Advertisement

ಯುದ್ಧ : ಉಕ್ರೇನ್‌ ಮೇಲೆ ರಷ್ಯಾದಿಂದ ಭೀಕರ ದಾಳಿ

12:57 AM Feb 25, 2022 | Team Udayavani |

ಮಾಸ್ಕೋ/ಕೀವ್‌: ಯಾರು ಹೇಳಿದರೂ ಎಷ್ಟೇ ಪ್ರಯತ್ನಪಟ್ಟರೂ ಆ ರೌರವ ಕ್ಷಣಗಳನ್ನು ತಪ್ಪಿಸಲಾಗಲಿಲ್ಲ. ಉಕ್ರೇನ್‌ ನೆಲವು ರಾತ್ರಿ ಬೆಳಗಾಗುವಷ್ಟರಲ್ಲಿ ರಣಾಂಗಣವಾಗಿ ಬದಲಾಗಿದೆ. ಅಸಹಾಯಕ ದೇಶದ ಮೇಲೆ ದಶದಿಕ್ಕುಗಳಿಂದಲೂ ರಷ್ಯಾ ದಾಳಿ ನಡೆಸಿದೆ. ಬಾಂಬ್‌, ಕ್ಷಿಪಣಿಗಳು ಅಪ್ಪಳಿಸಿವೆ, ನೂರಾರು ಜೀವಗಳು ಬಲಿಯಾಗಿವೆ.  ಕೊನೆಗೂ ಯುದ್ಧ ಶುರುವಾಗಿದೆ!

Advertisement

ಗುರುವಾರ ಮುಂಜಾನೆ ಸರಿಯಾಗಿ 6 ಗಂಟೆಗೆ (ಮಾಸ್ಕೋ ಕಾಲಮಾನ) ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಅವರು ಉಕ್ರೇನ್‌ ವಿರುದ್ಧ ಯುದ್ಧ ಘೋಷಿಸಿದ್ದು, “ಈ ವಿಚಾರದಲ್ಲಿ ಯಾರಾದರೂ ಮೂಗು ತೂರಿಸಿದರೆ ಹಿಂದೆಂದೂ ಕಂಡರಿಯದಂತಹ ಪರಿಣಾಮ ಎದುರಿಸ ಬೇಕಾದೀತು. ನಮ್ಮದು ಅಣ್ವಸ್ತ್ರ ರಾಷ್ಟ್ರ’ ಎಂಬ ಎಚ್ಚರಿಕೆಯನ್ನು ಇತರ ರಾಷ್ಟ್ರಗಳಿಗೆ ನೀಡಿದ್ದಾರೆ.

ಪುತಿನ್‌ ಘೋಷಣೆ ಹೊರಬಿದ್ದ ಕೇವಲ ಅರ್ಧ ತಾಸಿ ನಲ್ಲೇ ಉಕ್ರೇನ್‌ನ ಕೀವ್‌, ಖಾರ್ಕಿವ್‌ ಮತ್ತು ಒಡೆಸಾ ನಗರಗಳತ್ತ ಬಾಂಬ್‌ ಹಾಗೂ ಕ್ಷಿಪಣಿಗಳು ನುಗ್ಗಿ ಬಂದವು. ಭಾರೀ ಪ್ರಮಾಣದ ಸ್ಫೋಟ ಸಂಭವಿಸಿದವು. ರಷ್ಯಾದ ಪಡೆಗಳು ಎಲ್ಲ ದಿಕ್ಕುಗಳಿಂದಲೂ ಉಕ್ರೇನ್‌ ಮೇಲೆ ಆಕ್ರಮಣ ಆರಂಭಿಸಿವೆ. ಉಕ್ರೇನ್‌ನ ಸೇನಾನೆಲೆಗಳು, ವಾಯುನೆಲೆಗಳು, ವಿಮಾನ ನಿಲ್ದಾಣಗಳು  ಧ್ವಂಸವಾದವು. ಗಡಿಯಿಂದ ನಿರಂತರವಾಗಿ ಶೆಲ್‌ಗ‌ಳು ತೂರಿಬಂದವು.

ಸಂಜೆ ವೇಳೆಗೆ ಒಟ್ಟಾರೆ 70 ಸೇನಾ ನೆಲೆಗಳನ್ನು ಧ್ವಂಸ ಗೊಳಿಸಿರುವುದಾಗಿ ರಷ್ಯಾ ಹೇಳಿಕೊಂಡಿದೆ. ದಾಳಿಯಿಂದಾಗಿ ಸೈನಿಕರು ಮತ್ತು ನಾಗರಿಕರು ಸೇರಿ ಕನಿಷ್ಠ 68 ಮಂದಿ ಸಾವಿಗೀಡಾಗಿದ್ದಾರೆ ಎಂದು ಉಕ್ರೇನ್‌ ಹೇಳಿದೆ. ಜತೆಗೆ ರಷ್ಯಾದ 50 ಸೈನಿಕರು ಹತರಾಗಿದ್ದಾರೆ ಎನ್ನಲಾಗಿದೆ.

