ಬಾಗಲಕೋಟೆ: ಇಲ್ಲಿನ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ ಜನಜಂಗುಳಿಯೇ ಏರ್ಪಟ್ಟಿದೆ. ಕೋವಿಡ್ ಭೀತಿಯ ಮಧ್ಯೆಯೂ ಜನರು ಸಾಮಾಜಿಕ ಅಂತರ ಮರೆತು, ಮಾಸ್ಕ್ ಇಲ್ಲದೇ ತಮ್ಮ ಕೆಲಸಕ್ಕಾಗಿ ಕಚೇರಿಗೆ ಧಾವಿಸುತ್ತಿದ್ದಾರೆ.
ಹೌದು, ನವನಗರದ ಆರ್‌ಟಿಒ ಕಚೇರಿಯಲ್ಲಿ ಸೋಮವಾರ ಜನಜಾತ್ರೆಯೇ ಕಂಡುಬಂತು. ಬಾಗಲಕೋಟೆ, ಬಾದಾಮಿ ಹಾಗೂ ಹುನಗುಂದ, ಇಳಕಲ್ಲ ತಾಲೂಕು ವ್ಯಾಪ್ತಿಯ ಜನರು, ಕಚೇರಿಗೆ ಧಾವಿಸಿ, ತಮ್ಮ ವಾಹನ-ಕೆಲಸ ಕಾರ್ಯಗಳಿಗಾಗಿ ದುಂಬಾಲು ಬಿದ್ದಿದ್ದರು.
ಮರೆತ ಸಾಮಾಜಿಕ ಅಂತರ: ಆರ್‌ಟಿಒ ಕಚೇರಿಯಲ್ಲಿ ಸಾಮಾಜಿಕ ಅಂತರ ಎಂಬುದೇ ಮರೆತು ಹೋಗಿದೆ. ಎಲ್‌ಎಲ್‌ಆರ್, ಡಿಎಲ್, ವಾಹನ ಪಾಸಿಂಗ್ ರಿನಿವಲ್, ಹೊಸ ವಾಹನ ನೋಂದಣಿ ಹೀಗೆ ವಿವಿಧ ಕೆಲಸಕ್ಕಾಗಿ ಜನರು ಬರುತ್ತಿದ್ದು, ಸರತಿ ಸಾಲಿನಲ್ಲಿ ನಿಲ್ಲುವ ಜನರು ಸಾಮಾಜಿಕ ಅಂತರ ಮೆರೆತಿದ್ದರು. ಇನ್ನೂ ಕೆಲವರು ಮಾಸ್ಕ್ ಕೂಡ ಧರಿಸದೇ ಸಾಲಿನಲ್ಲಿ ನಿಂತಿದ್ದರೆ, ಕೆಲವರು ಕರವಸ್ತ್ರವನ್ನೇ ಮಾಸ್ಕ್ ಅನ್ನಾಗಿ ಮಾಡಿಕೊಂಡಿದ್ದರು.
ಆರ್‌ಟಿಒ ಕಚೇರಿಯಲ್ಲಿನ ಈ ಜನಜಂಗುಳಿ ಕಂಡು, ಹಲವರು ಮರಳಿ ಮನೆಗೆ ಹೋಗುತ್ತಿರುವುದು ಕಂಡು ಬಂತು. ಮೊದಲೇ ಎಲ್ಲೆಡೆ ಕೋವಿಡ್ ಹಬ್ಬುತ್ತಿದೆ. ಆರ್‌ಟಿಒ ಕಚೇರಿಯಲ್ಲಿ ಯಾರೂ ಸಾಮಾಜಿಕ ಅಂತರ ಕಾಯ್ದುಕೊಂಡು, ಸಾವಧಾನದಿಂದ ವರ್ತಿಸುತ್ತಿಲ್ಲ. ಜನಜಂಗುಳಿ ಕಂಡು, ಕಚೇರಿಯ ಸಿಬ್ಬಂದಿಗೂ ಭೀತಿ ಶುರುವಾಗಿದೆ. ದೂರ ದೂರ ನಿಲ್ಲಿ ಎಂದು ಎಷ್ಟೇ ಸೂಚಿಸಿದರೂ ಯಾರೂ ಕೇಳುತ್ತಿಲ್ಲ. ಇನ್ನು ಇಡೀ ಕಚೇರಿಯ ಮುಖ್ಯಸ್ಥರಾಗಿರುವ ಆರ್‌ಟಿಒ ಕೂಡ, ಇದನ್ನು ನಿಯಂತ್ರಿಸಲು ಪ್ರಯಾಸವೇ ಪಡುತ್ತಿದ್ದಾರೆ ಎನ್ನಲಾಗಿದೆ.
