಿಧಾನವೂ ಬೆಳಕಿಗೆ ಬಂದಿದೆ. ಅಮೆರಿಕದ ಕಾಲಮಾನ ಭಾನುವಾರ ಬೆಳಗ್ಗೆ 4 ಗಂಟೆಗೆ ಬೈಡೆನ್‌ ಅಮೆರಿಕ ವಾಯುಪಡೆಯ ಸಿ-32 ವಿಮಾನದಲ್ಲಿ ಮಾಸ್ಕೋ ಗೆ ಪ್ರಯಾಣಿಸಿದ್ದರು. ಅಲ್ಲಿಂದ ಉಕ್ರೇನ್‌ ರಾಜಧಾನಿ ಕೀವ್‌ಗೆ ರೈಲಿನಲ್ಲಿ ಹತ್ತು ಗಂಟೆಗಳ ಪ್ರಯಾಣ ಮಾಡಿದ್ದರು. ಈ ಅವಧಿಯಲ್ಲಿ ಫೋನ್‌ ಸಂಪರ್ಕ ನಿಷೇಧಿಸಲಾಗಿತ್ತು. ಜತೆಗೆ ಇಬ್ಬರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಮೆರಿಕದ ಸೇನೆಯ ನಿಯಂತ್ರಣ ಇಲ್ಲದ ಯುದ್ಧ ಭೂಮಿಗೆ ಅಧ್ಯಕ್ಷರೊಬ್ಬರು ನೀಡಿದ ಹೆಗ್ಗಳಿಕೆಯನ್ನು ಬೈಡೆನ್‌ ಪಡೆದುಕೊಂಡಿದ್ದಾರೆ.

ಭಾರತದ ಜತೆಗೆ ವಾಣಿಜ್ಯ ವೃದ್ಧಿಗೆ
ಹೊಸ ಕಾರಿಡಾರ್‌ ನಿರ್ಮಾಣ
ಭಾರತದ ಜತೆಗೆ ವಾಣಿಜ್ಯ ಬಾಂಧವ್ಯ ವೃದ್ಧಿಗೆ ರಷ್ಯಾ ಸರ್ಕಾರ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್‌ (ಐಎನ್‌ಎಸ್‌ಟಿಸಿ) ನಿರ್ಮಾಣ ಮಾಡುತ್ತಿದೆ ಎಂದು ಅಧ್ಯಕ್ಷ ಪುಟಿನ್‌ ಪ್ರಕಟಿಸಿದ್ದಾರೆ. ಇದು ಭಾರತ ಪ್ರಸ್ತಾಪ ಮಾಡಿದ ದೂರದರ್ಶಿತ್ವದ ಮಾರ್ಗ ಎಂದು ಅವರು ಕೊಂಡಾಡಿದರು. ಇದರಿಂದಾಗಿ ಭಾರತ, ಪಾಕಿಸ್ತಾನ, ಇರಾನ್‌, ಅಫ್ಘಾನಿಸ್ತಾನ, ಇರಾನ್‌, ಅರ್ಮೇನಿಯಾ, ಅಜರ್‌ಬೈಜಾನ್‌, ರಷ್ಯಾ, ಕೇಂದ್ರ ಏಷ್ಯಾ ಮತ್ತು ಐರೋಪ್ಯ ರಾಷ್ಟ್ರಗಳಿಗೆ ಹೊಸ ವಾಣಿಜ್ಯ ಮಾರ್ಗ ತೆರೆದುಕೊಳ್ಳಲಿವೆ ಎಂದು ಹೇಳಿದ್ದಾರೆ.

ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ಸರ್ಕಾರಗಳು ಆರ್ಥಿಕ ದಿಗ್ಬಂಧನಗಳನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಹೊಸ ಅಂತಾರಾಷ್ಟ್ರೀಯ ಆರ್ಥಿಕ ಸಂಪರ್ಕ ಮಾರ್ಗಗಳನ್ನು ಶೋಧಿಸಿ, ಅಗತ್ಯ ವಸ್ತುಗಳ ಪೂರೈಕೆ ಜಾಲ ಅಭಿವೃದ್ಧಿಪಡಿಸಿಕೊಳ್ಳಬೇಕಾಗಿದೆ ಎಂದರು. ಅದು ಒಟ್ಟು 7,200 ಕಿಮೀ ದೂರವನ್ನು ಹೊಂದಿರಲಿದೆ. ಇದರಿಂದಾಗಿ ಈ ಭಾಗದ ರಾಷ್ಟ್ರಗಳಿಗೆ ಅಗತ್ಯ ಸರಕುಗಳು ಕ್ಷಿಪ್ರಗತಿಯಲ್ಲಿ ದೊರಕಲಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next