ಪ್ರಧಾನಿ ಮೋದಿ ಸಭೆ :

Advertisement

ಈ  ಬೆಳವಣಿಗೆ ಬೆನ್ನಲ್ಲೇ  ಪ್ರಧಾನಿ ನರೇಂದ್ರ ಮೋದಿ   ಗುರುವಾರ ಸಂಜೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.

ಮಾರ್ಷಲ್‌ ಕಾನೂನು ಘೋಷಣೆ :

ಯುದ್ಧ ಆರಂಭವಾಗುತ್ತಿದ್ದಂತೆಯೇ ವಿಚಲಿತಗೊಂಡ ಉಕ್ರೇನ್‌ ಅಧ್ಯಕ್ಷ ವೋಲೋಡಿಮಿರ್‌ ಝೆಲೆನ್‌ಸ್ಕಿ ಅವರು ದೇಶಾದ್ಯಂತ ಮಾರ್ಷಲ್‌ ಕಾನೂನು ಘೋಷಿಸಿದರು. ಆತಂಕಕ್ಕೊಳಗಾಗಬೇಡಿ ಎಂದು ನಾಗರಿಕರಿಗೆ ಧೈರ್ಯ ತುಂಬಿ ದ್ದಾರೆ.  ರಷ್ಯಾ ವಿರುದ್ಧ ಅಂತಾರಾಷ್ಟ್ರೀಯ ಸಮು ದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಆಕ್ರಮಣ ಭಾರೀ  ಸಾವುನೋವು ಉಂಟು ಮಾಡುವುದಲ್ಲದೆ, ಉಕ್ರೇನ್‌ನ ಪ್ರಜಾಸತ್ತಾತ್ಮಕ ಸರಕಾರವನ್ನು ಪತನಗೊಳಿಸ ಲಿದೆ ಹಾಗೂ ಶೀತಲ ಸಮರೋತ್ತರ ಸಮತೋಲನವನ್ನು ಅಲ್ಲೋಲಕಲ್ಲೋಲಗೊಳಿಸಲಿದೆ ಎಂದಿವೆ. ಇದೊಂದು ನ್ಯಾಯಯುತವಲ್ಲದ ಅಪ್ರಚೋದಿತ ದಾಳಿ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಬಣ್ಣಿಸಿದ್ದು, ರಷ್ಯಾದ ಮೇಲೆ ದೊಡ್ಡಮಟ್ಟದ ನಿರ್ಬಂಧ ಹೇರುವು ದಾಗಿಯೂ ಎಚ್ಚರಿಸಿದ್ದಾರೆ. ರಷ್ಯಾದ ದಾಳಿಯನ್ನು “ಕ್ರೌರ್ಯ’ ಎಂದು ಬಣ್ಣಿಸಿರುವ ನ್ಯಾಟೋ ಪ್ರಧಾನ ಕಾರ್ಯದರ್ಶಿ ಜ. ಜೆನ್ಸ್‌ ಸ್ಟೋಟೆನ್‌ಬರ್ಗ್‌, ಐರೋಪ್ಯ ಖಂಡದ ಶಾಂತಿಯನ್ನು ಮಾಸ್ಕೋ ಕದಡಿಬಿಟ್ಟಿತು ಎಂದು ಉದ್ಗರಿಸಿದ್ದಾರೆ.

ನ್ಯಾಟೋ ಪ್ರವೇಶಿಸಿದರೆ 3ನೇ ವಿಶ್ವಯುದ್ಧ? :

