Advertisement

ಗ್ರಾಮೀಣಾಭಿವೃದ್ಧಿಯೇ ಮುಖ್ಯ ಗುರಿ: ಸಿಆರ್‌ಎಸ್‌

03:18 PM Aug 26, 2017 | Team Udayavani |

ಮದ್ದೂರು: ಶಾಸಕನಾದ ಅವಧಿಯಲ್ಲಿ ಕೊಪ್ಪಹೋಬಳಿ ಕೌಡ್ಲೆ ಭಾಗದ ಹಳ್ಳಿಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ ಎಂದು ಶಾಸಕ ಚೆಲುವರಾಯಸ್ವಾಮಿ ಹೇಳಿದರು. ತಾಲೂಕಿನ ಕೊಪ್ಪಹೋಬಳಿಯ ಕೌಡ್ಲೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ, ಶಾಸಕರು ಮತ್ತು ಜಿಲ್ಲಾ ಪಂಚಾಯಿತಿ ಅನುದಾನದಡಿ 12 ಲಕ್ಷ ರೂ. ವೆಚ್ಚದಲ್ಲಿ ಕೆ.ಎಂ.ಚನ್ನಪ್ಪಸ್ಮರಣಾರ್ಥ ನಿರ್ಮಿಸಿರುವ ಸಾರ್ವಜನಿಕ ಸಮುದಾಯ ಶೌಚಾಲಯ ಹಾಗೂ 9.80 ಲಕ್ಷ ರೂ. ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ರಸ್ತೆ ಅಭಿವೃದ್ಧಿ: ನಾಗಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಕೊಪ್ಪ ಹೋಬಳಿ 8 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಬಿದರಕೋಟೆ- ಕೆರಗೋಡು ಸಂಪರ್ಕ ಕಲ್ಪಿಸುವ ರಸ್ತೆ, ಮರಳಿಗ-ಕೀಳಘಟ್ಟ, ತಗ್ಗಹಳ್ಳಿ-ಅಣೆಹಳ್ಳಿ ಹಾಗೂ ಕೆ.ಎಚ್‌.ಕೊಪ್ಪಲು ಭಾಗದ 70 ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿದರು. ಆದ್ಯತೆ ಮೇರೆಗೆ ಕೆಲಸ ಪೂರ್ಣ: ಹೋಬಳಿಯ ನೀರಾವರಿ ಯೋಜನೆಗಳ ಆಧುನೀಕರಣಕ್ಕೆ 150 ಕೋಟಿ ರೂ. ವೆಚ್ಚ ಮಾಡಲಾಗಿದೆ. ಉಳಿದ 130 ಕೋಟಿ ರೂ. ಕಾಮಗಾರಿಗಳಿಗೆ ಅಂದಾಜುಪಟ್ಟಿ ತಯಾರಿಸಿದ್ದು, ಸರ್ಕಾರ ಅಂತಿಮವಾಗಿ ಅನುಮೋದನೆ ನೀಡಲಿದೆ. ಈ ಯೋಜನೆಯಿಂದ ಕೆಆರ್‌ಎಸ್‌ ಅಚ್ಚುಕಟ್ಟು ವ್ಯಾಪ್ತಿಗೆ ಬರುವ ಕೊಪ್ಪಹೋಬಳಿಯ ಕೊನೆಯ ಭಾಗದ ಕಾಲುವೆಗಳ ಕಾಮಗಾರಿ ಪೂರ್ಣಗೊಂಡು ನೀರಿನ ಸೌಲಭ್ಯ ದೊರೆಯಲಿದೆ. ಜನರಿಗೆ ಅನುಕೂಲವಾಗುವ ಕೆಲಸಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸುವ ಭರವಸೆ ನೀಡಿದರು.
ಅಭಿವೃದ್ಧಿಗೆ ಸಹಕರಿಸಿ: ಕೊಪ್ಪನೂತನ ಬಸ್‌ ನಿಲ್ದಾಣ ಕಾಮಗಾರಿಗೆ ತಮ್ಮ ಅಧಿಕಾರವಧಿಯಲ್ಲಿ ಚಾಲನೆ ಕೊಟ್ಟಿದ್ದೆ. ಆದರೆ, ಕೆಲವರು ಇದಕ್ಕೆ ಅಡ್ಡಿಪಡಿಸಿ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿರುವುದರಿಂದ ಪ್ರಾರಂಭವಾಗಿಲ್ಲ. ಅಭಿವೃದ್ಧಿ ಕಾಮಗಾರಿಗಳಿಗೆ ಜನಪ್ರತಿನಿಧಿಗಳು ಆಸಕ್ತಿಯಿಂದ
ತೊಡಗಿಸಿಕೊಂಡಾಗ ಉಳಿದವರು ಅಡ್ಡಿಪಡಿಸದೆ ಸಹಕಾರ ನೀಡುವಂತೆ ಮನವಿ ಮಾಡಿದರು. ಜನಸಾಮಾನ್ಯರು ಸಾರ್ವಜನಿಕ ಶೌಚಾಲಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ವ್ಯವಸ್ಥೆ ಯಲ್ಲಿ ಆಗುವ ಬದಲಾವಣೆಗೆ ತಕ್ಕಂತೆ ಜನರಿಗೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲು ಕೇಂದ್ರ ಮತ್ತು ರಾಜ್ಯಸರ್ಕಾರಗಳು ತಮ್ಮ ಆದ್ಯಕರ್ತವ್ಯವೆಂದು ಬಾವಿಸಿ ಯೋಜನೆಗಳನ್ನು ರೂಪಿಸುತ್ತಿವೆ. ಸ್ವಾತಂತ್ರ್ಯ ಬಂದು 70 ವರ್ಷಗಳಾಗಿದ್ದರೂ ಬಹಳಷ್ಟು ಗ್ರಾಮಗಳಲ್ಲಿ ಕುಡಿಯುವ ನೀರು, ರಸ್ತೆ ಸೇರಿದಂತೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಉತ್ತರ ಕರ್ನಾಟಕ ಭಾಗಕ್ಕೆ ಹೋಲಿಸಿದರೆ ಹಳೇ ಮೈಸೂರು ಪ್ರಾಂತ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ಕೆ.ಎನ್‌.ಗಿರೀಶ್‌ ವಹಿಸಿದ್ದರು. ಜಿಪಂ ಸದಸ್ಯೆ ರೇಣುಕಾ, ತಾಪಂ ಅಧ್ಯಕ್ಷೆ ಜಯಲಕ್ಷ್ಮಮ್ಮ, ಉಪಾಧ್ಯಕ್ಷ ಬಿ.ಎಂ.ರಘು, ನಿವೃತ್ತ ಕೆಎಎಸ್‌ ಅಧಿಕಾರಿ ಸಿ.ಕೃಷ್ಣೇಗೌಡ, ಜಿಪಂ ಎಂಜಿನಿಯರಿಂಗ್‌ ವಿಭಾಗದ ಇಇ ಮರೀಗೌಡ, ಎಇ ಮಹದೇವು, ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮೀ, ಸದಸ್ಯರಾದ ಗೀತಾ, ಬಸವರಾಜು, ವಿಜಯಾ, ಸೊಸೈಟಿ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷೆ ಲಕ್ಷ್ಮಮ್ಮ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next