ಮಹಾನಗರ: ನಗರದ ಹೊಯಿಗೆ ಬಜಾರ್ ಪ್ರದೇಶದ ರಸ್ತೆಗೆ ಕಾಂಕ್ರೀಟ್ ಹಾಕಿ ಅಭಿವೃದ್ಧಿಪಡಿಸಲಾಗಿದ್ದು, ಚರಂಡಿ ವ್ಯವಸ್ಥೆಯನ್ನು ಅದಕ್ಕನುಗುಣವಾಗಿ ನಿರ್ವಹಣೆ ಮಾಡದ ಕಾರಣ ಮಳೆ ಬಂದಾಗ ರಸ್ತೆ ಮತ್ತು ಚರಂಡಿಯ ನೀರು ರಸ್ತೆ ಬದಿಯ ಮನೆಗಳಿಗೆ ನುಗ್ಗುತ್ತಿದ್ದು, ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
ರಸ್ತೆಗೆ 12 ಇಂಚು ದಪ್ಪದ ಕಾಂಕ್ರೀಟ್ ಹಾಕಲಾಗಿದೆ. ಹೀಗಾಗಿ ರಸ್ತೆಯು ಚರಂಡಿ ಹಾಗೂ ರಸ್ತೆಯ ಇಕ್ಕೆಲ ಗಳಲ್ಲಿರುವ ಮನೆಗಳಿಗಿಂತ ಎತ್ತರದಲ್ಲಿದೆ. ರಸ್ತೆಯ ನೀರು ಚರಂಡಿಗೆ ಹರಿಯುತ್ತಿದ್ದರೂ ಚರಂಡಿಯ ಮೂಲಕ ಅದು ಮುಂದಕ್ಕೆ ಹರಿದು ರಾಜ ಕಾಲುವೆಗೆ ಸೇರಲು ಅನುವು ಮಾಡಿ ಕೊಟ್ಟಿಲ್ಲ. ಹಾಗಾಗಿ ನೀರು ಚರಂಡಿಯಲ್ಲಿಯೇ ತುಂಬಿ ತುಳುಕಿ ರಸ್ತೆಯ ಎರಡೂ ಬದಿಗಳಲ್ಲಿರುವ ಮನೆಗಳ ಆವರಣಕ್ಕೆ ನುಗ್ಗುತ್ತಿದೆ. ಇದರಿಂದಾಗಿ ರಸ್ತೆ ಬದಿಯ ತಾಜ್ಯ, ಕಲ್ಲು, ಮಣ್ಣು ಇತ್ಯಾದಿ ಮನೆಗಳ ಆವರಣದಲ್ಲಿ ಸೇರುತ್ತಿವೆ.
ಹೊಯಿಗೆ ಬಜಾರ್ ರೈಲ್ವೇ ಕ್ರಾಸಿಂಗ್ ಬಳಿ ಟೈಲ್ಸ್ ಸಂಸ್ಥೆಯ ಸಮೀಪ ರಸ್ತೆಯ ಚರಂಡಿಯ ಮೇಲೆ ಹಾಸಿದ್ದ ಚಪ್ಪಡಿ ಕಲ್ಲುಗಳನ್ನು ಅಲ್ಲಲ್ಲಿ ಮೇಲೆಕ್ಕೆತ್ತಿ ಇರಿಸಲಾಗಿದ್ದು, ಇಲ್ಲಿ ಚರಂಡಿ ಪೂರ್ತಿ ನೀರು ತುಂಬಿ ನಿಲ್ಲುತ್ತದೆ. ಚರಂಡಿಯ ಎರಡೂ ತುದಿಗಳಲ್ಲಿ ನೀರು ಮುಂದಕ್ಕೆ ಹರಿಯಲು ಸಂಪರ್ಕ ಕಲ್ಪಿಸಿಲ್ಲ. ಇದು ಸಮಸ್ಯೆಯ ಮೂಲ.
“ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ಆರಂಭಿಸುವ ಸಂದರ್ಭ ಸೂಕ್ತ ಚರಂಡಿ ವ್ಯವಸ್ಥೆ ಮಾಡಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡಬೇಕೆಂದು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ಮಾತ್ರವಲ್ಲದೇ ಕಾರ್ಪೊರೇಟರ್, ಶಾಸಕರ ಸಹಿತ ಜನಪ್ರತಿನಿಧಿಗಳ ಗಮನಕ್ಕೂ ತರಲಾಗಿದೆ. ಈ ತನಕ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಧಾರಾಕಾರ ಮಳೆ ಬಂದಾಗ ಚರಂಡಿ ನೀರು ಮನೆ ಆವರಣಕ್ಕೆ ಹರಿದು ಬರುತ್ತದೆ. ಮನೆಯಿಂದ ಹೊರಗೆ ಕಾಲಿಡದ ಪರಿಸ್ಥಿತಿ ಇದೆ’ ಎಂದು ಸ್ಥಳೀಯ ನಿವಾಸಿ ಯೊಬ್ಬರು ಉದಯವಾಣಿಗೆ ತಿಳಿಸಿದ್ದಾರೆ.
ಕೋವಿಡ್ ದಿಂದಾಗಿ ಕಾಮಗಾರಿ ವಿಳಂಬ
ಇಲ್ಲಿ ಹಳೆಯ ಚರಂಡಿ ವ್ಯವಸ್ಥೆ ಇದ್ದು, ರಸ್ತೆಗೆ ಕಾಂಕ್ರೀಟ್ ಆಗಿದ್ದರೂ ಚರಂಡಿ ವ್ಯವಸ್ಥೆ ಇನ್ನೂ ಸಮರ್ಪಕವಾಗಿ ಆಗಿಲ್ಲ. ಕೋವಿಡ್ ಸಮಸ್ಯೆಯಿಂದಾಗಿ ಕಾಮಗಾರಿ ವಿಳಂಬವಾಗಿದೆ. ಇಲ್ಲಿನ ಚರಂಡಿಯ ನೀರು ಹರಿದು ಹೋಗಲು ಸಮೀಪದ ಭಗತ್ ಸಿಂಗ್ ರಸ್ತೆಯ ಚರಂಡಿಗೆ ಸಂಪರ್ಕ ಕಲ್ಪಿಸಿದರೆ ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿಯಬಹುದು.
-ಅಬ್ದುಲ್ ಲತೀಫ್,
ಸ್ಥಳೀಯ ಕಾರ್ಪೊರೇಟರ್