ನೇರವಾಗಿ ಕಚೇರಿಗೆ ಬಂದರೆ ಕೆಲಸಗಳು ನಿಧಾನವಾಗುತ್ತವೆ ಎಂಬ ಕಾರಣಕ್ಕೆ, ಜನರೂ ಏಜೆಂಟರ ಮೂಲಕವೇ ತಮ್ಮ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ಆದರೂ, ಆರ್‌ಟಿಒ ಕಚೇರಿಯಲ್ಲಿ ಮೊದಲಿನ ಪರಿಸ್ಥಿತಿ ಸಧ್ಯಕ್ಕಿಲ್ಲ. ಕೊಂಚ ಸುಧಾರಣೆಯಾಗಿದೆ ಎಂದು ಕೆಲವರು ಹೇಳುತ್ತಾರೆ. ಕಳೆದ ಮೂರು ತಿಂಗಳಿಂದ ಕಚೇರಿಯ ಎಲ್ಲ ಲಾಕಿಂಗ್ ಸಿಸ್ಟಮ್ ಬಂದ್ ಇದ್ದವು. ಈಗ ಓಪನ್ ಆಗಿದ್ದು, ವಾಹನ ಚಾಲನಾ ಪರವಾನಗಿ, ರಿನಿವಲ್‌ಗಾಗಿ ಜನರು ಮುಗಿಬಿದ್ದಿದ್ದಾರೆ. ಜನರೂ, ಸಹಕಾರ ನೀಡಿ, ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬುದು ಪ್ರಜ್ಞಾವಂತರ ಒತ್ತಾಯ.
ಏಜೆಂಟರ ಹಾವಳಿಯೂ ಜೋರು : ಆರ್‌ಟಿಒ ಕಚೇರಿಯಲ್ಲಿ ಏಜೆಂಟರ ಹಾವಳಿಯೂ ಜೋರಾಗಿದೆ. ಜನರು ನೇರವಾಗಿ ಕಚೇರಿಗೆ ಬಂದು ತಮ್ಮ ಕೆಲಸ ಮಾಡಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿ ಇದೆ. ಕಚೇರಿಯ ಸಿಬ್ಬಂದಿಗಿಂತ, ಏಜಂಟರೇ ಎಲ್ಲ ವಿಭಾಗದಲ್ಲಿ ತಿರುಗಾಡಿ, ಕೆಲಸ ಮಾಡುತ್ತಾರೆ. ಏಜಂಟ್‌ರೆಂದರೆ ಅಧಿಕಾರಿಗಳೂ ಅತಿಬೇಗ ಕೆಲಸ ಮಾಡುತ್ತಾರೆ ಎಂಬ ಆರೋಪವಿದೆ.
ಕಳೆದ ಎರಡೂವರೆ ತಿಂಗಳಿಂದ ವಾಹನ ಚಾಲನೆ ಪರವಾನಿಗೆ, ರಿನಿವಲ್, ಪಾಸಿಂಗ್ ಎಲ್ಲವೂ ಸ್ಥಗಿತಗೊಂಡಿದ್ದವು. ಈಗ ಓಪನ್ ಆಗಿದ್ದು, ಜನರು ಒಮ್ಮೆಲೇ ಕಚೇರಿಗೆ ಬಂದಿದ್ದಾರೆ. ಕಚೇರಿಯಲ್ಲಿ ಸ್ಯಾನಿಟೈಜೇಶನ್ ಮಾಡಿದ್ದು, ಜನರು ಸರತಿ ಸಾಲಿನಲ್ಲಿ ನಿಲ್ಲಲು ಮಾರ್ಕಿಂಗ್ ಕೂಡ ಮಾಡಿದ್ದೇವೆ. ಕೆಲವರು ಧಾವಂತದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಕಂಡು ಬಂದಿದೆ. ಅದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು. ಜನರು ಸ್ವಯಂ ಪ್ರೇರಣೆಯಿಂದ ಕೋವಿಡ್ ಕುರಿತು ಜಾಗೃತಿ ವಹಿಸಬೇಕು.
ಯಲ್ಲಪ್ಪ ಪಡಸಾಲಿ, ಪ್ರಾದೇಶಿಕ ಸಾರಿಗೆ ಅಧಿಕಾರಿ
-ವಿಶೇಷ ವರದಿ