ಮುಂಡಗೋಡ: ಅತೀ ಹೆಚ್ಚು ಭತ್ತದ ಬೆಳೆಯಿಂದಾಗಿ ಮುಂಡಗೋಡ ತಾಲೂಕು ಭತ್ತದ ಕಣಜವೆಂದೇ ಹೆಸರು ಪಡೆದಿತ್ತು. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಅತಿವೃಷ್ಟಿ, ಸಕಾಲದಲ್ಲಿ ಬೆಂಬಲ ಬೆಲೆ ಸಿಗದೆ ಮತ್ತು ಇನ್ನಿತರ ಕಾರಣದಿಂದ ಬಯಲುಸೀಮೆ ಬೆಳೆಯತ್ತ ಮುಖಮಾಡಿದ್ದಾರೆ.
ಭತ್ತದ ಕಣಜ ಎಂದೇ ಹೆಸರುವಾಸಿಯಾಗಿದ್ದ ಮುಂಡಗೋಡ ತಾಲೂಕಿನಲ್ಲಿ ಅನಾವೃಷ್ಟಿ ಹಾಗೂ ಇಳುವರಿ ಕಡಿಮೆಯಿಂದಾಗಿ ಮೆಕ್ಕೆಜೋಳ ಮತ್ತು ಇನ್ನಿತರ ಬೆಳೆಯತ್ತ ರೈತರು ಮುಖ ಮಾಡಿದ್ದಾರೆ. ತಾಲೂಕಿನ ರೈತರು ಕೂರಿಗೆ ಬಿತ್ತನೆಗೆ ಹೆಚ್ಚಾಗಿ ಅಭಿಲಾಷಾ, ಎಂಟಿಯು 1001, ಜಯಾ 1010, ಐಆರ್64, ಬಳಿಸಿದರೆ ನಾಟಿ ಬಿತ್ತನೆಗೆ ಎಂಟಿಯು 1001, ಬಿಪಿಟಿ, ಜೆಜಿಎಲ್, ಆರ್ ಎನ್‌ಆರ್. ಐಆರ್ ದೊಡಗ್ಯಾ ಭತ್ತದ ತಳಿಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ತಾಲೂಕಿನಲ್ಲಿ ಸಂಪರ್ಕ ಕೇಂದ್ರವಿದೆ. ಮುಂಡಗೋಡ ರೈತ ಸಂಪರ್ಕ ಕೇಂದ್ರ ಮತ್ತು ಪಾಳಾ ರೈತ ಸಂಪರ್ಕ ಕೇಂದ್ರ. ಇದರಲ್ಲಿ ಮುಂಡಗೋಡ ಹೂಬಳಿಯಲ್ಲಿಯೇ ಹೆಚ್ಚು ಭತ್ತ ಬೆಳೆಯಲಾಗುತ್ತದೆ.
ಒಟ್ಟು ತಾಲೂಕಿನಲ್ಲಿ 11705 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ವಿಸ್ತೀರ್ಣ ಹೊಂದಿದೆ. ಇದರಲ್ಲಿ 2017-18 ನೇ ಸಾಲಿನಲ್ಲಿ 9445 ಹೆಕ್ಟೇರ್ ಪ್ರದೇಶದಲ್ಲಿ ರೈತ ಭತ್ತವನ್ನು ಬೆಳೆದಿದ್ದ. ಅದೇ ರೀತಿ 2018-19ನೇ ಸಾಲಿನಲ್ಲಿ 8012 ಹೆಕ್ಟೇರ್‌ನಲ್ಲಿ, 2019-20ರಲ್ಲಿ 6604 ಹೆಕ್ಟೇರ್, 2020-21ರಲ್ಲಿ 6385 ಹೆಕ್ಟೇರ್ ಮತ್ತು 2021-22ರಲ್ಲಿ 7425 ಹೆಕ್ಟೇರ್ ಪ್ರದೇಶದಲ್ಲಿ ರೈತರು ಭತ್ತವನ್ನು ಬೆಳೆದಿದ್ದರು. ಆದರೆ ಇದೀಗ ಭತ್ತ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ.
