Advertisement

ಯಾಂತ್ರೀಕೃತ ಬೀಜ ಬಿತ್ತನೆಗೆ ಮೊರೆ ಹೋದ ಗ್ರಾಮೀಣ ರೈತರು

06:15 AM May 31, 2018 | Team Udayavani |

ತೆಕ್ಕಟ್ಟೆ :  ಕರಾವಳಿಯ ಕೃಷಿಕರಿಗೆ ಎದುರಾದ ಕೃಷಿ ಕೂಲಿ ಕಾರ್ಮಿಕರ ಸಮಸ್ಯೆಯಿಂದಾಗಿ ಯಾಂತ್ರೀಕೃತ ಬೀಜ ಬಿತ್ತನೆ ಕಾರ್ಯಕ್ಕೆ ಮೊರೆಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಕೃಷಿ ಭೂಮಿಗಳಲ್ಲಿ ಯಂತ್ರಗಳ ಸದ್ದು ಜೋರಾಗಿದೆ.

Advertisement

ಮುಂಗಾರು ಮಳೆಯ ಆಗಮನದ ನಿರೀಕ್ಷೆಯಲ್ಲಿದ್ದ ರೈತರು ಕಳೆದ ಹಲವು ದಿನಗಳಿಂದಲೂ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಗದ್ದೆಗಳಿಗೆ ಗೊಬ್ಬರ ಹಾಕಿ ಹದಮಾಡಿದ್ದಾರೆ. ಕಳೆದ ಕೆಲ ದಿನಗಳಿಂದ ಸುರಿದ ಮಳೆ ಇದಕ್ಕೆ ಪೂರಕವಾಗಿದೆ. 
 
ಯಾಂತ್ರೀಕೃತ ಬೀಜ ಬಿತ್ತನೆ 
ರೈತರು ಈ ಹಿಂದೆ ಸಾಂಪ್ರದಾಯಿಕವಾಗಿ ಬೀಜ ಬಿತ್ತನೆ ಮಾಡಿ 20 ದಿನಗಳ ಅನಂತರ ನೇಜಿ ಕಾರ್ಯ ಮಾಡುತ್ತಿದ್ದರು. ಆದರೆ ಬದಲಾದ ಕಾಲಕ್ಕೆ ತಕ್ಕಂತೆ ರೈತರು ಮಾನವ ಶಕ್ತಿಯ ಬಳಕೆ ಕಡಿಮೆ ಮಾಡಿ ಯಾಂತ್ರಿಕೃತ ಬೀಜ ಬಿತ್ತನೆ ಮೊರೆ ಹೋಗಿದ್ದಾರೆ. ಇದರಿಂದ ಕೂಲಿ ಉಳಿತಾಯ ಮತ್ತು ಬೀಜ, ಗೊಬ್ಬರ ಮಿತ ಬಳಕೆಯಾಗುತ್ತದೆ.  

ಡಿಎಸ್‌ಆರ್‌ ಪ್ರಾತ್ಯಕ್ಷಿಕೆ
ಕೃಷಿ ಇಲಾಖೆ, ಇಕ್ರಿಸ್ಯಾಟ್‌ ಸಿಮ್ಮಿಟ್‌ ಸಹಯೋಗದೊಂದಿಗೆ ಭೂ ಸಮೃದ್ಧಿ ಯೋಜನೆ ಅಡಿಯಲ್ಲಿ  ಟ್ಯಾಕ್ಟರ್‌ ಡ್ರಮ್‌ ಸೀಡರ್‌ ಡಿಎಸ್‌ಆರ್‌ ಪ್ರಾತ್ಯಕ್ಷಿಕೆಗಳ ಮೂಲಕ ಬೀಜ ಬಿತ್ತನೆ ತೋರಿಸಿ ಕೊಡಲಾಗುತ್ತಿದೆ. ಇದು ರೈತರಿಗೆ ಹೊಸತನವನ್ನು  ಅಳವಡಿಸಿಕೊಳ್ಳಲು ಸಹಾಯಕವಾಗುತ್ತಿದೆ.

