ತಿ.ನರಸೀಪುರ: ಆಧುನೀಕರಣ, ಜಾಗತೀಕರಣದ ಪ್ರಭಾವದಿಂದಾಗಿ ಗ್ರಾಮೀಣ ಕ್ರೀಡಾಕೂಟಗಳು ನಶಿಸಿ ಹೊಗುತ್ತಿವೆ. ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆ ಸೇರಿದಂತೆ ಗ್ರಾಮೀಣ ಕ್ರೀಡಾಕೂಟಗಳ ಬೆಳವಣಿಗೆಗೆ ನಿಗಮ ಸ್ಥಾಪನೆ ಮಾಡುವ ಸಂಬಂಧ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಸಿಎಂ ಯಡಿಯೂರಪ್ಪ ಪುತ್ರ, ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೇ.ವಿಜಯೇಂದ್ರ ಹೇಳಿದರು.
ಪಟ್ಟಣದ ಹೊರವಲಯ ಸಾರ್ವಜನಿಕ ಆಸ್ಪತ್ರೆ-ತಾಯೂರು ಮುಖ್ಯ ರಸ್ತೆಯಲ್ಲಿ ಭಾನುವಾರ ಶ್ರೀ ಚೌಡೇಶ್ವರಿ ಅಮ್ಮನವರ ಯುವಕರ ಸ್ನೇಹ ಬಳಗದಿಂದ ಹಮ್ಮಿಕೊಂಡಿದ್ದ ಮೂರನೇ ವರ್ಷದ ರಾಜ್ಯ ಮಟ್ಟದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಆಯೋಜನೆಗೆ ಮೆಚ್ಚುಗೆ: ಗ್ರಾಮೀಣ ಕ್ರೀಡೆಗಳ ಉಳಿವಿಗೆ ಹಾಗೂ ಬೆಳವಣಿಗೆಗೆ ನಿಗಮವೊಂದು ಸ್ಥಾಪನೆಯಾಗಬೇಕು. ರೈತನ ಒಡನಾಡಿಯಾಗಿ ವರ್ಷವೀಡಿ ದುಡಿಯುವ ಜಾನುವಾರುಗಳಿಗೂ ಕೂಡ ಮನೋಲ್ಲಾಸಕ್ಕಾಗಿ ಒಂದು ದಿನವಾದರೂ ಜಾನುವಾರು ಕ್ರೀಡಾಕೂಟಗಳು ನಡೆಯಬೇಕು. ಆಧುನಿಕತೆ ಜಗತ್ತಿನಲ್ಲಿ ಎಲ್ಲವೂ ಯಾಂತ್ರೀಕೃತ ಆಗುತ್ತಿರುವ ಸಂದರ್ಭದಲ್ಲಿ ಅದೇಷ್ಟೋ ಗ್ರಾಮೀಣ ಕ್ರೀಡಾಕೂಟಗಳು ಮರೆಯಾಗಿವೆ. ಈ ದೆಸೆಯಿಂದಲೇ ಆರ್. ಮಣಿಕಂಠರಾಜ್ ಗೌಡ ನೇತೃತ್ವದಲ್ಲಿ ಶ್ರೀ ಚೌಡೇಶ್ವರಿ ಅಮ್ಮನವರ ಯುವಕರ ಬಳಗದ ಯುವಕರು ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ಉತ್ತಮವಾಗಿ ಸಂಘಟಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶುಭ ಹಾರೈಸಿದ ಶಾಸಕ ಅಶ್ವಿನ್: ಶಾಸಕ ಎಂ.ಅಶ್ವಿನ್ ಕುಮಾರ್ ಮಾತನಾಡಿ, ಮೊದಲೆರಡು ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ಆಯೋಜಿಸಿದ್ದ ಸಂದರ್ಭದಲ್ಲಿ ಮಣಿಕಂಠರಾಜ್ ಗೌಡ ಹಾಗೂ ಅವರು ಸ್ನೇಹಿತರ ತಂಡಕ್ಕೆ ಹಿನ್ನಡೆಯಾಗಿದ್ದಾಗ ನಿಮ್ಮ ಶ್ರಮಕ್ಕೆ ಮುಂದೊಂದು ದಿನ ಒಳ್ಳೆಯದು ಆಗುತ್ತೇ ಅಂತ ಹೇಳಿದ್ದಕ್ಕೆ ಈಗಿನ ಯಶಸ್ಸು ಸಾಕ್ಷಿಯಾಗಿದೆ. ಮುಂದೆಯೂ ಕೂಡ ಮತ್ತಷ್ಟು ಮೆರಗು ನೀಡುವಂತಹ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ಆಯೋಜಿಸುವಂತಾಗಲಿ ಎಂದು ಶುಭ ಹಾರೈಸಿದರು.
