ಕಲಬುರಗಿ: ಈಗಿನ ದಿನಮಾನಗಳಲ್ಲಿ ಪಟ್ಟಣಕ್ಕಿಂತ ಗ್ರಾಮೀಣ ಮಕ್ಕಳು ತುಂಬಾ ಗಟ್ಟಿ. ಅವರು ಎಲ್ಲ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಲಿಷ್ಠವಾಗಿ ಬೆಳೆಯುತ್ತಾರೆ. ಅದಕ್ಕೆ ತಾಯಂದಿರ ಆರೈಕೆಯೇ ಕಾರಣ ಎಂದು ಲೋಕಸಭೆ ಕಾಂಗ್ರೆಸ್ ಪಕ್ಷದ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಗರದ ಎಸ್.ಎಂ. ಪಂಡಿತ ರಂಗಮಂದಿರಲ್ಲಿ ಸೋಮವಾರ ನಡೆದ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಮಾತೃಪೂರ್ಣ ಯೋಜನೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿನ ತಾಯಂದಿರು ಮಕ್ಕಳಿಗೆ ಎದೆ ಹಾಲು ಕುಡಿಸುತ್ತಾರೆ. ಪಟ್ಟಣದವರು ಸೌಂದರ್ಯದ ಕಾರಣ ನೀಡಿ ಡಬ್ಬಿ ಹಾಲು ಕುಡಿಸುತ್ತಾರೆ. ಇದರಿಂದ ಮಕ್ಕಳು ದಷ್ಠಪುಷ್ಠವಾಗಿ ಬೆಳೆಯುವುದಿಲ್ಲ. ಇದರಿಂದಾಗಿ ಅಪೌಷ್ಟಿಕತೆ ಕಾಡುತ್ತಿದೆ. ಆದರೆ, ಈಗೀಗ ಆಹಾರದಲ್ಲಿ ಪೋಷಕಾಂಶಗಳ ಕೊರತೆಯಿಂದಾಗಿ ಗ್ರಾಮೀಣ ಭಾಗದಲ್ಲೂ ಮಕ್ಕಳು ಅಪೌಷ್ಟಿಕತೆಗೆ ತುತ್ತಾಗುತ್ತಿದ್ದಾರೆ.
ಹಾಗಾಗಿ ಮಾತೃಪೂರ್ಣ ಯೋಜನೆ ಮೂಲಕ ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕ ಮತ್ತು ಪ್ರೋಟೀನ್‌ಯುಕ್ತ ಊಟ ನೀಡಿ ಅವರ ಭಾವಿ ಭವಿಷ್ಯ ಉಜ್ವಲಗೊಳಿಸಲು ಸಿದ್ದರಾಮಯ್ಯ ಅವರ ಸರಕಾರ ಯೋಜಿಸಿದೆ. ಇದು ನಿಜಕ್ಕೂ ಉತ್ತಮವಾದ ಉದ್ದೇಶವಾಗಿದೆ. ಆದ್ದರಿಂದ ತಾಯಂದಿರು ಚೆನ್ನಾಗಿ ಊಟ ಮಾಡಿ ರಾಣಿ ಚನ್ನಮ್ಮ, ಒನಕೆ ಓಬವ್ವ, ಝಾನ್ಸಿರಾಣಿ ಲಕ್ಷಿ¾ಬಾಯಿ ಅಂತಹ ಮಕ್ಕಳನ್ನು ಹೆತ್ತು ನಾಡಿನ ಭವಿಷ್ಯ ಉಜ್ವಲಗೊಳಿಸಿ ಎಂದು ಕರೆ ನೀಡಿದರು.
ಹೊಸ ಯೋಜನೆ ಅಡಿ ಜಿಲ್ಲೆಯಲ್ಲಿ 61 ಸಾವಿರ ಗರ್ಭಿಣಿಯರನ್ನು ಗುರುತಿಸಲಾಗಿದೆ. ಅವರಿಗೆ ಸರಿಯಾಗಿ ಊಟ ನೀಡುವ ಹೊಣೆ ಅಧಿಕಾರಿಗಳದ್ದಾಗಿದೆ ಎಂದು ಹೇಳಿದರು. ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ
ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ಮಾತೃಪೂರ್ಣ ಯೋಜನೆ ಮೂಲಕ ಆರೋಗ್ಯವಂತ ರಾಜ್ಯದ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಾನರ್ಹರು.
ಯೋಜನೆಯನ್ನು ಪ್ರಾಮಾಣಿಕವಾಗಿ ಜನರಿಗೆ ತಲುಪಿಸಬೇಕಾದ ಗುರುತರವಾದ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಪ್ರಸವದ ಬಳಿಕ ಉಂಟಾಗಿರುವ ತಾಯಂದಿರ, ಶಿಶುಗಳ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಹಾಗೂ ಪ್ರಸವ ಪೂರ್ವದ ಸಾವುಗಳನ್ನು ತಡೆಯುವ ನಿಟ್ಟಿನಲ್ಲಿ ಹೊಸ ಯೋಜನೆ ಮಹತ್ವ ಹೊಂದಿದೆ. ಯೋಜನೆಗೆ ಯಾವುದೇ ರೀತಿಯಲ್ಲಿ ಅಪಸ್ವರ ಬಾರದಂತೆ ಗರ್ಭಿಣಿಯರು, ಗ್ರಾಮಸ್ಥರು ಹಾಗೂ ಅಂಗನವಾಡಿ ಮೇಲ್ವಿಚಾರಕಿಯರು ಶ್ರಮಿಸಬೇಕು. ಎಲ್ಲ ಸಂದರ್ಭದಲ್ಲಿ ಊಟ ನೀಡುವಂತೆ ಅಂಗನವಾಡಿಗಳಿಗೆ ತಿಳಿಸಲಾಗಿದೆ. ಅದಲ್ಲದೆ, ಜಿಲ್ಲೆಯಲ್ಲಿ 3ಸಾವಿರ ಅಂಗನವಾಡಿಗಳು ಇದರ ವ್ಯಾಪ್ತಿಯಲ್ಲಿವೆ. ಆದಷ್ಟು ಬೇಗ ಕೆಲಸ ಆಗಬೇಕಿದೆ ಎಂದು ಹೇಳಿದರು.
ಜಿಪಂ ಅಧ್ಯಕ್ಷೆ ಸುವರ್ಣಾ ಮಲಾಜಿ ಅವರು ಗರ್ಭಿಣಿಯರಿಗೆ ಉಡಿ ತುಂಬಿ ಹರಸಿದರು. ಪೌಷ್ಟಿಕ ಆಹಾರ ಬಡಿಸಿದರು. ಎನ್‌ಇಕೆಆರ್‌ಟಿಸಿ ಅಧ್ಯಕ್ಷ ಇಲಿಯಾಸ್ ಸೇಠ ಬಾಗವಾನ್, ಎಸಿ ರಾಚಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀಕಾಂತ ಕುಲಕರ್ಣಿ, ಮಹಾಪೌರ ಶರಣಕುಮಾರ ಮೋದಿ, ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ್ ಇದ್ದರು .