ಗಂಟೆಗೆ 1 ಎಕರೆ  ಬೀಜ ಬಿತ್ತನೆ
ಏಕ ಕಾಲದಲ್ಲಿ ಟ್ಯಾಕ್ಟರ್‌ಗೆ ಅಳವಡಿಸಿದ ಡ್ರಮ್‌ ಸೀಡರ್‌ ಮೂಲಕ ಒಟ್ಟು 9 ಕಿರಿದಾದ ನೇಗಿಲಗಳು ಉಳುತ್ತಾ ಸುಮಾರು 9 ಇಂಚು ಅಂತರದಲ್ಲಿ ಬೀಜ ಬಿತ್ತನೆಯಾಗುವುದು. ಒಟ್ಟಿನಲ್ಲಿ ಗಂಟೆಗೆ ಸುಮಾರು 1ಎಕರೆ ವಿಸ್ತಿರ್ಣದ ಕೃಷಿ ಭೂಮಿಗೆ ಬೀಜ ಬಿತ್ತನೆಗೆ ಸಮರ್ಪಕವಾಗಿ ಬೀಜ ಬಿತ್ತನೆ ಮಾಡುವ ಸಾಮರ್ಥ್ಯವನ್ನು ಈ ಯಂತ್ರ ಹೊಂದಿದೆ.

ಕಳೆ ನಿಯಂತ್ರಣ 
ಬೀಜ ಮೊಳಕೆ ಒಡೆದು ಸುಮಾರು 21 ದಿನಗಳಲ್ಲಿ ಸಸಿಯಾಗಿ ಬೆಳೆಯುವಾಗ ಕಳೆ ನಿಯಂತ್ರಣಕ್ಕಾಗಿ ರೌಂಡ್‌ ಅಪ್‌ ಹಾಗೂ ಪೆಂಡಿ ಲಿಕ್ವಿಡ್‌ಗಳನ್ನು ಸಿಂಪಡಿಸಿದಾಗ ಸಸಿ ಸಮೃದ್ಧವಾಗಿ ಬೆಳೆದು ಉತ್ತಮ ಫಸಲು ಕಂಡುಕೊಳ್ಳಲು ಸಾಧ್ಯ
– ಯೋಗೀಶ್‌ , ಕೃಷಿ ಇಲಾಖೆ

Advertisement

12 ಕೆ.ಜಿ. ಬಿತ್ತನೆ ಬೀಜ
ಈ ಹಿಂದೆ ಚಾಪೆ ನೇಜಿ ಮಾಡುವಾಗ ಒಂದು ಎಕರೆ ವಿಸ್ತೀರ್ಣದ ಕೃಷಿಭೂಮಿಗೆ ಸುಮಾರು 25 ಕೆ.ಜಿ. ಬೀಜ ಬಿತ್ತನೆಗೆ ಬೇಕಾಗುತ್ತಿತ್ತು. ಟ್ಯಾಕ್ಟರ್‌ ಡ್ರಮ್‌ ಸೀಡರ್‌ ಬಳಕೆ ಮಾಡುವುದರಿಂದ ಸುಮಾರು 12 ಕೆ.ಜಿ. ಬೀಜ ಬಿತ್ತನೆಗೆ ಬೇಕಾಗುತ್ತಿದೆ.  ಇದರಿಂದಾಗಿ ತುಂಬಾ ಉಳಿತಾಯವಾಗುತ್ತಿದೆ. ಕೃಷಿ ಇಲಾಖೆ ಉತ್ತಮ ನೆರವು ನೀಡಿದೆ.      
 
– ವೆಂಕಟೇಶ್‌ ವೈದ್ಯ ಕೊಮೆ , ಸಾವಯವ ಕೃಷಿಕರು.

– ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next