ರಷ್ಯಾ ದಾಳಿ ಬೆನ್ನಲ್ಲೇ ಉಕ್ರೇನ್‌ ಕೂಡ ತಕ್ಕಮಟ್ಟಿಗೆ ಪ್ರತಿದಾಳಿ ನಡೆಸಿದ್ದು, ರಷ್ಯಾದ ಯುದ್ಧವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿದೆ. ಸದ್ಯಕ್ಕೆ ಉಕ್ರೇನ್‌ಗೆ ನ್ಯಾಟೋ ಪರೋಕ್ಷ ಸಹಕಾರ ನೀಡುತ್ತಿದೆ. ನ್ಯಾಟೋ  ನೇರವಾಗಿ ಯುದ್ಧಕ್ಕಿಳಿದರೆ, ಉಕ್ರೇನ್‌-ರಷ್ಯಾಗೆ ಸೀಮಿತವಾಗಿರುವ ಸಮರವು “3ನೇ ವಿಶ್ವಯುದ್ಧ’ವಾಗಿ ಮಾರ್ಪಡುವ ಸಾಧ್ಯತೆಯಿದೆ.  ಗುರುವಾರ ತುರ್ತು ಸಭೆ ಬಳಿಕ ಮಾತನಾಡಿರುವ ನ್ಯಾಟೋ ಪ್ರಧಾನ ಕಾರ್ಯದರ್ಶಿ ಜೆನ್ಸ್‌, “ನ್ಯಾಟೋ ಇತಿಹಾಸದಲ್ಲೇ ಅತ್ಯಂತ ಬಲಿಷ್ಠ ಮೈತ್ರಿಯಾಗಿದ್ದು, ಇದರ  ಪ್ರತಿ ಇಂಚನ್ನೂ ರಕ್ಷಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ, ನಮ್ಮ ಮಿತ್ರರಾಷ್ಟ್ರಗಳನ್ನು ಕೆಣಕಲು ಬಂದರೆ ಸುಮ್ಮನಿರುವುದಿಲ್ಲ’ ಎಂದಿದ್ದಾರೆ. ಶುಕ್ರವಾರ ನ್ಯಾಟೋ ಮಿತ್ರರಾಷ್ಟ್ರಗಳ ಸಭೆ ನಡೆಯಲಿದೆ.

ಆಕ್ರಮಣವಲ್ಲ ಎಂದ ಪುತಿನ್‌ :

“ಪೂರ್ವ ಉಕ್ರೇನ್‌ನ ನಾಗರಿಕರನ್ನು ರಕ್ಷಿಸಲು ದಾಳಿ ಅನಿವಾರ್ಯವಾಗಿತ್ತು. ಉಕ್ರೇನ್‌ ನ್ಯಾಟೋ ಪಡೆ ಸೇರದಂತೆ ತಡೆಯಿರಿ ಎಂದು ನಾವು ಎಷ್ಟೇ ಕೋರಿಕೊಂಡರೂ ಅದನ್ನು ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ತಿರಸ್ಕರಿಸಿದವು. ನಾವು ಉಕ್ರೇನ್‌ ಅನ್ನು ಆಕ್ರಮಿಸಿಕೊಳ್ಳುವುದಿಲ್ಲ, ಬದಲಾಗಿ ಉಕ್ರೇನ್‌ನ ಸೇನಾ ಶಕ್ತಿಯನ್ನು ಕುಗ್ಗಿಸುವುದಷ್ಟೇ ನಮ್ಮ ಉದ್ದೇಶ’ ಎಂದು ಪುತಿನ್‌ ಹೇಳಿದ್ದಾರೆ.  ನಾವು ಉಕ್ರೇನ್‌ನ ವಾಯುನೆಲೆ ಹಾಗೂ ಸೇನಾ ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸು ತ್ತೇವೆಯೇ ಹೊರತು ನಾಗರಿಕರ ಮೇಲಲ್ಲ ಎಂದು ರಷ್ಯಾ ಸೇನೆ ಸ್ಪಷ್ಟಪಡಿಸಿದೆ.

ಟೇಕ್‌ಆಫ್ ಆಗಿದ್ದ ಏರಿಂಡಿಯಾ ವಾಪಸ್‌ :

ಗುರುವಾರ ಮುಂಜಾನೆ ಉಕ್ರೇನ್‌ನಿಂದ ಭಾರತೀಯರನ್ನು ಕರೆತರಲೆಂದು ದಿಲ್ಲಿಯಿಂದ ಟೇಕ್‌ಆಫ್ ಆಗಿದ್ದ ಏರ್‌ಇಂಡಿಯಾ ವಿಮಾನವು ಅರ್ಧದಿಂದಲೇ ವಾಪಸಾಗಿದೆ. ಯುದ್ಧ ಘೋಷಣೆಯಾದ ಕಾರಣ ಉಕ್ರೇನ್‌ ಸರಕಾರವು ಎಲ್ಲ ನಾಗರಿಕ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಿ, ತನ್ನ ವಾಯುಪ್ರದೇಶವನ್ನು ಮುಚ್ಚುತ್ತಿರುವುದಾಗಿ ಘೋಷಿಸಿತು. ಈ ಹಿನ್ನೆಲೆಯಲ್ಲಿ ಇರಾನ್‌ ವಾಯುಪ್ರದೇಶ ತಲುಪಿದ್ದ ಏರ್‌ಇಂಡಿಯಾ ವಿಮಾನವು ಯೂಟರ್ನ್ ಹೊಡೆದು ದಿಲ್ಲಿಗೆ ಮರಳಬೇಕಾಯಿತು.

