ಶಿವಮೊಗ್ಗ:ನಮ್ಮ ಮಾತು ಕೇಳಿದ್ರೇ..ಖರ್ಗೆ, ಮೊಯ್ಲಿ, ಇಬ್ರಾಹಿಂ, ರೇವಣ್ಣ, ಮೋಟಮ್ಮ ಯಾರಿಗೂ ಕೋವಿಡ್ ಬರುತ್ತಿರಲಿಲ್ಲ ಎಂದು ಕಾಂಗ್ರೆಸ್ ನಾಯಕರು ಪಾದಯಾತ್ರೆ ಮೊಟುಕುಗೊಳಿಸಿದ ಬಳಿಕ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಜಾಣನಿಗೆ ಮಾತಿನ ಪೆಟ್ಟು. ದಡ್ಡನಿಗೆ ದೊಣ್ಣೆ ಪೆಟ್ಟು ಅಂತಾ ಹಿರಿಯರು ಹೇಳಿದ್ದಾರೆ.ನಾವು ಮುಂಚೆಯಿಂದವೂ ಹೇಳಿಕೊಂಡೇ ಬಂದೆವು ಪಾದಯಾತ್ರೆ ಬೇಡ ಎಂದು, ನಮ್ಮ ಮಾತು ಕೇಳಿದ್ದರೆ ಖರ್ಗೆ, ಮೊಯ್ಲಿ, ಇಬ್ರಾಹಿಂ, ರೇವಣ್ಣ, ಮೋಟಮ್ಮ ಯಾರಿಗೂ ಕೋವಿಡ್ ಬರುತ್ತಿರಲಿಲ್ಲ ಎಂದರು.
ಹೀಗೆ ಕಾಂಗ್ರೆಸ್ ನಾಯಕರ ಪಟ್ಟಿಯನ್ನು ಕೊಡಬಹುದು.ಅಷ್ಟು ಜನ ಇವತ್ತು ಕೋವಿಡ್ ಗೆ ತುತ್ತಾಗಿದ್ದಾರೆ. ಅದಕ್ಕೆ ಕಾರಣ ಪಾದಯಾತ್ರೆ. ಇದರ ಜೊತೆಗೆ ರಾಜ್ಯದ ಬೇರೆ ಭಾಗದಿಂದ ಬಂದು, ಹೋಗಿದ್ದಾರೆ.ಇವರ ರಾಜಕಾರಣದ ಬೇಳೆ ಬೇಯಿಸಿಕೊಳ್ಳಲು, ತಾವು ತೊಂದರೆ ಅನುಭವಿಸಿ, ರಾಜ್ಯಕ್ಕೂ ತೊಂದರೆ ಕೊಟ್ಟರು.ಇಂತಹ ವ್ಯವಸ್ಥೆ ಇರೋದು ಕಾಂಗ್ರೆಸ್ ನಲ್ಲಿ ಮಾತ್ರ. ಜನರ ಹಿತಕ್ಕಾಗಿ ವಾಪಾಸ್ ತೆಗೆದುಕೊಂಡೆವು ಅಂತಾ ಈಗ ಹೇಳುತ್ತಿದ್ದಾರೆ.ಹಾಗಾದರೆ ಆರಂಭದಲ್ಲಿ ಜನರ ಹಿತ ಗೊತ್ತಿರಲಿಲ್ವಾ..? ಕೋರ್ಟ್ ಹೇಳ್ಬೇಕಾಯ್ತಾ..ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನ ನಾಯಕರು ತೊಂದರೆ ಅನುಭವಿಸುತ್ತಿರುವುದಕ್ಕೆ ನಮಗಂತೂ ಖಂಡಿತಾ ಸಂತೋಷ ಇಲ್ಲ.ನಮ್ಮ ಮಾತು ಕೇಳಿದರೆ ಅವರಿಗೆ ಹಾಗೂ ರಾಜ್ಯದ ಜನರಿಗೂ ಒಳ್ಳೆಯದಾಗುತ್ತಿತ್ತು.ತಾತ್ಕಾಲಿಕ ತಡೆ ಮಾಡಿ, ಇನ್ಮುಂದೆ ರಾಜಕಾರಣ ಮಾಡಿ.ಕೋವಿಡ್ ಹೋದ ಮೇಲೆ ಎಷ್ಟಾದರೂ ರಾಜಕಾರಣ ಮಾಡಿ. ನಮಗೂ ರಾಜಕಾರಣ ಮಾಡಲು ಬರುತ್ತದೆ. ರಾಜಕಾರಣ ಮಾಡಿಯೇ ನಾವು ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ಹಿಡಿದಿರುವುದು . ಜನ ಸಂಕಷ್ಟದಲ್ಲಿ ಒದ್ದಾಡುವ ಸಂದರ್ಭದಲ್ಲಿ ಸರ್ಕಾರಕ್ಕೆ ವಿಪಕ್ಷ ಸಲಹೆ, ಸಹಕಾರ ಕೊಡಬೇಕು ಎಂದರು.
ಈ ರೀತಿ ಕೆಟ್ಟ ರಾಜಕಾರಣದ ಕಾರಣದಿಂದ ನೀವು ಕೇಂದ್ರ ಹಾಗೂ ರಾಜ್ಯವನ್ನು ಕಳೆದುಕೊಂಡಿರಿ. ರಾಜ್ಯದ ಜನರ ಕ್ಷಮೆಯನ್ನು ನೀವು ಕೇಳಬೇಕು.ಪಾಪ ಸಿದ್ದರಾಮಯ್ಯ ಮೊದಲ ದಿನ ಬಂದು, ವಾಪಾಸ್ ಹೋದರು. ಎರಡನೇ ದಿನ ಡಿಕೆ ಶಿವಕುಮಾರ್ ಒಬ್ಬರೇ ಹೀರೋ ತರಹ ಹೋದರು ಅದನ್ನು ಸಿದ್ದರಾಮಯ್ಯ ಟಿವಿಯಲ್ಲಿ ನೋಡಿ, ಬಿಟ್ರೇ ಸಿಎಂ ಸ್ಥಾನಕ್ಕೆ ಮುನ್ನುಗ್ಗುತ್ತಾನೆ ಎಂದು ಮತ್ತೆ ಬಂದರು ಎಂದು ಲೇವಡಿ ಮಾಡಿದರು.
ರಾಜಕಾರಣಕ್ಕಾಗಿ ಮಾಡಿದ ಪಾದಯಾತ್ರೆ ಇದು. ನೀವು ಬರೆದಿಟ್ಟುಕೊಳ್ಳಿ.ಆಣೆ ಮಾಡುತ್ತೇನೆ ರಾಜ್ಯದಲ್ಲಿ ನಿಮ್ಮ ಸರ್ಕಾರ ಬರುವುದಿಲ್ಲ. ನೀವ್ಯಾರು ಸಿಎಂ ಅಗುವುದಿಲ್ಲ. ಮತ್ತೆ ಬಿಜೆಪಿ ಬರುತ್ತದೆ. ಬಿಜೆಪಿಯವರೇ ಸಿಎಂ ಆಗುತ್ತಾರೆ ಎಂದರು.