ಲೋಕಾಪುರ: ಇಂದಿನ ದಿನಮಾನಗಳಲ್ಲಿ ಟಿವಿ, ಮೊಬೈಲ್ ಹಾವಳಿಯಿಂದ ಪೌರಾಣಿಕ ನಾಟಕಗಳು ನಶಿಸುತ್ತಿವೆ. ಗ್ರಾಮೀಣ ಭಾಗದ ಪೌರಾಣಿಕ ನಾಟಕಗಳನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕೆಂದು ನಿವೃತ್ತ ಮುಖ್ಯ ಶಿಕ್ಷಕ ಎಲ್.ಜಿ. ಮಿರ್ಜಿ ಹೇಳಿದರು.
ಭಂಟನೂರ ಗ್ರಾಮದ ಪಾಂಡುರಂಗ ದೇವಸ್ಥಾನ ಆವರಣದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗಣ್ಣವರ ಪ್ರತಿಷ್ಠಾನ ಕಲಾ ಸಿರಿ ಸಂಸ್ಥೆ ಸಹಯೋಗದಲ್ಲಿ ಪೌರಾಣಿಕ ನಾಟಕ ಪ್ರದರ್ಶನ, ನಮ್ಮ ಹಿರಿಯರು ನಮ್ಮ ಕಲಾ ಪರಂಪರೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಲಾವಿದರಿಗೆ ಪ್ರೋತ್ಸಾಹ ನೀಡುವುದರ ಜತೆಗೆ ಸುಮಾರು ನಾಲ್ಕು ತಲೆಮಾರಿನಿಂದ ರಂಗಣ್ಣವರ ಕುಟುಂಬದವರು ಗ್ರಾಮೀಣ ಭಾಗದ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ನಿರಂತರ ಕಲಾ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಂದಿದ್ದಾರೆ. ಅವರ ಕಲಾ ಸೇವೆ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ನಿವೃತ್ತ ಮುಖ್ಯ ಶಿಕ್ಷಕ ವೈ.ಎ. ಬರಗಿ ಮಾತನಾಡಿ, ಸಮಾಜಕ್ಕೆ ಕಲಾವಿದರು ಸಲ್ಲಿಸಿರುವ ಸೇವೆ ಅಪಾರವಾದದ್ದು. ಪೌರಾಣಿಕ ನಾಟಕಗಳ ಪ್ರದರ್ಶನಗಳಿಂದ ಯುವಕರಿಗೆ ದೇಶದ ಸಾಂಸ್ಕೃತಿಕ ಶ್ರೀಮಂತಿಕೆ ತಿಳಿಸಿಕೊಡಲು ಸಹಕಾರಿಯಾಗುತ್ತದೆ. ನಾಡಿನ ಸಂಸ್ಕೃತಿ ಮತ್ತು ನಡೆ-ನುಡಿಯನ್ನು ಮರೆಯುತ್ತಿರುವ ಪ್ರಸ್ತುತ ದಿನಮಾನಗಳಲ್ಲಿ ರಂಗಣ್ಣವರ ಕುಟುಂಬದವರು ಗ್ರಾಮೀಣ ಭಾಗದಲ್ಲಿ ಪೌರಾಣಿಕ ನಾಟಕ ಪರಿಚಯಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಸಾಧಕರಿಗೆ ಸನ್ಮಾನ: ಸಮಾಜ ಸೇವಕ ಆನಂದಸೊನ್ನದ, ನಿವೃತ್ತ ಶಿಕ್ಷಕರಾದ ಎಲ್.ಬಿ. ಮಿರ್ಜಿ, ಎಲ್.ಕೆ. ಅಮಲಝರಿ, ಆರ್.ವೈ ಕೊಳ್ಳನ್ನವರ, ವೈ.ಎ. ಬರಗಿ, ಎಚ್.ವೈ. ಮಸಾಳೆ, ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ, ಕಲಾವಿದರಿಗೆ ಹಾಗೂ ಎಸ್‌ಎಸ್ ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ಪೌರಾಣಿಕ ನಾಟಕ ಪ್ರದರ್ಶನ: ಕಲಾವಿದರು ಪೌರಾಣಿಕ ನಾಟಕ ಪ್ರದರ್ಶನ ನೀಡಿ ಪ್ರೇಕ್ಷಕರನ್ನು ರಂಜಿಸಿ ಗಮನ ಸೆಳೆದರು. ಭಂಟನೂರ ಗ್ರಾಪಂ ಅಧ್ಯಕ್ಷ ಪ್ರಕಾಶ ಚಿತ್ತರಗಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯರಾದ ಪ್ರಕಾಶ ಸಿಂಗರಡ್ಡಿ, ಪಾಂಡಪ್ಪಬಿದರಿ, ಭರಮಪ್ಪ ಹಿರಕನ್ನವರ, ಮುಖಂಡರಾದ ಬಸಲಿಂಗಪ್ಪ ಹಿರಕನ್ನವರ, ಕೆ.ಬಸುನಾಯಕ, ಯಲ್ಲಪ್ಪ ಬಸುನಾಯಕ, ಲಕ್ಷ್ಮಣ ಬಸುನಾಯಕ, ನಿಂಗಪ್ಪ ಕಲ್ಲಿ, ಲಕ್ಷ್ಮಣ ಮಾಲಗಿ, ಮಾರುತಿ ರಂಗಣ್ಣವರ, ಚಂದ್ರಕಾಂತ
ರಂಗಣ್ಣವರ, ಕೆ.ಪಿ. ಯಾದವಾಡ, ಸಂಸ್ಥೆ ಅಧ್ಯಕ್ಷೆ ಲಾವಣ್ಯ ರಂಗಣ್ಣವರ, ಕೃಷ್ಣಾ ರಂಗಣ್ಣವರ, ಕಲಾವಿದರು. ಗ್ರಾಮಸ್ಥರು ಇದ್ದರು.