Advertisement

Moscow ಭೀಕರ ದಾಳಿಯ ಹೊಣೆ ಹೊತ್ತ ಐಸಿಸ್: ಮೃತರ ಸಂಖ್ಯೆ 150ಕ್ಕೆ

12:02 AM Mar 24, 2024 | Vishnudas Patil |

ಮಾಸ್ಕೋ : ರಷ್ಯಾದ ಮಾಸ್ಕೋದ ಹೊರವಲಯದಲ್ಲಿರುವ ಬೃಹತ್ ಕನ್ಸರ್ಟ್ ಹಾಲ್‌ನಲ್ಲಿ ನಡೆದ ಭೀಕರ ಉಗ್ರ ದಾಳಿಯ ಹೊಣೆಯನ್ನು ಐಸಿಸ್‌-ಕೆ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಮನಬಂದಂತೆ ಗುಂಡಿನ ದಾಳಿ ಮತ್ತು ಸ್ಪೋಟಕಗಳನ್ನು ಸಿಡಿಸಿ ನಾಲ್ವರು ಉಗ್ರರು ಅಟ್ಟಹಾಸ ಮೆರೆದಿದ್ದರು, ದಾಳಿಯಲ್ಲಿ ಕನಿಷ್ಠ150 ಜನರು ಸಾವನ್ನಪ್ಪಿದ್ದು, 145 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ರಷ್ಯಾದ ಬ್ರಿಯಾನ್ಸ್ಕ್ ಪ್ರದೇಶದಲ್ಲಿ ಕಾರ್ ಚೇಸ್ ಮಾಡಿದ ಪೊಲೀಸರು ಮಾರಣಾಂತಿಕ ದಾಳಿಯಲ್ಲಿ ನೇರವಾಗಿ ಭಾಗಿಯಾಗಿರುವ ಎಲ್ಲಾ ನಾಲ್ವರು ಬಂದೂಕುಧಾರಿಗಳು ಸೇರಿದಂತೆ 11 ಮಂದಿ ಶಂಕಿತರನ್ನು ಬಂಧಿಸಿದ್ದಾರೆ.

ದಾಳಿ ನಡೆಸಿದ ಉಗ್ರರು ಉಕ್ರೇನ್‌ನ ಸಂಪರ್ಕ ಹೊಂದಿದ್ದು ಕೃತ್ಯ ಎಸಗಿದ ಬಳಿಕ ಗಡಿಯತ್ತ ಸಾಗುತ್ತಿದ್ದರು ಎಂದು ರಷ್ಯಾದ ಭದ್ರತಾ ಸಂಸ್ಥೆ ಆರೋಪಿಸಿದೆ.

ಉಕ್ರೇನ್‌ನ ಪ್ರೆಸಿಡೆನ್ಸಿಯು ಕೀವ್ ಗೆ ಈ ದಾಳಿಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದು, ಉಕ್ರೇನ್ ಮಿಲಿಟರಿ ಗುಪ್ತಚರ ಇಲಾಖೆ ಘಟನೆಯನ್ನು ರಷ್ಯಾದ ಪ್ರಚೋದನೆ ಎಂದು ಕರೆದಿದೆ. ಮಾಸ್ಕೋ ವಿಶೇಷ ಸೇವೆಗಳು ಇದರ ಹಿಂದೆ ಇದೆ ಎಂದು ತಿರುಗೇಟು ನೀಡಿದೆ.

ನಡೆದದ್ದೇನು?
ಶುಕ್ರವಾರ ರಾತ್ರಿ ಜನರು ಕಿಕ್ಕಿರಿದು ಸೇರಿದ್ದ ಸಂಗೀತ ಸಭಾಂಗಣಕ್ಕೆ ದಿಢೀರನೆ ನಾಲ್ವರು ಬಂದೂಕುಧಾರಿಗಳು ನುಗ್ಗಿದರು. ಸತತವಾಗಿ ಗುಂಡು ಹಾರಿಸುತ್ತ, ಭಾರೀ ಬೆಂಕಿ ಉಂಟುಮಾಡುವ ಸ್ಫೋಟಕಗಳನ್ನು ಎಸೆಯುತ್ತ ಸಾಗಿದರು. ಇದರಿಂದ 150ಕ್ಕೂ ಅಧಿಕ ಮಂದಿ ಸಾವನ್ನ ಪ್ಪಿದ್ದಾರೆ. ಈ ಭೀಕರ ದಾಳಿಯನ್ನು ಭಾರತವೂ ಸೇರಿ ಜಗತ್ತಿನ ಪ್ರಮುಖ ರಾಷ್ಟ್ರಗಳಾದ ಅಮೆರಿಕ, ಫ್ರಾನ್ಸ್‌, ಸ್ಪೇನ್‌, ಚೀನ, ಇಟಲಿ ಖಂಡಿಸಿವೆ.

Advertisement

ಏನಿದು ಐಸಿಸ್‌-ಕೆ?
ಐಸಿಸ್‌-ಖೋರೊಸಾನ್‌ ಪ್ರಾವಿನ್ಸ್‌ ಎನ್ನುವುದು ಐಸಿಸ್‌ ಉಗ್ರ ಸಂಘಟನೆಯ ಅಂಗಸಂಸ್ಥೆ. ಇದು ಅಫ್ಘಾನಿ ಸ್ಥಾನದ ಪೂರ್ವಭಾಗದಲ್ಲಿ ಸಕ್ರಿಯವಾಗಿದೆ. ಅಫ್ಘಾನಿ ಸ್ಥಾನದಲ್ಲಿ ಹಲವು ಭೀಕರ ಉಗ್ರ ಕೃತ್ಯಗಳನ್ನು ನಡೆಸಿದೆ.

ಯಾಕೆ ದಾಳಿ?
ಐಸಿಸ್‌-ಕೆ ರಷ್ಯಾವನ್ನು ತನ್ನ ಶತ್ರು ಎಂದು ಪರಿಗಣಿಸಿದೆ. ರಷ್ಯಾ ದೇಶವು ಸಿರಿಯಾದ ಅಧ್ಯಕ್ಷ ಅಲ್‌ ಬಶರ್‌ ಅಸದ್‌ಗೆ ಬೆಂಬಲವಾಗಿ ತನ್ನ ಸೇನಾಪಡೆ ಯನ್ನು ಕಳಿಸಿತ್ತು. ಅಸದ್‌ ವಿರುದ್ಧ ತಿರುಗಿಬಿದ್ದಿದ್ದ ಐಸಿಸ್‌ ಮತ್ತಿತರ ಉಗ್ರ ಸಂಘಟನೆಗಳ ವಿರುದ್ಧ ದಾಳಿ ನಡೆಸಿತ್ತು. ಇದೇ ರಷ್ಯಾ ವಿರುದ್ಧದ ದಾಳಿಗೆ ಕಾರಣ ಎಂಬ ಶಂಕೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next