ಭತ್ತದ ಕಣಜವೆಂಬ ಮುಂಡಗೋಡ ತಾಲೂಕಿನ ಹೆಗ್ಗಳಿಕೆ ಉಳಿಸಬೇಕಾದ ಅವಶ್ಯಕತೆ ಇದೆ. ಮಳೆಯ ಕೊರತೆ ತಲೆ ದೋರಿದರೂ, ಭತ್ತದ ಕೃಷಿ ಜೀವಂತವಾಗಿರಬೇಕಾದರೆ ತಾಲೂಕಿನಲ್ಲಿರುವ ಅನೇಕ ಜಲಾಶಯಗಳ ಹೂಳೆತ್ತುವ ಕೆಲಸ ಆಗಬೇಕು. ಹೆಚ್ಚಿನ ನೀರು ಸಂಗ್ರಹವಾಗುವ ಇತರೆಡೆಗಳಲ್ಲಿ ಹೊಸ ಜಲಾಶಯ ನಿರ್ಮಿಸಬೇಕು. ಈ ಬಾರಿಯೇನೋ ಉತ್ತಮ ಮಳೆಯ ನಿರೀಕ್ಷೆ ಇದ್ದು, ಮುಂದಿನ ದಿನಗಳಲ್ಲಿ ಮತ್ತೆ ಅನಾವೃಷ್ಟಿ ತಲೆದೋರಿದರೆ ಭತ್ತದ ಬೆಳೆ ತಾಲೂಕಿನಲ್ಲಿ ನಶಿಸುತ್ತಾ ಹೋಗುವುದು ನಿಶ್ಚಿತ ಎಂಬುದು ಅನೇಕ ಅನುಭವಿ ಕೃಷಿಕರ ಅಭಿಪ್ರಾಯವಾಗಿದೆ.
ಕೃಷಿ ಇಲಾಖೆ ವತಿಯಿಂದ ತಾಲೂಕಿನಲ್ಲಿ ಮುಂಗಾರು ಹಂಗಾಮಿಗಾಗಿ ಪ್ರಮುಖ ಬೆಳೆಯಾದ ಭತ್ತ ಹಾಗೂ ಮೆಕ್ಕೆಜೋಳ ಬೀಜವನ್ನು ಸಹಾಯಧನದಲ್ಲಿ ರೈತರಿಗೆ ವಿತರಿಸಲು ಮುಂಡಗೋಡ ಹಾಗೂ ಪಾಳಾ ರೈತ ಸಂಪರ್ಕ ಕೇಂದ್ರಗಳಲ್ಲಿ ಮೇಲಾಧಿಕಾರಿಗಳಿಗೆ ಸರಬರಾಜು ಮಾಡಲು ಬೇಡಿಕೆ ಸಲ್ಲಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಬಿ. ಕುಲಕರ್ಣಿ ತಿಳಿಸಿದ್ದಾರೆ.
ಈ ಹಿಂದೆ ತಾಲೂಕಿನಲ್ಲಿಯೇ ವಿಶೇಷವಾಗಿ ಪಾಳಾದಲ್ಲಿ ಪ್ರಮುಖ ಬೆಳೆಯಾಗಿ ಭತ್ತ ಮತ್ತು ಮಾವು ಬೆಳೆಯುತ್ತಿದ್ದರು. ನಮ್ಮ ಭಾಗದಲ್ಲಿ ಗಿಡ್ಡ ಭತ್ತ (ಕೆಂಪು ಅಕ್ಕಿ) ತಳಿಗಳಿಗೆ ಒಳ್ಳೆಯ ದರ ಮತ್ತು ಉತ್ತಮ ಬೇಡಿಕೆ ಇತ್ತು. ಬದಲಾದ ಪರಿಸ್ಥಿತಿ ಹವಮಾನ ವೈಪರಿತ್ಯ ಹಾಗೂ ಹಳೆ ಬೀಜಗಳು ಹೋಗಿ ಹೋಸ ತಳಿಗಳು ಬಂದಿರುವುದರಿಂದ. ಭತ್ತಕ್ಕೆ ಖರ್ಚು ಹೆಚ್ಚು ಆಗುತ್ತದೆ. ಇಳುವರಿ ಪ್ರಮಾಣ ಕಡಿಮೆ. ಇದರಿಂದ ರೈತ ಬೇಸತ್ತು ತೋಟಗಾರಿಕೆಯತ್ತ ಮುಖ ಮಾಡಿದ್ದಾನೆ. ಇದಲ್ಲದೆ ಭತ್ತ ಬೆಳೆಯಲು ಈ ಭಾಗದ ಭೂಮಿ ಪೂರಕವಾಗಿಲ್ಲ. ರೈತನಿಗೆ ಸರಿಯಾದ ಸಮಯದಲ್ಲಿ ಬೆಂಬಲಬೆಲೆ ಸಿಗುತ್ತಿಲ್ಲ. –
ಮಹೇಶ ಹೊಸಕೊಪ್ಪ, ರೈತ ಮುಖಂಡ ಪಾಳಾ
-ಮುನೇಶ ತಳವಾರ