ರಬಕವಿ-ಬನಹಟ್ಟಿ: ಗ್ರಾಮೀಣ ಪ್ರದೇಶದ ಜನರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳಬೇಕು. ಶಿಕ್ಷಣದಿಂದ ಮಕ್ಕಳು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಶುಕ್ರವಾರ ತಾಲ್ಲೂಕಿನ ಜಗದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಸಂಸ್ಕೃತಿ ವಿಶೇಷವಾದುದು. ಆದ್ದರಿಂದ ಉತ್ತಮ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸಬೇಕು. ಗ್ರಾಮೀಣ ಮಕ್ಕಳು ವಿದ್ಯಾವಂತರಾದಾಗ ಮಾತ್ರ ಗಾಂಧೀಜಿ ಕಂಡ ಗ್ರಾಮ ಸ್ವರಾಜದ ಕನಸು ನನಸಾಗುತ್ತದೆ. ಪ್ರತಿಯೊಬ್ಬರು ಕಡ್ಡಾಯವಾಗಿ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಸಚಿವ ಈಶ್ವರಪ್ಪ ತಿಳಿಸಿದರು.
ತಮ್ಮದೇ ವಿದ್ಯಾರ್ಥಿ ದೆಸೆಯಲ್ಲಿನ ಚಿತ್ರಣ ಬಿಚ್ಚಿಟ್ಟ ಅವರು ತೀವೃ ಬಡತನದ ನಡುವೆಯೂ ನನ್ನ ತಾಯಿ ನನಗೆ ಶಿಕ್ಷಣ ಕೊಡಿಸುತ್ತಿದ್ದರು. ಮ್ಯಾಟ್ರಿಕ್ ಬಳಿಕ ನನ್ನ ತಾಯಿ ಪಡುತ್ತಿದ್ದ ಕಷ್ಟ ನೋಡದೇ ನಾನೇ ಅವಳ ಬಳಿ ತೆರಳಿ ನೀನು ದುಡಿಯುವುದು ಸಾಕು ಇನ್ನು ನಾನೇ ದುಡಿದು ನಿನ್ನ ಸಲಹುತ್ತೇನೆ ಎಂದಾಗ ನನ್ನ ತಾಯಿ ನನ್ನ ಕೆನ್ನೆಗೆ ಬಾರಿಸಿ ಎಷ್ಟೇ ಕಷ್ಟವಾದರೂ ಸರಿ. ನೀನು ಮಾತ್ರ ಪದವೀಧರನಾಗಲೇಬೆಕೆಂದು ತಾಕೀತು ಮಾಡಿದಳು. ನಾನು ಪದವೀಧರನಾದೆ ಬಳಿಕ ಶಾಸಕನಾದೆ ಆದರೆ ನನ್ನ ತಾಯಿ ನನ್ನಿಂದ ಅಗಲಿದ್ದಳು. ಆಕೆ ನನ್ನ ಕಲಿಕೆಗೆ ಒತ್ತಾಸೆಯಾಗಿದ್ದಕ್ಕೆ ನಾನು ಶಾಸಕನಾದೆ, ಹಲವು ಬಾರಿ ಸಚಿವನಾದೆ. ಜ್ಞಾನಾರ್ಜನೆಯೇ ಇಲ್ಲವಾದಲ್ಲಿ ನಾನು ನಿರಕ್ಷರಿಯಾಗುತ್ತಿದ್ದೆ. ನನ್ನ ಬದುಕನ್ನೇ ಜ್ವಲಂತವಾಗಿಟ್ಟುಕೊಂಡು ನೀವೆಲ್ಲ ವಿದ್ಯಾವಂತರಾಗಬೇಕು. ಪಾಲಕರು ತಮಗೆ ಎಷ್ಟೇ ಕಷ್ಟವಿದ್ದರೂ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಮರೆಯಬಾರದೆಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಶಾಸಕ ಸಿದ್ದು ಸವದಿ ಮಾತನಾಡಿ, ರೂ.೧. ೩೫ ಕೋಟಿ ವೆಚ್ಚದಲ್ಲಿ ಗ್ರಾಮದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ೧೪ ಕೋಣೆಗಳ ಬೃಹತ್ ಶಾಲೆಯನ್ನು ಕಟ್ಟಲಾಗಿದೆ. ಆದ್ದರಿಂದ ಗ್ರಾಮೀಣ ಪ್ರದೇಶದ ಮಕ್ಕಳು ಕೂಡಾ ಶಿಕ್ಷಣ ಪಡೆದುಕೊಂಡು ಉತ್ತಮ ಜೀವನ ನಿರ್ವಹಣೆ ಮಾಡಬೇಕು ಎಂದರು. ವೇದಮೂರ್ತಿ ಬಸಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ವೇದಿಕೆಯ ಮೇಲೆ ಜಿಪಂ ಸಹಾಯಕ ಇಓ ಅಮರೇಶ ನಾಯಕ, ತಹಶೀಲ್ದಾರ್ ಸಂಜಯ ಇಂಗಳೆ, ಧರೆಪ್ಪ ಉಳ್ಳಾಗಡ್ಡಿ, ಆನಂದ ಕಂಪು, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ. ನ್ಯಾಮಗೌಡ, ಶಿಕ್ಷಣಾಧಿಕಾರಿಗಳಾದ ವಿಜಯಕುಮಾರ ವಂದಾಲ, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಬಾಗೇನವರ, ರವೀಂದ್ರ ಸಂಪಗಾವಿ, ಶ್ರೀಶೈಲ ಬುರ್ಲಿ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಎಸ್.ಆರ್.ಬಂಡಿವಡ್ಡರ, ಬಿ.ಆರ್.ಬಿರಾದಾರ ಸೇರಿದಂತೆ ಅನೇಕರು ಇದ್ದರು.