ಶ್ರೀ ಚೌಡೇಶ್ವರಿ ಅಮ್ಮನವರ ಸ್ನೇಹ ಬಳಗದ ಅಧ್ಯಕ್ಷ ಆರ್. ಮಣಿಕಂಠರಾಜ್ ಗೌಡ ಮಾತನಾಡಿ, ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆಯ ಹಿನ್ನಲೆ ಹಾಗೂ ಹಿನ್ನಡೆ ಮಾಹಿತಿ ತೆರೆದಿಟ್ಟರು. ರಾಜ್ಯ ಬಿಜೆಪಿ ಕಾರ್ಯದರ್ಶಿ ಎಂ.ರಾಜೇಂದ್ರ, ಸಹ ವಕ್ತಾರ ಕೌಟಿಲ್ಯ ಆರ್. ರಘು, ಜಿಲ್ಲಾ ಉಪಾಧ್ಯಕ್ಷ ಎಸ್.ಸಿ. ಅಶೋಕ, ಜಿಪಂ ಸದಸ್ಯ ಸದಾನಂದ, ವಿನೋದ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕರೋಹಟ್ಟಿ ಮಹದೇವಯ್ಯ,
ಕ್ಷೇತ್ರಾಧ್ಯಕ್ಷರಾದ ಕೆ.ಬಿ.ವಿಜಯಕುಮಾರ್, ಕೆ.ಸಿ.ಲೋಕೇಶ್, ಮಾಜಿ ಅಧ್ಯಕ್ಷ ಎ.ಎನ್. ಶಿವಯ್ಯ, ಪುರಸಭೆ ಸದಸ್ಯ ಎಸ್.ಕೆ. ಕಿರಣ, ಉಪನ್ಯಾಸಕ ಕುಮಾರಸ್ವಾಮಿ, ಮುಖಂಡರಾದ ಬಾಗಳಿ ಡಿ.ಯೋಗೇಶ, ಮಲ್ಲಪ್ಪ, ಬಿ.ವೀರಭದ್ರಪ್ಪ, ಕೆ.ಗಣೇಶ, ಬಿ.ಮಹೇಶ, ಮೋಹನ, ಎಂ.ಮಿಥುನ್, ಡಣಾಯಕನಪುರ ರಾಜಶೇಖರ, ಚೇತನ, ಕುಪ್ಪೇಗಾಲ ಶಿವಬಸಪ್ಪ ಹಾಗೂ ಇನ್ನಿತರರು ಹಾಜರಿದ್ದರು.
ರಾಜಕೀಯ ಶಕ್ತಿ ನೀಡಿದ್ದೇ ವರುಣ ಜನರು: ರಾಜ್ಯ ವಿಧಾನಸಭೆ ಉಪ ಚುನಾವಣೆಯಲ್ಲಿ ಕೆ.ಆರ್. ಪೇಟೆಯಂತಹ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಲಿಕ್ಕೆ ರಾಜಕೀಯ ಶಕ್ತಿಯನ್ನು ನೀಡಿದ ಕೀರ್ತಿ ವರುಣ ವಿಧಾನಸಭೆ ಜನರಿಗೆ ಸಲ್ಲಬೇಕು. ಕ್ಷೇತ್ರದಲ್ಲಿ ಸ್ಪರ್ಧಿಸದಿದ್ದರೂ ರಾಜಕೀಯವಾಗಿ ಗುರುತಿಸಿಕೊಳ್ಳಲಿಕ್ಕೆ ವರುಣ ಜನರೇ ಕಾರಣವಾಗಿದ್ದರಿಂದ ಇಲ್ಲಿನ ಜನರು ನಾನೆಂದೂ ಮರೆಯುವುದಿಲ್ಲ. ಮುಂದಿನ ಚುನಾವಣೆಯಲ್ಲಿ ವರುಣದಿಂದಲೇ ಸ್ಪರ್ಧಿಸುತ್ತೀರಾ ಅಂತ ಬಹುತೇಕ ಕಡೆಗಳಲ್ಲಿ ಕೇಳ್ತಾರೆಯಾದರೂ, ಜನರ ಆಶೀರ್ವಾದ ಇದ್ದರೇ ಖಂಡಿತವಾಗಿಯೂ ಸ್ಪರ್ಧೆಸುತ್ತೇನೆ ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಹೇಳಿದರು.