ಚಿತ್ರರಂಗಕ್ಕೆ ಹೊಸದಾಗಿ ಬರುವವರು ತಮ್ಮ ಸಿನಿಮಾದ ಟ್ರೇಲರ್ ಮೂಲಕ ಗುರುತಿಸಿಕೊಳ್ಳಲು, ಪ್ರೇಕ್ಷಕರಿಗೆ ಹತ್ತಿರವಾಗಲು ಪ್ರಯತ್ನಿಸುತ್ತಾರೆ. ಚಿತ್ರದ ಟ್ರೇಲರ್ ಕ್ಲಿಕ್ ಆದರೆ, ಸಿನಿಮಾದ ಬಗ್ಗೆ ಪ್ರೇಕ್ಷಕರಿಗೆ ಕುತೂಹಲ ಹುಟ್ಟಬಹುದೆಂಬ ನಂಬಿಕೆ ಹೊಸಬರದು. ಆದರೆ, ಇಲ್ಲೊಂದು ತಂಡ ತಮ್ಮ ಚಿತ್ರದ ಟೈಟಲ್‌ಗಾಗಿಯೇ 22 ನಿಮಿಷದ ಪ್ರಮೋಶನಲ್ ವಿಡಿಯೋವೊಂದನ್ನು ಮಾಡಿದೆ.
ಈ ಮೂಲಕ ತಾವೇನು ಮಾಡಲು ಹೊರಟಿದ್ದೀವಿ ಎಂದು ಹೇಳುವ ಜೊತೆಗೆ ಪ್ರೋತ್ಸಾಹಿಸಿ ಎಂದು ಪ್ರೇಕ್ಷಕರನ್ನು ಕೇಳಿಕೊಂಡಿದೆ. ಹೀಗೆ ಟೈಟಲ್‌ಗಾಗಿ ವಿಡಿಯೋ ಮಾಡಿದ್ದು “ರೂಪಾಯಿ’ ತಂಡ. “ರೂಪಾಯಿ’ ಎಂಬ ಸಿನಿಮಾವೊಂದು ತಯಾರಾಗುತ್ತಿದ್ದು, ಸಂಪೂರ್ಣ ಹೊಸಬರೇ ಈ ಸಿನಿಮಾದಲ್ಲಿದ್ದಾರೆ. ವಿನೋದ್‌ನಾಗ್ ಈ ಸಿನಿಮಾದ ನಿರ್ದೇಶನದ ಜೊತೆಗೆ ನಾಯಕರಾಗಿಯೂ ನಟಿಸುತ್ತಿದ್ದಾರೆ.
ಹೊಸಬರು ಏನು ಮಾಡಬಹುದು, ಅವರಲ್ಲಿ ಪ್ರತಿಭೆ ಇದೆಯೇ ಎಂಬುದನ್ನು ತೋರಿಸುವ ಸಲುವಾಗಿ ಈ ವಿಡಿಯೋ ಮಾಡಿದ್ದಾಗಿ ಹೇಳುತ್ತಾರೆ ನಾಗ್. “ಚಿತ್ರರಂಗಕ್ಕೆ ದಿನದಿಂದ ದಿನಕ್ಕೆ ಸಾಕಷ್ಟು ಮಂದಿ ಹೊಸಬರು ಬರುತ್ತಿದ್ದಾರೆ. ಹೀಗಿರುವಾಗ ಹೊಸಬರಾದ ನಾವು ಏನು ಮಾಡುತ್ತಿದ್ದೇವೆ, ಏನು ಮಾಡಲು ಹೊರಟಿದ್ದೇವೆ ಎಂಬುದನ್ನು ಜನರಿಗೆ ಹೇಳಬೇಕಾಗುತ್ತದೆ. ಆ ಪ್ರಯತ್ನದ ಹಿನ್ನೆಲೆಯಲ್ಲಿ ಈ ವಿಡಿಯೋ ಮಾಡಿದ್ದೇವೆ.
ಚಿತ್ರದ ಟೈಟಲ್ ಇಟ್ಟುಕೊಂಡು ಅದಕ್ಕೊಂದು ಸ್ಕ್ರಿಪ್ಟ್ ಮಾಡಿ, ಚಿತ್ರೀಕರಣ ಮಾಡಿದ್ದೇವೆ. ಈ ವಿಡಿಯೋ ನೋಡಿದಾಗ ಹೊಸಬರಿಗೆ ಟ್ಯಾಲೆಂಟ್ ಇದೆಯೋ ಇಲ್ಲವೋ ಎಂದು ಗೊತ್ತಾಗಬಹುದು. ಜನ ನಮ್ಮನ್ನು ನಂಬಬೇಕು. ಸುಖಾಸುಮ್ಮನೆ ಯಾರೂ ನಂಬೋದಿಲ್ಲ. ಹಾಗಾಗಿಯೇ ನಮ್ಮ ಕೆಲಸವನ್ನು ತೋರಿಸುವ ಸಲುವಾಗಿ “ರೂಪಾಯಿ’ ಟೈಟಲ್ ಪ್ರಮೋಶನಲ್ ವಿಡಿಯೋ ಮಾಡಲು ಮುಂದಾದೆವು’ ಎಂದು ವಿವರ ಕೊಟ್ಟರು ನಿರ್ದೇಶಕ ವಿನೋದ್ ನಾಗ್.
22 ನಿಮಿಷದ ವಿಡಿಯೋಗೆ ಸಿನಿಮಾಕ್ಕೂ ಸಂಬಂಧವಿಲ್ಲವಂತೆ. ಇಲ್ಲಿ ಅವರು ಹಣ ಮನುಷ್ಯನ ಜೀವನದಲ್ಲಿ ಏನೆಲ್ಲಾ ಪ್ರಭಾವ ಬೀರುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಮಾಡುತ್ತಿದ್ದಾರಂತೆ. ಚಿತ್ರದಲ್ಲಿ ಇವರ ಜೊತೆ ಮೈತ್ರಿ ಜಗದೀಶ್, ರಾಮ್ ಚಂದನ್ ಕೂಡಾ ನಾಯಕರಾಗಿ ನಟಿಸುತ್ತಿದ್ದಾರೆ. ಈಗಾಗಲೇ 10 ದಿನಗಳ ಕಾಲ ಚಿತ್ರೀಕರಣ ಕೂಡಾ ಆಗಿದೆ. ಚಿತ್ರದಲ್ಲಿ ಕೃಷಿ ತಾಪಂಡ ನಾಯಕಿ. “ಬಿಗ್‌ಬಾಸ್’ನಿಂದ ಬಂದ ನಂತರ ಕೇಳಿದ ಕಥೆಯಂತೆ. ಇಲ್ಲಿ ಅವರಿಗೂ ಮಾಸ್ ಪಾತ್ರ ಸಿಕ್ಕಿದೆಯಂತೆ.
ಮಧ್ಯಮ ವರ್ಗದ ಹುಡುಗಿಯಾಗಿ ಕಾಣಿಸಿಕೊಳ್ಳುತ್ತರುವ ಕೃಷಿ ಈ ಚಿತ್ರದಲ್ಲಿ ನಾಯಕರ ಜೊತೆ ಸೇರಿ ಫೈಟ್ ಕೂಡಾ ಮಾಡುತ್ತಾರಂತೆ. ಅದಕ್ಕಾಗಿ ತರಬೇತಿ ಪಡೆಯುತ್ತಿರುವುದಾಗಿ ಹೇಳಿದರು. ಚಿತ್ರವನ್ನು ಮಂಜುನಾಥ್ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ನಾಗಾರ್ಜುನ್ ಛಾಯಾಗ್ರಹಣ, ಆನಂದರಾಜ್‌ವಿಕ್ರಮ್ ಸಂಗೀತವಿದೆ. ಅಂದಹಾಗೆ, ನಿರ್ದೇಶಕ ವಿನೋದ್ ನಾಗ್, ಹಿರಿಯ ನಿರ್ದೇಶಕ ಎಚ್. ಮೂರ್ತಿಯವರ ಜೊತೆ ಸಹಾಯಕ ನಿರ್ದೇಶಕರಾಗಿ ದುಡಿದಿದ್ದಾರೆ. ಹಾಗಾಗಿ, ಶಿಷ್ಯನ ಸಿನಿಮಾಕ್ಕೆ ಶುಭ ಕೋರಲು ಅವರೂ ಬಂದಿದ್ದರು.