Advertisement

ಗ್ರಾಮೀಣ ವೈದ್ಯ ಸೇವೆ ಕಡ್ಡಾಯ; ರಾಜ್ಯ ಸಂಪುಟ ಸಭೆಯಲ್ಲಿ ಹಸಿರು ನಿಶಾನೆ

10:28 AM Jun 08, 2017 | Team Udayavani |

ಬೆಂಗಳೂರು: ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್‌ ಪೂರ್ಣಗೊಳಿಸಿದ ಎಲ್ಲಾ ಅಭ್ಯರ್ಥಿಗಳು
ಗ್ರಾಮೀಣ ಸೇವೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಿ ಕೈಸುಟ್ಟುಕೊಂಡಿದ್ದ ರಾಜ್ಯ ಸರ್ಕಾರ ಇದೀಗ, ಸರ್ಕಾರಿ
ಕೋಟಾದಡಿ ವೈದ್ಯಕೀಯ ಕೋರ್ಸ್  ಪೂರ್ಣಗೊಳಿಸಿರುವ ರಾಜ್ಯದ ಅಭ್ಯರ್ಥಿಗಳಿಗೆ ಗ್ರಾಮೀಣ ಸೇವೆ
ಕಡ್ಡಾಯಗೊಳಿಸಲು ನಿರ್ಧರಿಸಿದೆ.

Advertisement

ಅದಕ್ಕಾಗಿ 2012ರಲ್ಲಿ ಕರ್ನಾಟಕ ವೈದ್ಯಕೀಯ ಕೋರ್ಸ್‌ ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವೆ ವಿಧೇಯಕಕ್ಕೆ ತಿದ್ದುಪಡಿ ತರಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಸರ್ಕಾರಿ ಕೋಟಾದಡಿ ಕೋರ್ಸ್‌ ಮುಗಿಸಿದ ರಾಜ್ಯದ ಅಭ್ಯರ್ಥಿ ಗಳು ಒಂದು ವರ್ಷ ಗ್ರಾಮೀಣ ಸೇವೆ ಪೂರ್ಣ ಗೊಳಿಸುವವರೆಗೂ ಅವರಿಗೆ ಬಿಡುಗಡೆ ಪತ್ರ ನೀಡದಿರಲು ಸಭೆಯಲ್ಲಿ ತೀರ್ಮಾನಿಸಿದೆ.

ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪದವಿ ಪಡೆದವರು ಸರ್ಕಾರಕ್ಕೆ ದಂಡ ಪಾವತಿಸಿ ಖಾಸಗಿಯಾಗಿ ಉದ್ಯೋಗಕ್ಕೆ
ಹೋಗಬಹುದು ಎಂಬ ನಿಯಮ ಹಿಂದೆ ಇತ್ತು. ಆದರೆ, ಸರ್ಕಾರದ ಎಲ್ಲಾ ನೆರವು ಪಡೆದರೂ ಅಭ್ಯರ್ಥಿಗಳು
ದಂಡ ಪಾವತಿಸಿ ಸರ್ಕಾರಿ ಉದ್ಯೋಗಕ್ಕೆ ಸೇರದಿರುವ ಕಾರಣ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಹೆಚ್ಚಾಗಿತ್ತು. ಇದನ್ನು ಬಗೆಹರಿಸಲು 2012ರಲ್ಲಿ ಕಾಯ್ದೆ ತಿದ್ದುಪಡಿ ಮಾಡಿದ್ದ ಸರ್ಕಾರ, ರಾಜ್ಯದಲ್ಲಿ ಎಂಬಿಬಿಎಸ್‌ ಪೂರ್ಣಗೊಳಿಸಿದ ಅಭ್ಯರ್ಥಿಗಳು ಗ್ರಾಮೀಣ ಸೇವೆ ಮಾಡುವುದನ್ನು ಕಡ್ಡಾಯಗೊಳಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಹೊರ ರಾಜ್ಯದ ವಿದ್ಯಾರ್ಥಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್‌ ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ಇದರಿಂದ ಎಚ್ಚೆತ್ತ ರಾಜ್ಯ ಸರ್ಕಾರ ಇದೀಗ 2012ರ ಕಾಯ್ದೆಗೆ ತಿದ್ದುಪಡಿ ಮಾಡಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಮಾತ್ರ ಸೇವೆ ಕಡ್ಡಾಯಗೊಳಿಸಲು ಮುಂದಾಗಿದೆ.

ಈ ಕಾಯ್ದೆ ಜಾರಿಗೆ ಬಂದರೆ ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ಕೊರತೆ ನೀಗಿದಂತಾಗುತ್ತದೆ ಎನ್ನುವುದು ಸರ್ಕಾರದ ಲೆಕ್ಕಾಚಾರ. ಈ ಕುರಿತು ಇದೇ ಅಧಿವೇಶನದಲ್ಲಿ ಕಾನೂನು ತಿದ್ದುಪಡಿ ತರಲು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ರಾಷ್ಟ್ರೀಯ ಆರೋಗ್ಯ ರಕ್ಷಣೆ ಅಡಿಯಲ್ಲಿ ಎಲ್ಲ ಆರೋಗ್ಯ ಯೋಜನೆಗಳನ್ನು ಒಂದೇ ಸೂರಿನಡಿ ತಂದು ಆರೋಗ್ಯ ಇಲಾಖೆಯ ಮೂಲಕ ಜಾರಿಗೊಳಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಂಪುಟ ಒಪ್ಪಿಗೆ ನೀಡಿದೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ 60- 40 ರ ಅನುಪಾತದಲ್ಲಿ ಅನುದಾನ ನೀಡುತ್ತಿವೆ.

ಕೇಂದ್ರ ಸರ್ಕಾರ 380 ಕೋಟಿ ರೂ. ಮತ್ತು ರಾಜ್ಯ ಸರ್ಕಾರ 250 ಕೋಟಿ ರೂ. ಒದಗಿಸುತ್ತಿದೆ. ಇದಲ್ಲದೇ ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಕರ್ನಾಟಕ ಪ್ರೈವೇಟ್‌ ಮೆಡಿಕಲ್‌ ಎಸ್ಟಾಬ್ಲಿಷ್‌ಮೆಂಟ್‌ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಿರುವ ಸಂಪುಟ ಸಭೆ, ಖಾಸಗಿ ಆಸ್ಪತ್ರೆಗಳಲ್ಲಿ ದೊರೆಯುವ ಸೇವೆಗೆ ದರ ನಿಗದಿ ಪಡಿಸಲು ಸರ್ಕಾರ  ದಿಂದಲೇ ಸಮಿತಿ ರಚಿಸಲು ಮುಂದಾಗಿದೆ. ಆ ಸಮಿತಿ ನಿಗದಿಪಡಿಸುವ ದರವನ್ನು ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಪಡೆ ಯ ಬೇಕು. ಈ ಬಗ್ಗೆ ಎಲ್ಲ ಆಸ್ಪತ್ರೆಗಳೂ ಕಡ್ಡಾಯವಾಗಿ ದರ ಪಟ್ಟಿಯನ್ನು ಪ್ರದರ್ಶನ 
ಗೊಳಿಸುವಂತೆ ಕಾನೂನು ತಿದ್ದುಪಡಿ ಮಾಡಲು ತೀರ್ಮಾ ನಿಸಿದ್ದು, ಇದೇ ಅಧಿವೇಶನದಲ್ಲಿ ವಿಧೇಯಕ ಮಂಡನೆ 
ಯಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next