18 ಸಾವಿರ ಭಾರತೀಯರು: ಬಾಂಬ್‌ ದಾಳಿಯಿಂದ ರಕ್ಷಿಸಿಕೊಳ್ಳಲು ಉಕ್ರೇನ್‌ನಲ್ಲಿರುವ ಭಾರತೀಯರಿಗೆ ರಾಯಭಾರ ಕಚೇರಿ ಸೂಕ್ತ ಸಲಹೆ ನೀಡಿದೆ. ಸದ್ಯ ಉಕ್ರೇನ್‌ನಲ್ಲಿ  ವಿದ್ಯಾರ್ಥಿಗಳೂ ಸೇರಿ 18 ಸಾವಿರ ಭಾರತೀಯರಿದ್ದಾರೆ.

ಯಾವಾಗ ಏನೇನಾಯ್ತು? :

(ಭಾರತೀಯ ಕಾಲಮಾನ)

ಬೆಳಗ್ಗೆ 04.52 :

ಉಕ್ರೇನ್‌ ಮೇಲೆ ರಷ್ಯಾದಿಂದ ಏಕಾಏಕಿ ಸೈಬರ್‌ ದಾಳಿ

ಬೆಳಗ್ಗೆ 04.52 :

“ಶಾಂತಿಸ್ಥಾಪನೆಗೆ ಒಂದು ಅವಕಾಶ ಕೊಡಿ’  ರಷ್ಯಾಗೆ  ವಿಶ್ವಸಂಸ್ಥೆ  ಮನವಿ

08.30 : ವ್ಲಾದಿಮಿರ್‌ ಪುತಿನ್‌ರಿಂದ ದಾಳಿ ಘೋಷಣೆ

09.04 : ನ್ಯಾಯಯುತವಲ್ಲದ ಅಪ್ರಚೋದಿತ ದಾಳಿ ಎಂದ ಅಮೆರಿಕ ಅಧ್ಯಕ್ಷ

09.19 : ಪರಿಸ್ಥಿತಿ ತಿಳಿಗೊಳ್ಳಲಿ ಎಂದು ಉಭಯ ದೇಶಗಳಿಗೆ ಭಾರತ ಸಲಹೆ

10.29 : ಉಕ್ರೇನ್‌ನ ವಾಯು ನೆಲೆ, ಸೇನಾ ಆಸ್ತಿಪಾಸ್ತಿ ಮೇಲೆ ರಷ್ಯಾ ಸೇನೆ ದಾಳಿ

10.34 : ಉಕ್ರೇನ್‌ ಅಧ್ಯಕ್ಷರಿಂದ ಮಾರ್ಷಲ್‌ ಕಾನೂನು ಘೋಷಣೆ

12.18 : ಉಕ್ರೇನ್‌ನ ವಾಯು ರಕ್ಷಣ ವ್ಯವಸ್ಥೆ ಧ್ವಂಸ ಎಂದು ರಷ್ಯಾ ಘೋಷಣೆ

01.16 : ಐರೋಪ್ಯ ಒಕ್ಕೂಟದಿಂದ ರಷ್ಯಾಕ್ಕೆ ಕಠಿನ ನಿರ್ಬಂಧದ ಎಚ್ಚರಿಕೆ

02.40 : ನೆರವಿಗೆ ವಿಶ್ವ ನಾಯಕರಿಗೆ ಉಕ್ರೇನ್‌ ಅಧ್ಯಕ್ಷ ಮೊರೆ

ರಷ್ಯಾವು “ನಾಝಿ ಜರ್ಮನಿ’ಯಂತೆ ವರ್ತಿಸುತ್ತಿದೆ. ನಮ್ಮ ದೇಶವನ್ನು ರಕ್ಷಿಸಲು ಯಾರು ಮುಂದೆ ಬಂದರೂ, ಅವರಿಗೆ ಶಸ್ತ್ರಾಸ್ತ್ರಗಳನ್ನು ಕಲ್ಪಿಸಲು ನಾವು ಸಿದ್ಧರಿದ್ದೇವೆ.– ವೋಲೋಡಿಮಿರ್‌ ಝೆಲೆನ್‌ಸ್ಕಿ,ಉಕ್ರೇನ್‌ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next